ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಎರಡು ದಿನಗಳ ಹಿಂದೆ ಜನ್ಮ ದಿನ ಆಚರಿಸಿಕೊಂಡ ಕಿತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮಹಾಂತೇಶ ದೊಡ್ಡಗೌಡರ ದಂಪತಿ ಮೇಲೆ ಪೊಲೀಸರು ಪುಷ್ಪವೃಷ್ಟಿ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಟೀಕೆಗೊಳಗಾಗಿದೆ.
ಪಟ್ಟಣದಲ್ಲಿರುವ ಅವರ ಮನೆಯಲ್ಲಿ ಶಾಸಕ ಮತ್ತು ಅವರ ಪತ್ನಿ ಮಂಜುಳಾ ಅವರನ್ನು ರಾಜ–ಮಹಾರಾಣಿಯಂತೆ ಕೂರಿಸಿ ಪುಷ್ಪವೃಷ್ಟಿ ಮಾಡಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
‘ಶಾಸಕರು ಪೊಲೀಸರಿಂದ ಹೂಗುಚ್ಚ ಸ್ವೀಕರಿಸಬೇಕಿತ್ತು. ಅದರ ಬದಲಾಗಿ ಪುಷ್ಪವೃಷ್ಟಿ ಮಾಡಿಸಿಕೊಂಡಿರುವುದು ಸರಿಯಾದ ಕ್ರಮವಲ್ಲ. ಪೊಲೀಸರೂ ಹಾಗೆ ವರ್ತಿಸಿರುವುದು ಖಂಡನೀಯ’ ಎಂದು ಇಲ್ಲಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳು ಸೇವಕರಂತೆ ಶಾಸಕರ ಮನೆ ಬಾಗಿಲಿಗೆ ತೆರಳಿ ಈ ರೀತಿ ಹುಟ್ಟುಹಬ್ಬಕ್ಕೆ ಶುಭ ಹಾರೈಸಿರುವುದು ನಗೆಪಾಟಲಿಗೀಡಾಗಿದೆ. ಆ ವೇಳೆ ಡಿವೈಎಸ್ಪಿ, ಸಿಪಿಐ, ಪಿಎಸ್ಐ, ಎಸ್ಐ, ಕಾನ್‌ಸ್ಟೆಬಲ್‌ಗಳು ಪಾಲ್ಗೊಂಡಿದ್ದರು.
‘ವಿಡಿಯೊ ಗಮನಿಸಿದ್ದೇನೆ. ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬೈಲಹೊಂಗಲ ಡಿಎಸ್ಪಿ ಶಿವಾನಂದ ಕಟಗಿ, ಸಿಪಿಐ ಯು.ಎಚ್. ಸಾತೇನಹಳ್ಳಿ, ನೇಸರಗಿ ಠಾಣೆ ಪಿಎಸ್‌ಐ ವೈ.ಎಲ್. ಶೀಗಿಹಳ್ಳಿ ಹಾಗೂ ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.