ADVERTISEMENT

ಬೆಳಗಾವಿ | ಕಳಪೆ ಬೀಜ: ರೈತರಿಗೆ ಬೇಕಿದೆ ಪರಿಹಾರ

2000 ಎಕರೆಯಲ್ಲಿ ಮೊಳೆಯದ ಬೀಜಗಳು, ಪರಿಶೀಲನೆ ನಡೆಸಿದ ಕೃಷಿ ವಿಜ್ಞಾನಿಗಳು

ಸಂತೋಷ ಈ.ಚಿನಗುಡಿ
Published 16 ಜೂನ್ 2025, 5:49 IST
Last Updated 16 ಜೂನ್ 2025, 5:49 IST
ಕಳಪೆ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ ಎಂದು ಆರೋಪಿಸಿ ರೈತರು ಹಿರೇಬಾಗೇವಾಡಿಯ ರೈತ ಸಂಪರ್ಕ ಕೇಂದ್ರದ ಎದುರು ಈಚೆಗೆ ಪ್ರತಿಭಟನೆ ಮಾಡಿದರು
ಕಳಪೆ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ ಎಂದು ಆರೋಪಿಸಿ ರೈತರು ಹಿರೇಬಾಗೇವಾಡಿಯ ರೈತ ಸಂಪರ್ಕ ಕೇಂದ್ರದ ಎದುರು ಈಚೆಗೆ ಪ್ರತಿಭಟನೆ ಮಾಡಿದರು   

ಬೆಳಗಾವಿ: ಜಿಲ್ಲೆಯ ಕೆಲವೆಡೆ ಕಳಪೆ ಸೋಯಾಬಿನ್‌ ಬಿತ್ತನೆ ಬೀಜಗಳು ಪೂರೈಕೆ ಆಗಿದ್ದು, ರೈತರನ್ನು ಕಂಗಾಲು ಮಾಡಿದೆ. ಚನ್ನಮ್ಮನ ಕಿತ್ತೂರು ತಾಲ್ಲೂಕಿನಲ್ಲಿ ಸುಮಾರು 2,000 ಎಕರೆ ‍ಪ್ರದೇಶದಲ್ಲಿ ಬಿತ್ತಿದ ಬೀಜಗಳು ಮೊಳೆತಿಲ್ಲ. ಇದರಿಂದ ರೈತರಿಗೆ ಪ್ರತಿ ಎಕರೆಗೆ ₹20 ಸಾವಿರದಷ್ಟು ಹಾನಿಯಾಗಿದೆ. ಸರ್ಕಾರ ಈ ಹಾನಿ ಭರಿಸಬೇಕು ಎಂದು ರೈತರು ಧ್ವನಿ ಎತ್ತಿದ್ದಾರೆ.

ಚನ್ನಮ್ಮನ ಕಿತ್ತೂರು ತಾಲ್ಲೂಕಿನ ತುರಕರ ಶೀಗಿಹಳ್ಳಿ ಗ್ರಾಮದ ರೈತ ಸಂಪರ್ಕ ಕೇಂದ್ರದಿಂದಲೇ ವಿತರಿಸಲಾದ ಸೋಯಾಬಿನ್‌ ಬೀಜಗಳು ಸಂಕಷ್ಟ ತಂದೊಡ್ಡಿವೆ. ಕೃಷಿ ಇಲಾಖೆಯೇ ಅಂಗೀಕರಿಸಿದ ಬೀಜಗಳನ್ನು ರೈತರು ಬಿತ್ತಿದ್ದಾರೆ. ಬಿತ್ತನೆ ಮುಗಿದ ಒಂದು ವಾರಕ್ಕೆ ಮೊಳಕೆ ಬರಬೇಕಿತ್ತು. ಆದರೆ, 12 ದಿನಗಳಾದರೂ ಮೊಳಕೆ ಒಡೆದಿಲ್ಲ. ರೈತರು ಹೊಲಕ್ಕೆ ಹೋಗಿ ನೋಡಿದಾಗ ಎಲ್ಲ ಬೀಜಗಳೂ ಕಮರಿದ್ದು ಗಮನಕ್ಕೆ ಬಂದಿದೆ.

