ADVERTISEMENT

ಗಗನಕ್ಕೇರಿದ ಹಸಿ ಶುಂಠಿ ದರ

ಬೆಳಗಾವಿಯಲ್ಲಿ ಪ್ರತಿ ಕೆ.ಜಿ.ಗೆ ₹250ರಿಂದ ₹300

​ಪ್ರಜಾವಾಣಿ ವಾರ್ತೆ
Published 20 ಜುಲೈ 2023, 6:07 IST
Last Updated 20 ಜುಲೈ 2023, 6:07 IST
ಬೆಳಗಾವಿಯ ರವಿವಾರ ಪೇಟೆಯಲ್ಲಿ ಹಸಿ ಶುಂಠಿ ಮಾರಾಟ ಮಾಡುತ್ತಿರುವ ವ್ಯಾಪಾರಿ ಫೈಸ್‌ ಅತ್ತಾರ್‌–   ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ
ಬೆಳಗಾವಿಯ ರವಿವಾರ ಪೇಟೆಯಲ್ಲಿ ಹಸಿ ಶುಂಠಿ ಮಾರಾಟ ಮಾಡುತ್ತಿರುವ ವ್ಯಾಪಾರಿ ಫೈಸ್‌ ಅತ್ತಾರ್‌–   ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ   

ಇಮಾಮ್‌ಹುಸೇನ್‌ ಗೂಡುನವರ

ಬೆಳಗಾವಿ: ಟೊಮೆಟೊ ದರ ಏರಿಕೆಯ ನಡುವೆ ಹಸಿ ಶುಂಠಿ ದರವೂ ಗಗನಕ್ಕೇರಿದ್ದು ಪ್ರತಿ ಕೆ.ಜಿಗೆ ₹250ರಿಂದ ₹300 ದರದಲ್ಲಿ ಮಾರಾಟವಾಗುತ್ತಿದೆ. ಮಳೆ ಕೊರತೆಯಿಂದಾಗಿ ಇಳುವರಿ ಕುಂಠಿತವಾಗಿದ್ದು ದರ ಹೆಚ್ಚಿದೆ.

‘ಕೇರಳ,ಮಹಾರಾಷ್ಟ್ರ ಮತ್ತು ಶಿವಮೊಗ್ಗದಿಂದ ಹಸಿ ಶುಂಠಿ ತರಿಸುತ್ತೇವೆ. ಕಳೆದ ವಾರ ಪ್ರತಿ ಕೆ.ಜಿಗೆ ₹230ರವರೆಗೆ ಮಾರಾಟವಾಗಿತ್ತು.  ಈಗ ಏಕಾಏಕಿಯಾಗಿ ಹೆಚ್ಚಳವಾಗಿದೆ’ ಎಂದು ರವಿವಾರ ಪೇಟೆ ವ್ಯಾಪಾರಿ ಅಮರ್ ಕುಗಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ನಮ್ಮ ತಂದೆಯವರು 40 ವರ್ಷಗಳಿಂದ ಹಸಿ ಶುಂಠಿ, ಬೆಳ್ಳುಳ್ಳಿ ವ್ಯಾಪಾರ ಮಾಡುತ್ತಿದ್ದಾರೆ. ಹಿಮಾಚಲ ಪ್ರದೇಶದಿಂದ ಹಸಿಶುಂಠಿ ಆವಕಾಗುತ್ತಿದೆ. ಪ್ರತಿವರ್ಷ ಸಾಮಾನ್ಯವಾಗಿ ಕೆ.ಜಿಗೆ ₹50ರಿಂದ ₹100 ದರವಿರುತ್ತಿತ್ತು. ಕೆಲವೊಮ್ಮೆ ₹150ರವರೆಗೆ ಏರಿಕೆಯಾದ ಉದಾಹರಣೆಯಿದೆ. ಆದರೆ, ಇದೇ ವರ್ಷ ಹೆಚ್ಚಿದೆ. ಚೌಕಾಸಿ ಮಧ್ಯೆಯೂ ಜನರು ಖರೀದಿಸುತ್ತಿದ್ದಾರೆ’ ಎನ್ನುತ್ತಾರೆ ಮತ್ತೊಬ್ಬ ವ್ಯಾಪಾರಿ ಫೈಸ್‌ ಅತ್ತಾರ್.

