
ಸಂಕೇಶ್ವರ: ಅಭಿವೃದ್ಧಿ ಕಾರ್ಯಕ್ರಮಗಳಿಗೆ ಇಲಾಖೆಗಳಲ್ಲಿ ಅನುದಾನ ಕೊರತೆ ಇದ್ದರೂ, ನಿರಂತರ ಪ್ರಯತ್ನದಿಂದ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಲಾಗುತ್ತಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಪಟ್ಟಣದ ಸಮೀಪದ ಬೋರಗಲ್-ನಿಡಸೋಸಿ ಮಾರ್ಗದ ಹಳ್ಳಗಳ ಮೇಲಿನ ರಸ್ತೆಗೆ ಲೋಕೋಪಯೋಗಿ ಇಲಾಖೆಯ ₹75 ಲಕ್ಷ ಅನುದಾನದಲ್ಲಿ ಬಾಕ್ಸ್ ಕಲ್ವರ್ಟ್ ನಿರ್ಮಾಣ ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರ ಬಹುಕಾಲದ ಬೇಡಿಕೆಯಂತೆ ಬೋರಗಲ್-ನಿಡಸೋಸಿ ಮಾರ್ಗದ ಹಳ್ಳಗಳ ಮೇಲಿನ ರಸ್ತೆಗೆ ಕಲ್ವರ್ಟ್ ಕಾಮಗಾರಿಗೆ ಚಾಲನೆ ನೀಡಿದ್ದು, ಬೆಳವಿ ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಘಟಕ, ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದೇವೆ ಎಂದರು.
ಹಿರಣ್ಯಕೇಶಿ ನದಿಯ ಐದು ಬ್ಯಾರೇಜ್ ಕಾಮಗಾರಿಗಳು ಸುಮಾರು ₹60 ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದು, ಕಣಗಲಾ ಬೃಹತ್ ಕೈಗಾರಿಕಾ ಪ್ರದೇಶದ ಫೇಸ್-2 ಹಂತದಲ್ಲಿ 600 ಎಕರೆ ಭೂಸ್ವಾಧೀನ ಕೈಗೊಳ್ಳಲಾಗಿದೆ. ಹಿಡಕಲ್ ಡ್ಯಾಂನ ಉದ್ಯಾನಕಾಶಿ ಫೇಸ್-1 ಮತ್ತು 2 ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, ಫೇಸ್-3 ಕಾಮಗಾರಿ ಈಗಾಗಲೇ ಪ್ರಾರಂಭಗೊಂಡಿದೆ ಎಂದು ಹೇಳಿದರು.
ಪ್ರಶಾಂತ ಪಾಟೀಲ, ರಾಯಪ್ಪ ಯಶವಂತ, ಸುಭಾಷ್ ಮಗದುಮ, ಗುರುನಾಥ ಸಂಕಣ್ಣವರ, ಬಸವಣ್ಣಿ ಮಗದುಮ, ಚಿದಾನಂದ ಯಶವಂತ, ಶ್ರೀಕಾಂತ ಸನದಿ, ದುಂಡಪ್ಪ ಹೆದ್ದುರಿ, ಸದಾಶಿವ ಕರೋಶಿ, ಮಹೇಶ ಯಶವಂತ, ಭೀಮಪ್ಪ ದುರ್ಗಪ್ಪಗೋಳ, ಪ್ರವೀಣ ಚೌಗಲಾ ಹಾಗೂ ಗುತ್ತಿಗೆದಾರ ಮಲ್ಲಪ್ಪ ಅಂಕಲೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.