ತುರಕರ ಶೀಗಿಹಳ್ಳಿ ರೈತ ಸಂಪರ್ಕ ಕೇಂದ್ರಕ್ಕೆ ಬರುವ ಮೂರು (ಕಡಸಗಟ್ಟಿ, ಬೆಳ್ಳಿಕಟ್ಟಿ, ತುರುಕರ ಶೀಗಿಹಳ್ಳಿ) ಗ್ರಾಮಗಳಿಗೂ ಸಮಸ್ಯೆ ಆಗಿದೆ. ಡಿಎಪಿ ಗೊಬ್ಬರ ₹1300 ಚೀಲಕ್ಕೆ ಖರ್ಚಾಗಿದೆ. ಕೆಲವರು ಮನೆಯ ಬೀಜಗಳನ್ನೂ ಬಿತ್ತಿದ್ದಾರೆ. ಅದು ಮೊಳಕೆ ಬಂದಿದೆ. ಹಾಗಿದ್ದರೆ ರೈತರು ತಪ್ಪು ಮಾಡಲು ಹೇಗೆ ಸಾಧ್ಯ ಎಂಬುದು ರೈತರ ಪ್ರಶ್ನೆ.

‘ಕಳಪೆ ಬೀಜ ವಿತರಣೆ ಮಾಡಿದ್ದರಿಂದಲೇ ನಮಗೆ ನಷ್ಟವಾಗಿದೆ. ನೆಲ ಹದಗೊಳಿಸಿ, ಗಳೆ ಹೊಡೆದು, ಗೊಬ್ಬರ ಹಾಕಿ, ಬಿತ್ತನೆ ಮಾಡಲು ಪ್ರತಿ ಎಕರೆಗೆ ಕನಿಷ್ಠ ₹20 ಸಾವಿರ ಖರ್ಚಾಗಿದೆ. ಸಾಲ ಮಾಡಿಕೊಂಡಿದ್ದೇವೆ. ಈ ಹಾನಿಗೆ ಯಾರು ಹೊಣೆ’ ಎಂಬುದು ತುರಕರ ಶೀಗಿಹಳ್ಳಿ ರೈತರ ಪ್ರಶ್ನೆ.

ADVERTISEMENT

‘ಬೆಳೆ ನಷ್ಟವಾದರೆ ಬೆಳೆ ಪರಿಹಾರ ನೀಡಲಾಗುತ್ತದೆ. ಆದರೆ, ಬೀಜವೇ ನಷ್ಟವಾದರೆ ಯಾರು ಪರಿಹಾರ ನೀಡುವುದು? ರೈತರು ಖರ್ಚು ಮಾಡಿದ ಹಣವನ್ನು ಪರಿಹಾರದ ರೂಪದಲ್ಲಿ ನೀಡಬೇಕು. ಅಥವಾ ಹೊಸದಾಗಿ ಬಿತ್ತನೆ ಮಾಡಲು ಬೇಕಾಗುವ ಎಲ್ಲ ವೆಚ್ಚವನ್ನು ಕೊಡಬೇಕು. ಇಲ್ಲದೇ ಹೋದರೆ ನಾವು ಬೀದಿಪಾಲಾಗುತ್ತೇವೆ’ ಎಂಬುದು ಅವರು ಅಂಬೋಣ.

‘ಸಮಸ್ಯೆ ಕುರಿತು ಅಧಿಕಾರಿಗಳಿಗೆ ಮನವಿ ನೀಡಿದರೂ ಗಮನಿಸಲಿಲ್ಲ. ಪ್ರತಿಭಟನೆ ಮಾಡಿದ ಬಳಿಕ ‌ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನಿಗಳು ಬಂದು ಪರುಶೀಲಿಸಿದ್ದಾರೆ. ರೈತರಿಗೆ ಬೀಜ ಮಾತ್ರ ಕೊಟ್ಟಿದ್ದಾರೆ. ಈಗ ಮರಳಿ ನೇಗಿಲ ಹೊಡಿಯಬೇಕು, ಗೊಬ್ಬರ ಹಾಕಬೇಕು. ಇದನ್ನು ಯಾರು ಕೊಡುವುದು. ಸೊಸೈಟಿಯಲ್ಲಿ 15 ದಿನ ಇಟ್ಟುಕೊಂಡು ಬೀಜ ಕೊಟ್ಟಿದ್ದಾರೆ. ಬಹುಶಃ ಆ ಕಾರಣಕ್ಕೂ ಬೀಜಗಳು ಕೆಟ್ಟಿವೆ. ರೈತ ಸಂಪರ್ಕ ಕೇಂದ್ರದವರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಶೇ 90ರಷ್ಟು ಹಾಳಾಗಿವೆ’ ಎನ್ನುವುದು ರೈತ ಮಹಿಳೆ ಗಿರಿಜಾ ಕಲ್ಲೈನವರ ಅವರ ಗೋಳು.