‘ಕೋವಿಡ್‌ ಕಾಲದಲ್ಲಿ ಹಾಗೂ ನಂತರ, ಮನೆಯಲ್ಲಿ ಕಷಾಯ ತಯಾರಿಕೆಗೆ ಜನರು ಹೆಚ್ಚಾಗಿ ಹಸಿ ಶುಂಠಿ ಖರೀದಿಸುತ್ತಿದ್ದಾರೆ. ಸಸ್ಯಾಹಾರಿ ಹಾಗೂ ಮಾಂಸಾಹಾರಿ ಖಾದ್ಯಗಳನ್ನು ತಯಾರಿಸಲು ಹೋಟೆಲ್‌ನವರಿಂದಲೂ ಬೇಡಿಕೆಯಿದೆ. ನಗರದ ವಿವಿಧೆಡೆಯಿರುವ ಅಂಗಡಿಗಳಲ್ಲಿ ಮಸಾಲೆ ಚಹಾ ತಯಾರಿಕೆಗೂ ಬಳಕೆಯಾಗುತ್ತಿದೆ. ಈಗ ಮಳೆಗಾಲವಾದ್ದರಿಂದ ಗ್ರಾಹಕರಿಂದ ಬೇಡಿಕೆ ಹೆಚ್ಚಿದ್ದು ದರ ಏರಿಕೆಯಾಗಿದೆ’ ಎಂದು ಅವರು ಹೇಳಿದರು.

‘ನಾವು ಮನೆಯಲ್ಲಿ ಚಹಾ, ಕಷಾಯ, ವಿವಿಧ ಚಟ್ನಿ, ಮಸಾಲೆ ಪದಾರ್ಥಗಳ ತಯಾರಿಕೆಗೆ ಹಸಿಶುಂಠಿ ಕಡ್ಡಾಯವಾಗಿ ಬಳಸುತ್ತೇವೆ. ಈಗ ದರ ಏಕಾಏಕಿಯಾಗಿ ಹೆಚ್ಚಿದೆ. ಆದರೂ, ಅನಿವಾರ್ಯವಾಗಿ ಬಳಸುತ್ತಿದ್ದೇವೆ’ ಎನ್ನುತ್ತಾರೆ ಸ್ಥಳೀಯ ಗ್ರಾಹಕ ನಾಗರಾಜ ದೇಸಾಯಿ.

ಹೋಟೆಲ್‌ನಲ್ಲಿ ತಯಾರಿಸುವ ಬಹುತೇಕ ಖಾದ್ಯಗಳಿಗೆ ಹಸಿಶುಂಠಿ ಬಳಸಲಾಗುತ್ತದೆ. ತರಕಾರಿಗಳ ದರ ಹೆಚ್ಚಿದೆ. ಈಗ ಹಸಿಶುಂಠಿ ದರವೂ ದುಪ್ಪಟ್ಟಾಗಿರುವುದರಿಂದ ಖಾದ್ಯಗಳ ದರ ಹೆಚ್ಚಿಸಬೇಕಾದ ಅನಿವಾರ್ಯತೆ ಬಂದಿದೆ –ದುರ್ಗಪ್ಪ ನಾಯ್ಕ ಹೋಟೆಲ್‌ ಉದ್ಯಮಿ ಬೆಳಗಾವಿ

ನಮ್ಮಲ್ಲಿ 15 ದಿನಗಳ ಹಿಂದೆ ಪ್ರತಿ ಕೆ.ಜಿಗೆ ಶುಂಠಿ ದರ ₹230 ಇತ್ತು. ಈಗ ₹250 ದಾಟಿದೆ -ಸುರೇಶ ಪುಣ್ಯನ್ನವರ ಮಾರಾಟ ಸಹಾಯಕ ಬೆಳಗಾವಿ ಎಪಿಎಂಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.