ADVERTISEMENT

ತಿರಂಗಾ ಯಾತ್ರೆ 15ರಿಂದ: ಕಡಾಡಿ

​ಪ್ರಜಾವಾಣಿ ವಾರ್ತೆ
Published 14 ಮೇ 2025, 10:18 IST
Last Updated 14 ಮೇ 2025, 10:18 IST
   

ಬೆಳಗಾವಿ: ‘ಪಾಕಿಸ್ತಾನದಲ್ಲಿ ಉಗ್ರರ ನೆಲೆಗಳ ಮೇಲೆ ಭಾರತ ನಡೆಸಿದ ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಮೇ 15ರಿಂದ 17ರವರೆಗೆ ರಾಜ್ಯದಾದ್ಯಂತ ಜಿಲ್ಲಾ ಹಂತದಲ್ಲಿ ಮತ್ತು ಮೇ 18ರಿಂದ 20ರವರೆಗೆ ಮಂಡಲ ಹಂತದಲ್ಲಿ ತಿರಂಗಾ ಯಾತ್ರೆ ಆಯೋಜಿಸಲಾಗಿದೆ’ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.

ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗಡಿಯಲ್ಲಿ ದೇಶ ಕಾಯುತ್ತಿರುವ ಸೈನಿಕರು ಮತ್ತು ಅವರ ಕುಟುಂಬದವರಲ್ಲಿ ನೈತಿಕ ಸ್ಥೈರ್ಯ ತುಂಬಲು ‘ರಾಷ್ಟ್ರಕ್ಕಾಗಿ ನಾಗರಿಕರು’ ಅಭಿಯಾನದಡಿ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಪಕ್ಷಾತೀತವಾದ ಯಾತ್ರೆಯಲ್ಲಿ ಬಿಜೆಪಿ ಕಾರ್ಯಕರ್ತರು ಮಾತ್ರವಲ್ಲದೆ; ವಿವಿಧ ವೃತ್ತಿಪರರು, ಮಾಜಿ ಸೈನಿಕರು, ರೈತರು ಸೇರಿದಂತೆ ಎಲ್ಲ ವರ್ಗಗಳ ಜನರು ಪಾಲ್ಗೊಳ್ಳಬಹುದು’ ಎಂದರು.

‘ಪಾಕಿಸ್ತಾನದ ಮೇಲೆ ನಡೆಸಿದ ಕಾರ್ಯಾಚರಣೆ ಸಫಲವಾಗಿದ್ದು, ರಕ್ಷಣಾ ಕ್ಷೇತ್ರದಲ್ಲಿ ಭಾರತ ಆತ್ಮನಿರ್ಭರವಾಗಿದೆ. ಆದರೆ, ಕೆಲವರು ಕಾರ್ಯಾಚರಣೆ ಬಗ್ಗೆ ಅಪಸ್ವರ ಎತ್ತುತ್ತಿರುವುದರಲ್ಲಿ ಅರ್ಥವಿಲ್ಲ. ಯುದ್ಧದಂಥ ಗಂಭೀರ ವಿಷಯಗಳ ಕುರಿತು ಸಂಸತ್ತಿನಲ್ಲಿ ಚರ್ಚಿಸಲು ಆಗುವುದಿಲ್ಲ. ವಿರೋಧ ಪಕ್ಷದವರು ಎಲ್ಲ ವಿಷಯದಲ್ಲೂ ರಾಜಕೀಯ ಮಾಡಬಾರದು’ ಎಂದರು.

ADVERTISEMENT

‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆಗೆ ಪೂರ್ಣವಿರಾಮ ಬಿದ್ದಿಲ್ಲ. ಪಾಕಿಸ್ತಾನದವರು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ಕೊಟ್ಟಿದ್ದಾರೆ. ಹಾಗಾಗಿ ಕಾರ್ಯಾಚರಣೆ ಬಗ್ಗೆ ಯಾರಾದರೂ ತಕರಾರು ತೆಗೆದರೆ, ‍ಪಾಕಿಸ್ತಾನದ ಮಾಧ್ಯಮಗಳಲ್ಲಿ ಇದನ್ನೇ ದೊಡ್ಡ ವಿಷಯವಾಗಿ ತೋರಿಸಲಾಗುತ್ತದೆ. ಇದಕ್ಕೆ ಆಸ್ಪದ ಕೊಡಬಾರದು’ ಎಂದು ಕೋರಿದರು.

‘ಭಾರತವು ಪಾಕಿಸ್ತಾನದ ಜತೆ ಯುದ್ಧ ಮಾಡುವ ವಿಚಾರದಲ್ಲಿ ಅಮೆರಿಕ ಮಧ್ಯಪ್ರವೇಶಿಸಿಲ್ಲ. ಈ ಸಂಬಂಧ ಸೇನಾ ಅಧಿಕಾರಿಗಳೇ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಬಗ್ಗೆ ಈಗ ಚರ್ಚಿಸುವ ಅಗತ್ಯವಿಲ್ಲ’ ಎಂದರು.

‘ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮೃತಪಟ್ಟ ಪ್ರವಾಸಿಗರಿಗೆ ನ್ಯಾಯ ಸಿಕ್ಕಿಲ್ಲ’ ಎಂಬ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕಡಾಡಿ, ‘ಈ ಘಟನೆಯಲ್ಲಿ ಮೃತಪಟ್ಟವರಿಗೆ ಪೂರ್ಣ ಪ್ರಮಾಣದಲ್ಲಿ ನ್ಯಾಯ ಸಿಕ್ಕಿಲ್ಲ. ಹೋದ ಜೀವ ವಾಪಸ್‌ ಕೂಡ ಬರುವುದಿಲ್ಲ. ಆದರೆ, ಇಂಥ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು’ ಎಂದು ಹೇಳಿದರು.

ಪಕ್ಷದ ಮಹಾನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ಮಹಾನಗರ ಪಾಲಿಕೆ ಸದಸ್ಯರಾದ ಹನುಮಂತ ಕೊಂಗಾಲಿ, ರಾಜಶೇಖರ ಡೋಣಿ, ಈರಯ್ಯ ಖೋತ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.