ಬೈಲಹೊಂಗಲ, ರಾಮದುರ್ಗ, ಬೆಳಗಾವಿ ತಾಲ್ಲೂಕಿನಲ್ಲೂ ಇಂಥ ಕೆಲ ರೈತರಿಗೆ ಪ್ರಕರಣಗಳು ಕಂಡುಬಂದಿವೆ. ಆದರೆ, ಇವು ಕಳಪೆ ಬೀಜದಿಂದಲೇ ಆಗಿವೆ ಎಂದು ಹೇಳಲಾಗುತ್ತಿಲ್ಲ. ಅತಿಯಾದ ಮಳೆ ಅಥವಾ ಬಿತ್ತನೆಯಲ್ಲಿ ಮಾಡಿದ ಪ್ರಮಾದವೂ ಕಾರಣ ಆಗಿರಬುಹುದು ಎಂದು ರೈತರೇ ಸುಮ್ಮನಾಗಿದ್ದಾರೆ.

ಖಾಸಗಿ ಕಂಪನಿಗಳು ಕಳಪೆ ಬೀಜ, ಗೊಬ್ಬರ ಮಾರಾಟ ಮಾಡುವಂಥದ್ದು ಕೆಲವೆಡೆ ಕಂಡುಬಂದಿದ್ದು, ಜಿಲ್ಲಾ ವಿಚಕ್ಷಣ ದಳದವರು ದಾಳಿ ಮಾಡಿ, ದಂಡ ಕೂಡ ಕಟ್ಟಿದ್ದಾರೆ.

ಚನ್ನಮ್ಮನ ಕಿತ್ತೂರು ತಾಲ್ಲೂಕಿನ ತುರಕರ ಶೀಗಿಹಳ್ಳಿ ಗ್ರಾಮದಲ್ಲಿ ಸೋಯಾಬಿನ್‌ ಬೀಜಗಳು ಕಮರಿದ್ದನ್ನು ರೈತರು ಪರಿಶೀಲಿಸಿದರು
ಸೋಯಾಬಿನ್‌ ಬೀಜದ ಪಾಕಿಟ್‌

‘ಭೇಟಿ ನೀಡಿದ ಕೃಷಿ ವಿಜ್ಞಾನಿಗಳು’ ಕಳಪೆ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ ಎಂದು ಆರೊಪಿಸಿ ಹಿರೇಬಾಗೇವಾಡಿ ರೈತರು ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಟ್ರ್ಯಾಕ್ಟರ್ ತಂದು ನಿಲ್ಲಿಸಿ ಪ್ರತಿಭಟಸಿದ್ದರು. ಕೂಡಲೇ ತಮಗಾದ ನಷ್ಟ ಭರಿಸಬೇಕೆಂದು ಆಗ್ರಹಿಸಿದರು. ರೈತ ಸಂಪರ್ಕ ಕೇಂದ್ರದಿಂದ ವಿತರಿಸಲಾಗಿದ್ದ ‘ವರುಣ ಕಂಪನಿಯ ಕೆಡಿಎಸ್-726‘ ಸೊಯಾಬಿನ್ ಬಿತ್ತನೆ ಬೀಜಗಳು ರೈತರ ಜಮೀನುಗಳಲ್ಲಿ ಸರಿಯಾಗಿ ಬಿತ್ತನೆಯಾಗದೇ ಈ ಭಾಗದ ಸಾಕಷ್ಟು ರೈತರು ನಷ್ಟ ಅನುಭವಿಸುವಂತಾಗಿದೆ. ರಸಗೊಬ್ಬರ ಕೂಲಿ ಟ್ರ್ಯಾಕ್ಟರ್ ಬಾಡಿಗೆ ಎಲ್ಲವೂ ಸೇರಿ ಎಕರೆಗೆ ₹15 ಸಾವಿರದಿಂದ ₹20 ಸಾವಿರ ಖರ್ಚಾಗಿದ್ದು ಈ ಹಾನಿಯನ್ನು ಸರಿಪಡಿಸಬೇಕು. ದೇಶದ ಬೆನ್ನೆಲಬು ರೈತನ ಬೆನ್ನು ಮೂಳೆ ಮುರಿದಿದೆ ಎಂದೂ ಸುರೇಶ ಗುರುವಣ್ಣವರ ರಾಜಶೇಖರ ಸಾಲಿಮನಿ ಅಡಿವೆಪ್ಪ ತೋಟಗಿ ಸತೀಶ ಮಾಳಗಿ ಆನಂದ ನಂದಿ ದಾನಗೌಡ ಪಾಟೀಲ ರಘು ಪಾಟೀಲ ಮಲಗೌಡ ಪಾಟೀಲ ಶಿವನಗೌಡ ದೊಡ್ಡಗೌಡರ ಶಿವಾನಂದ ನಾವಲಗಟ್ಟಿ ಈಶ್ವರ ಜಮಖಂಡಿ ಉಮೇಶ ರೊಟ್ಟಿ ಮಹಾಂತೇಶ ಪಡಗಲ್ ಮಂಜು ರೊಟ್ಟಿಮಹಾಂತೇಶ ಹಳಮನಿ ಮಂಜುನಾಥ ಇಟಗಿ ರಾಜನಗೌಡ ಪಾಟೀಲ ಶೇಖರ ಹುಲಮನಿ ಕಿಡಿ ಕಾರಿದ್ದರು. ಆಗ ಸ್ಥಳಕ್ಕೆ ಭೇಟಿ ನೀಡಿದ ಕೃಷಿ ಅಧಿಕಾರಿ ಸಿ.ಎಸ್.ನಾಯಿಕ ‘ಧಾರವಾಡ ಕೃಷಿ ವಿದ್ಯಾಲಯದ ವಿಜ್ಞಾನಿಗಳು ಈಗಾಗಲೇ ರೈತರ ಜಮೀನುಗಳಿಗೆ ತೆರಳಿ ಬೀಜ ಮೊಳಕೆ ಪರೀಕ್ಷೆ ಮಾಡಿದ್ದಾರೆ. ರೈತರಿಗೆ ಸ್ಪಷ್ಟನೆ ನಿಡಲಿದ್ದಾರೆ’ ಎಂದು ಹೇಳಿದ್ದರು.

