ADVERTISEMENT

ರಾಜ್ಯೋತ್ಸವ ಸರಳ ಆಚರಣೆಗೆ ನಿರ್ಧಾರ

ಸಂತ್ರಸ್ತರ ಸಂಕಷ್ಟಕ್ಕೆ ಮಿಡಿದ ಕನ್ನಡಪರ ಸಂಘಟನೆಗಳ ಮುಖಂಡರು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 21:43 IST
Last Updated 14 ಅಕ್ಟೋಬರ್ 2019, 21:43 IST
ಬೆಳಗಾವಿಯಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮಾತನಾಡಿದರು
ಬೆಳಗಾವಿಯಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮಾತನಾಡಿದರು   

ಬೆಳಗಾವಿ: ‘ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ನಿರ್ಬಂಧವಿಲ್ಲ. ಆದರೆ, ಪ್ರವಾಹದಿಂದ ಆಗಿರುವ ಜೀವಹಾನಿ ಗಮನದಲ್ಲಿಟ್ಟುಕೊಂಡು ಸರಳವಾಗಿ ಆಚರಿಸಲಾಗುವುದು. ಹೋಳಿಗೆ ಊಟ ಮತ್ತು ಚನ್ನಮ್ಮ ಪ್ರತಿಮೆಗೆ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ಕಾರ್ಯಕ್ರಮ ಕೈಬಿಡಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದರು.

ಸೋಮವಾರ ನಡೆದ ರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಪ್ರವಾಹದಿಂದ 32 ಜನರ ಜೀವಹಾನಿಯಾಗಿದೆ. ಸಾವಿರಾರು ಕೋಟಿ ರೂಪಾಯಿ ಹಾನಿಯಾಗಿದೆ. ಈ ಪರಿಸ್ಥಿತಿ ಅರಿತು ಆಚರಿಸಬೇಕಾಗಿದೆ. ನಮ್ಮೊಂದಿರುವ ಯಾರ ಭಾವನೆಗಳಿಗೂ ಧಕ್ಕೆ ತಾರದಂತೆ ಕನ್ನಡ ರಾಜ್ಯೋತ್ಸವ ಆಚರಿಸೋಣ’ ಎಂದು ಕೋರಿದರು.

ADVERTISEMENT

‘ಜನಪದ ಕಲಾತಂಡಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಂಡು ಎಲ್ಲ ಕನ್ನಡಪರ ಸಂಘಟನೆಗಳ ಆಶಯದಂತೆ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸೋಣ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

ಸಂಘಟನೆಗಳ ಸಹಮತ:‘ಭೀಕರ ಪ್ರವಾಹದಿಂದ ತೀವ್ರ ಹಾನಿಯಾಗಿರುವ ಹಿನ್ನೆಲೆಯಲ್ಲಿ ವೈಭವದ ರಾಜ್ಯೋತ್ಸವಕ್ಕೆ ಮನಸಾಕ್ಷಿ ಒಪ್ಪುವುದಿಲ್ಲ. ಆದರೆ, ಅರ್ಥಪೂರ್ಣ ಹಾಗೂ ಸರಳವಾಗಿ ಆಚರಿಸೋಣ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದರು.

‘ಅಂಗಡಿ, ಮುಂಗಟ್ಟುಗಳಲ್ಲಿನ ಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ಹಾಕಿಸಲು ಪಾಲಿಕೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಪ್ರತ್ಯೇಕವಾಗಿ ಸಭೆ ನಡೆಸಿ:ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಮಹದೇವ ತಳವಾರ, ‘ಬೆಳಗಾವಿ ಗಡಿ ಜಿಲ್ಲೆಯಾಗಿರುವುದರಿಂದ ರಾಜ್ಯೋತ್ಸವ ಆಚರಿಸೋಣ. ಅದ್ಧೂರಿತನ ಬೇಡ. ಹಣ ಸಂಗ್ರಹಿಸಿ ಸಂತ್ರಸ್ತರಿಗೆ ನೀಡಲು ಮುಂದಾಗಬೇಕು. ಕನ್ನಡ ಅನುಷ್ಠಾನ ಮತ್ತು ಕನ್ನಡಪರ ಸಂಘಟನೆಗಳ ಕುಂದುಕೊರತೆಗಳನ್ನು ಆಲಿಸಲು ಪ್ರತ್ಯೇಕ ಸಭೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಮುಖಂಡ ಶ್ರೀನಿವಾಸ ತಾಳೂಕರ ಮಾತನಾಡಿ, ‘ಗಡಿಭವನ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಇದನ್ನು ಪುನರುಜ್ಜೀವನಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು. ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ ಹೆಸರಿಡಬೇಕು’ ಎಂದು ಆಗ್ರಹಿಸಿದರು.

‘ಡಾಲ್ಬಿ ಬದಲು ಜನಪದ ಕಲಾತಂಡಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಬೇಕು. ದಸರಾ ಮಾದರಿಯಲ್ಲಿ ಬೆಳಗಾವಿ ರಾಜ್ಯೋತ್ಸವಕ್ಕೆ ವಿಶೇಷ ಅನುದಾನ ಒದಗಿಸಬೇಕು’ ಎಂದು ಕರವೇ ಮುಖಂಡ ಮಹಾಂತೇಶ ರಣಗಟ್ಟಿಮಠ ಒತ್ತಾಯಿಸಿದರು.‌

ಪೊಲೀಸ್ ಭದ್ರತೆ:‘ಸ್ತಬ್ಧಚಿತ್ರ ಹಾಗೂ ರೂಪಕಗಳಿಗೆ ನೀಡುವ ವಾಹನಗಳನ್ನು ಸಕಾಲಕ್ಕೆ ಒದಗಿಸಬೇಕು’ ಎಂದು ಮುಖಂಡ ಭಾವಕಣ್ಣ ಕೋರಿದರು.

ಡಿಸಿಪಿ ಸೀಮಾ ಲಾಟ್ಕರ್‌‌, ‘ಪ್ರತಿ ಸ್ತಬ್ಧಚಿತ್ರಕ್ಕೆ ಪೊಲೀಸ್ ಭದ್ರತೆ ನೀಡಲಾಗುವುದು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಕನ್ನಡ ಹೋರಾಟಗಾರ ಸಿದ್ದನಗೌಡ ಪಾಟೀಲ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪ್ರೀತಂ ನಸಲಾಪುರೆ, ಕನ್ನಡಪರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.