ADVERTISEMENT

₹ 30 ಲಕ್ಷಕ್ಕೂ ಅಧಿಕ ಮೊತ್ತದ ನಗ, ನಾಣ್ಯ ಕಳವು

ಪ್ರವಾಸಕ್ಕೆ ಹೋಗಿದ್ದ ಗುತ್ತಿಗೆದಾರರ ಮನೆಗೆ ಕನ್ನ, ಒಬ್ಬರ ಮನೆಯಲ್ಲೇ ಎರಡು ಬಾರಿ ಕಳವು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 16:23 IST
Last Updated 19 ಆಗಸ್ಟ್ 2022, 16:23 IST

ನಿಪ್ಪಾಣಿ: ಇಲ್ಲಿನ ಪಂತ ನಗರದಲ್ಲಿ ಗುರುವಾರ ಗುತ್ತಿಗೆದಾರ ಚಂದ್ರಶೇಖರ ಜೋನಿ ಅವರ ಮನೆಯಿಂದ ₹ 25 ಲಕ್ಷ ಮೌಲ್ಯದ ಚಿನ್ನಾಭರಣ, ₹60 ಸಾವಿರ ಮೌಲ್ಯದ ಬೆಳ್ಳಿ ಸಾಮಗ್ರಿ ಹಾಗೂ ₹5 ಲಕ್ಷ ನಗದ ಕಳವು ಮಾಡಲಾಗಿದೆ.

ಕುಟುಂಬದವರು ಪ್ರವಾಸಕ್ಕೆ ಹೋಗಿದ್ದನ್ನು ಖಚಿತ ಮಾಡಿಕೊಂಡ ಕಳ್ಳರು ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಮನೆಯ ಸದಸ್ಯರು ಶುಕ್ರವಾರ ಮರಳಿ ಬಂದ ಮೇಲೆಯೇ ಪ್ರಕರಣ ಬೆಳಕಿಗೆ ಬಂದಿದೆ.

ಬೆಳಗಾವಿ ತಾಲ್ಲೂಕಿನ ಪಂತ ಬಾಳೆಕುಂದ್ರಿ ಮೂಲದ ಚಂದ್ರಶೇಖರ ಇಲ್ಲಿನ ಸಮುದಾಯ ಆಸ್ಪತ್ರೆ (ಎಂಜಿಎಂ) ಹಿಂಬದಿ ಮನೆಯಲ್ಲಿ ವಾಸವಾಗಿದ್ದರು. ಮನೆಗೆ ಬೀಗ ಜಡಿದು ಪ್ರವಾಸಕ್ಕೆಂದು ಮಹಾರಾಷ್ಟ್ರದ ಅಂಬೋಲಿಗೆ ಹೋಗಿದ್ದರು. ಮಧ್ಯಾಹ್ನ ಸುಮಾರು 2.30 ರಿಂದ 4ರ ಸಮದಲ್ಲಿ ಕಳ್ಳರು ಹಿಂಬದಿಯ ಬಾಗಿಲಿನಿಂದ ಪ್ರವೇಶಿಸಿ ಹಣ ಮತ್ತು ಒಡವೆ ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪಿಎಸ್‍ಐ ಕೃಷ್ಣವೇಣಿ ಗುರ್ಲಹೊಸೂರ ಮತ್ತು ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದರು. ಚಿಕ್ಕೋಡಿ ಡಿವೈಎಸ್ಪಿ ಬಸವರಾಜ ಯಲಿಗಾರ, ಸ್ಥಳೀಯ ಆರಕ್ಷಕ ವೃತ್ತ ನಿರೀಕ್ಷಕ ಸಂಗಮೇಶ ಶಿವಯೋಗಿ ಭೇಟಿ ನೀಡಿದರು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಯಿಸಿ ತನಿಖೆ ನಡೆಸಲಾಯಿತು.

ಎರಡನೇ ಬಾರಿ ಕಳವು: ಅಚ್ಚರಿಯೆಂದರೆ, ಚಂದ್ರಶೇಖರ ಅವರು ಪಂತ ನಗರಕ್ಕೆ ಬರುವ ಮುನ್ನ, ಹಣ್ಣು ಮಾರ್ಕೆಟ್ ಪರಿಸರದಲ್ಲಿ ವಾಸವಿದ್ದರು. ಅಲ್ಲಿ ಕೂಡ ಕಳ್ಳರು ಅವರ ಮನೆಗೆ ನುಗ್ಗಿ ಕಳವು ಮಾಡಿದ್ದರು. ಮತ್ತೆ ಅವರ ಮನೆಯನ್ನೇ ಹುಡುಕಿ ಕಳವು ಮಾಡಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಕಳೆದ 15 ದಿನಗಳಲ್ಲಿ ಪಂತನಗರದಲ್ಲಿ ಎರಡು ಮನೆಯಲ್ಲಿ ಕಳ್ಳತನ, ಒಂದು ದ್ವಿಚಕ್ರ ವಾಹನ ಮತ್ತು ಒಂದು ಬೈಸಿಕಲ್ ಕಳ್ಳತನ ಮಾಡಿದ್ದು ಸ್ಥಳೀಯರಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ ಎಂದು ಜನ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.