ಇವರೇನಂತಾರೆ?

ವರದಿ ಬಂದ ಬಳಿಕ ಕ್ರಮ ಬೀಜಗಳು ಮೊಳೆತಿಲ್ಲ ಎಂದು ತಿಳಿದ ತಕ್ಷಣ ರೈತರ ಸಂಕಷ್ಟಕ್ಕೆ ಶೀಘ್ರ ಸ್ಪಂದಿಸಿದ್ದೇವೆ. ಮರು ಬಿತ್ತನೆಗೆ ಬೀಜ ಕೊಡಲಾಗಿದೆ. ಇನ್ನೂ ಹಂಗಾಮು ಅವಧಿ ಇದೆ. ಜಿಲ್ಲೆಯಲ್ಲಿ 30 ಸಾವಿರ ಕ್ವಿಂಟಲ್‌ ಬೀಜ ಕೊಟ್ಟಿದ್ದೇವೆ. ಬೇರೆಲ್ಲೂ ಸಮಸ್ಯೆ ಆಗಿಲ್ಲ. 300 ಕ್ವಿಂಟಲ್‌ ಮಾತ್ರ ಹೀಗೆ ಆಗಿದೆ. 800 ಎಕರೆಯಷ್ಟು ಬೆಳೆ ಬಂದಿಲ್ಲ. ಹಂಗಾಮು ಇರುವ ಕಾರಣ ರೈತರು ಭಯ ಪಡಬೇಕಾಗಿಲ್ಲ. ಬೀಜಗಳು ಏಕೆ ಮೊಳೆತಿಲ್ಲ ಎಂದು ಕೃಷಿ ವಿಜ್ಞಾನಿಗಳು ಪರಿಶೀಲನೆ ನಡೆಸಿದ್ದಾರೆ. ವರದಿಗಾಗಿ ಕಾಯುತ್ತಿದ್ದೇವೆ. ಶಿವನಗೌಡ ಪಾಟೀಲ ಜಂಟಿ ಕೃಷಿ ನಿರ್ದೇಶಕ ಬೆಳಗಾವಿ * ₹1 ಲಕ್ಷ ಹಾನಿಯಾಗಿದೆ ಕಷ್ಟಪಟ್ಟು ಹೊಲ ಬಿತ್ತನೆ ಮಾಡಿದೆವು.‌ ಕೃಷಿ ಅಧಿಕಾರಿಗಳು ಸೂಚಿಸಿದ ಬೀಜಗಳನ್ನೇ ಬಳಸಿದರೂ ಬೆಳೆ ಬಂದಿಲ್ಲ.‌ ಇದರಿಂದ ನನಗೆ ₹1 ಲಕ್ಷ ಹಾನಿಯಾಗಿದೆ. ಶ್ರಮವೂ ವ್ಯರ್ಥವಾಗಿದೆ. ಈಗ ಮತ್ತೆ ಹೊಲ ಹದ ಮಾಡಿ ಬತ್ತಿ ಗೊಬ್ಬರ ಹಾಕಬೇಕು. ಎಲ್ಲ ಖರ್ಚೂ ದ್ವಿಗುಣ ಆಗಿದೆ. ಉಂಟಾದ ಹಾನಿಗೆ ಸರ್ಕಾರವೇ ಹೊಣೆ ಹೊರ ಬೇಕು. ಎಲ್ಲರಿಗೂ ಪರಿಹಾರ ನೀಡಬೇಕು. ಬಸವರಾಜ ಸುಬೇದಾರ ರೈತ ತುರಕರ ಶೀಗಿಹಳ್ಳಿ *ಪರಿಹಾರ ಕೊಡಿದ್ದರೆ ಹೋರಾಟ ಈಗ ಆಗಿರುವ ಹಾನಿಗೆ ಪರಿಹಾರ ನೀಡಿ ಎಂದು ಹೋರಾಟ‌ ಮಾಡಿದ್ದೇವೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕೃಷಿ ಸಚಿವರು ಖುದ್ದಾಗಿ ಭೇಟಿ‌ ನೀಡಿ‌ ನಮ್ಮ‌ ಪತಿಸ್ಥಿತಿ‌ ನೋಡಬೇಕು. ಈಗ ಸಾಲ ಮಾಡುವುದಕ್ಕೂ ಸಾಧ್ಯವಿಲ್ಲದ ಸ್ಥಿತಿ ಇದೆ. ಪರಿಹಾರ ನೀಡದೇ ಬೇರೆ ದಾರಿ ಇಲ್ಲ. ನೀಡದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ. ಪ್ರಕಾಶ ಶಿಂತ್ರಿ ರೈತ ತುರಕರ ಶೀಗಿಹಳ್ಳಿ

