ಬೆಳಗಾವಿ: ನಗರದ ಖಡಕ್ ಗಲ್ಲಿಯಲ್ಲಿ ಈಚೆಗೆ ಉರುಸ್ ವೇಳೆ ಸಂಭವಿಸಿದ ಕಲ್ಲು ತೂರಾಟದಲ್ಲಿ ನಿಜವಾದ ಆರೋಪಿಗಳನ್ನು ಬಂಧಿಸಬೇಕು ಹಾಗೂ ಹಿಂದೂ– ಮುಸ್ಲಿಂ ಸೌಹಾರ್ದ ಕಾಪಾಡಬೇಕು ಎಂದು ಆಗ್ರಹಿಸಿ, ಖಡಕ್ ಗಲ್ಲಿಯ ನಿವಾಸಿಗಳು ನಗರ ಪೊಲೀಸ್ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಿದರು.
‘ನಾವು ಉರುಸ್ ಮೆರವಣಿಗೆಗೆ ವಿರೋಧ ಮಾಡಿಲ್ಲ. ಇಷ್ಟು ವರ್ಷ ಖಡಕ್ ಗಲ್ಲಿಗೆ ಬಾರದ ಉರುಸ್ ಈಗ ಏಕಾಏಕಿ ಬಂದಿದ್ದರಿಂದ ಗೊಂದಲ ಉಂಟಾಗಿದೆ. ಅಲ್ಲದೇ, ಕೆಲವರು ಪ್ರಚೋದನಕಾರಿ ಘೋಷಣೆ ಕೂಗಿದ್ದಾರೆ. ಕಲ್ಲು ತೂರಾಟವನ್ನೂ ಮಾಡಿದ್ದಾರೆ. ಪೊಲೀಸರು ನಿಜವಾದ ಆರೋಪಿಗಳನ್ನು ಬಂಧಿಸಬೇಕು’ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಭೂಷಣ ಬೊರಸೆ, ‘ಅಮಾಯಕರ ಮೇಲೆ ಕ್ರಮ ವಹಿಸಿಲ್ಲ. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ವಿಚಾರಣೆ ನಡೆಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಊಹಾಪೋಹಗಳನ್ನು ಜನ ನಂಬಬಾರದು. ಶಾಂತಿ ಕಾಪಾಡಬೇಕು’ ಎಂದರು.
ಸ್ವ ಪಕ್ಷದ ವಿರುದ್ಧವೇ ಪ್ರತಿಭಟನೆ: ಬಿಜೆಪಿ ಮತಗಳ್ಳತನ ವಿರುದ್ಧ ಜಿಲ್ಲೆಯಲ್ಲಿ ಹಮ್ಮಿಕೊಂಡ ಸಹಿ ಸಂಗ್ರಹ ಅಭಿಯಾನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರ ಭಾವಚಿತ್ರ ಹಾಕದ ಕ್ರಮ ಕಂಡಿಸಿ, ಹೆಬ್ಬಾಳಕರ ಬೆಂಬಲಿಗರು ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧವೇ ಸೋಮವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೇರಿದ ಅಭಿಮಾನಿಗಳು, ಬ್ಯಾನರ್‌ಗಳಲ್ಲಿ ತಮ್ಮ ನಾಯಕರ ಹೆಸರು, ಭಾವಚಿತ್ರ ಕೈಬಿಟ್ಟವರ ವಿರುದ್ಧ ಧಿಕ್ಕಾರ ಕೂಗಿದರು. ಇದರಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಕೈವಾಡ ಇದೆ ಎಂದು ಆಕ್ರೋಶ ಹೊರಹಾಕಿದರು.
‘ಮತಗಳ್ಳತನ ವಿರುದ್ಧ ಸಹಿ ಸಂಗ್ರಹ ಅಭಿಯಾನ ಸೋಮವಾರ ನಡೆಯಿತು. ಇದರ ಬ್ಯಾನರ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಚನ್ನರಾಜ ಹಟ್ಟಿಹೊಳಿ ಭಾವಚಿತ್ರ ಮಾಯವಾಗಿದೆ. ಹೀಗಾಗಿ ಅಭಿಯಾನ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದೇವೆ’ ಎಂದು ಅಭಿಮಾನಿಗಳು ತಿಳಿಸಿದರು.
ಪ್ರತಿಭಟನೆ ಮಾಡ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಬ್ಯಾನರ್ ಕಿತ್ತು ಹಾಕಿದರು. ನಂತರ ಪ್ರತಿಭಟನೆ ಕೈ ಬಿಡಲಾಯಿತು.
ಉಪ ಆಯುಕ್ತೆ ವರ್ಗಾವಣೆಗೆ ಆಗ್ರಹ
ಬೆಳಗಾವಿ: ‘ಮಹಾನಗರ ಪಾಲಿಕೆ ಉಪ ಆಯುಕ್ತೆ (ಕಂದಾಯ) ರೇಷ್ಮಾ ತಾಳಿಕೋಟಿ ಅವರ ವಿರುದ್ಧ ಭ್ರಷ್ಟಾಚಾರ ಮತ್ತು ಆದಾಯ ನಷ್ಟ ಆರೋಪಗಳಿವೆ. ಈ ಬಗ್ಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ತಕ್ಷಣದಿಂದ ಅವರನ್ನು ವರ್ಗಾವಣೆ ಮಾಡಬೇಕು’ ಎಂದು ಆಗ್ರಹಿಸಿ ಮೇಯರ್ ಮಂಗೇಶ ಪವಾರ ನೇತೃತ್ವದಲ್ಲಿ ಪಾಲಿಕೆಯ ಬಿಜೆಪಿ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು. ಪಾಲಿಕೆ ಆಯುಕ್ತೆ ಬಿ.ಶುಭ ಅವರ ಕಚೇರಿ ಮುಂದೆ ಕೆಲಕಾಲ ಧರಣಿ ಮಾಡಿದ ಸದಸ್ಯರು ಘೋಷಣೆ ಮೊಳಗಿಸಿದರು. ಭ್ರಷ್ಟ ಅಧಿಕಾರಿಯನ್ನು ವರ್ಗ ಮಾಡುವವರೆಗೆ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ‘ಈಗಾಗಲೇ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಪಾಲಿಕೆ ಪರಿಷತ್ ಸಭೆಯಲ್ಲೇ ತನಿಖೆಗೆ ಗೊತ್ತುವಳಿ ಮಂಡಲಾಗಿದೆ. ಆದರೂ ಆಯುಕ್ತರು ಏಕೆ ಕ್ರಮ ವಹಿಸಿಲ್ಲ. ಯಾರ ಒತ್ತಡದ ಮೇಲೆ ಕೆಲಸ ಮಾಡುತ್ತಿದ್ದೀರಿ’ ಎಂದೂ ಸದಸ್ಯರು ಪ್ರಶ್ನಿಸಿದರು. ಈ ವೇಳೆ ಸ್ಥಳಕ್ಕೆ ಬಂದ ಬಿ.ಶುಭ ಪರಿಶೀಲಿಸಿ ಕ್ರಮ ವಹಿಸಲಾಗುವುದು ಧರಣಿ ಕೈಬಿಡಿ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.