ನಾಜೂಕಿನಿಂದ ಬಿತ್ತಬೇಕು...

ಸೋಯಾಬಿನ್‌ ತುಂಬ ನಾಜೂಕಿನ ಬೆಳೆಯಾಗಿದೆ. ಬಿತ್ತನೆ ಮಾಡುವಾಗ ಮೂರು ಇಂಚು ಕೆಳಗೆ ಹೋದರೂ ಅದು ಬೆಳೆಯುವುದಿಲ್ಲ. ವಾತಾವರಣ ತಂಪಿರದ ಸಂದರ್ಭದಲ್ಲಿ ಬಿತ್ತಿದರೂ ಕಷ್ಟ. ಮನೆಯಲ್ಲಿ ಬೀಜದ ಚೀಲಗಳನ್ನು ನಿಟ್ಟು ಹಚ್ಚಬಾರದು. ಏಳೆಂಟು ಚೀಲಗಳನ್ನು ಮೇಲೆ ಇಟ್ಟಾಗ ಕೆಳಗಿನ ಚೀಲದ ಬೀಜಗಳು ಹಾಳಾಗುತ್ತದೆ. ಅದರ ಮೂಗು (ಎಂಬ್ರಯೊ) ಮುರಿಯುತ್ತದೆ. ಬೀಜದ ಸಿಪ್ಪೆ ಕೂಡ ಬಲು ತೆಳುವಾಗಿರುತ್ತದೆ. ಹೀಗಾಗಿ ಬೀಜಗಳನ್ನು ಬಹಳ ನಾಜೂಕಿನಿಂದಲೇ ಕಾಳಜಿ ಮಾಡಬೇಕಾಗುತ್ತದೆ ಎಂದು ಕೃಷಿ ವಿಜ್ಞಾನಿಗಳು ಸಲಹೆ ನೀಡಿದ್ದಾರೆ. ‌ಸೀಡ್‌ಕೋಟ್‌ (ಸಿಪ್ಪೆ) ದಪ್ಪ ಮಾಡಲು ಈ ಹಿಂದೆಯೂ ಸಂಶೋಧನೆಗಳು ನಡೆದಿವೆ. ಆದರೂ ಫಲ ಸಿಕ್ಕಿಲ್ಲ. ಜೋಳ ಕಡಲೆ ಬೇಕಾದ ಹಾಗೆ ಎಸೆದರೂ ಮೊಳಕೆಯೊಡೆಯುತ್ತವೆ. ಆದರೆ ಸೋಯಾಬಿನ್‌ ಹಾಗಲ್ಲ ಎಂಬುದು ಅವರ ಹೇಳಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.