ADVERTISEMENT

ಬೆಳಗಾವಿ | ಬಸ್ಸಿನಲ್ಲಿ ಹೆಚ್ಚಳವಾದ ಕಳವು ಪ್ರಕರಣ: 4 ತಿಂಗಳಲ್ಲಿ 10ಮಹಿಳೆಯರ ಬಂಧನ

₹21 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಇಮಾಮ್‌ಹುಸೇನ್‌ ಗೂಡುನವರ
Published 2 ಜೂನ್ 2025, 4:26 IST
Last Updated 2 ಜೂನ್ 2025, 4:26 IST
ಬೆಳಗಾವಿ ಕೇಂದ್ರೀಯ ನಿಲ್ದಾಣದಲ್ಲಿ ಬಸ್‌ನಿಂದ ಮಹಿಳೆಯರು ಇಳಿಯುತ್ತಿರುವುದು  ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿ ಕೇಂದ್ರೀಯ ನಿಲ್ದಾಣದಲ್ಲಿ ಬಸ್‌ನಿಂದ ಮಹಿಳೆಯರು ಇಳಿಯುತ್ತಿರುವುದು  ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ಮಹಿಳಾ ಪ್ರಯಾಣಿಕರೇ ಬಸ್‌ ಹತ್ತುವಾಗ ಮತ್ತು ಇಳಿಯುವಾಗ ಎಚ್ಚರ. ಸ್ವಲ್ಪ ಯಾಮಾರಿದರೂ ನಿಮ್ಮ ಚಿನ್ನಾಭರಣ ಕಳ್ಳಿಯರ ಪಾಲಾದೀತು...!

ಹೌದು. ರಾಜ್ಯ ಸರ್ಕಾರ ‘ಶಕ್ತಿ’ ಯೋಜನೆ ಜಾರಿಗೊಳಿಸಿದ ನಂತರ ಇಲ್ಲಿನ ಕೇಂದ್ರೀಯ ಬಸ್‌ ನಿಲ್ದಾಣದಲ್ಲಿ ಮಹಿಳಾ ‌ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಇದರೊಂದಿಗೆ ಮಹಿಳೆಯರಿಂದಲೇ ಚಿನ್ನಾಭರಣ ಕಳ್ಳತನ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಮಹಿಳಾ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ ಬಸ್‌ಗಳನ್ನೇ ‘ಟಾರ್ಗೆಟ್‌’ ಮಾಡುತ್ತಿರುವ ಮಹಿಳೆಯರು, ತಾವು ಪ್ರಯಾಣಿಕರಂತೆಯೇ ದಟ್ಟಣೆ ಮಧ್ಯೆ ಬಂದು ನಿಂತು ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದಾರೆ.

ADVERTISEMENT

ಆದರೆ, ‘ಬಸ್‌ ನಿಲ್ದಾಣದಲ್ಲಿ 16 ಕ್ಯಾಮೆರಾಗಳಷ್ಟೇ ಇದ್ದು, ಅವುಗಳಲ್ಲಿ ಇಡೀ ನಿಲ್ದಾಣದ ದೃಶ್ಯಾವಳಿ ಸೆರೆಯಾಗುತ್ತಿಲ್ಲ. ಪ್ಲಾಟ್‌ಫಾರಂಗೆ ಸೀಮಿತವಾದ ಹೆಚ್ಚಿನ ಕ್ಯಾಮೆರಾಗಳಲ್ಲಿ ಸೆರೆಯಾಗುತ್ತಿರುವ ದೃಶ್ಯಾವಳಿ ಗುಣಮಟ್ಟದಿಂದ ಕೂಡಿರದ ಕಾರಣ, ಆರೋಪಿಗಳ ಪತ್ತೆ ಕಷ್ಟವಾಗುತ್ತಿದೆ’ ಎಂದು ಪೊಲೀಸರು ಹೇಳುತ್ತಾರೆ.

ಸಕ್ರಿಯವಾಗಿದೆಯೇ ಗ್ಯಾಂಗ್‌?: ಪ್ರಯಾಣಿಕರಿಂದ ಗಿಜಿಗಿಡುವ ಬೆಳಗಾವಿ ನಿಲ್ದಾಣದಿಂದ ಮೂರು ರಾಜ್ಯಗಳ ನಗರ–ಪಟ್ಟಣಗಳಿಗೆ ಬಸ್‌ಗಳು ಕಾರ್ಯಾಚರಣೆ ನಡೆಸುತ್ತವೆ. ಇಲ್ಲಿ ನಿರಂತರವಾಗಿ ಕಳ್ಳತನ ನಡೆಯುತ್ತಿರುವುದನ್ನು ಗಮನಿಸಿದರೆ, ಇಂಥ ಕೃತ್ಯ ಎಸಗುವ ಮಹಿಳೆಯರ ಗ್ಯಾಂಗ್‌ ಇಲ್ಲಿ ಸಕ್ರಿಯವಾಗಿದೆಯೇ ಎನ್ನುವ ಅನುಮಾನ ಮೂಡುತ್ತಿದೆ.

ಇಲ್ಲಿ ಕಳೆದ ನಾಲ್ಕೇ ತಿಂಗಳಲ್ಲಿ 10 ಮಹಿಳೆಯರನ್ನು ಬಂಧಿಸಿದ ಮಾರ್ಕೆಟ್‌ ಠಾಣೆ ಪೊಲೀಸರು, ಅವರಿಂದ ₹21 ಲಕ್ಷ ಮೌಲ್ಯದ 283 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣಗಳಲ್ಲಿ ಸಿಕ್ಕಿಬಿದ್ದವರಲ್ಲಿ ಬೆಳಗಾವಿ, ನಿಪ್ಪಾಣಿ ಮತ್ತಿತರ ಕಡೆಯ ಮಹಿಳೆಯರಿದ್ದಾರೆ.

ನಿಗಾ ವಹಿಸುತ್ತಿದ್ದೇವೆ: ‘ಬೆಳಗಾವಿ ನಿಲ್ದಾಣದಲ್ಲಿ ಒಬ್ಬ ಪೊಲೀಸ್‌ ಕಾನ್‌ಸ್ಟೆಬಲ್‌ ನಿರಂತರವಾಗಿ ಇರುತ್ತಾರೆ. ಇದಲ್ಲದೆ, ಅಪರಾಧ ವಿಭಾಗದ ಸಿಬ್ಬಂದಿ ನಿಯೋಜಿಸಲಾಗಿದೆ. ಸಂಶಯಾಸ್ಪದ ವ್ಯಕ್ತಿಗಳ ಸತತವಾಗಿ ನಿಗಾ ಇರಿಸುತ್ತಿದ್ದೇವೆ’ ಎಂದು ಪೊಲೀಸ್‌ ಅಧಿಕಾರಿಗಳು ಹೇಳುತ್ತಾರೆ.

ಬೆಳಗಾವಿ ಕೇಂದ್ರೀಯ ಬಸ್‌ ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ಮಹಿಳೆಯರು ಕುಳಿತಿರುವುದು ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬಸ್‌ ನಿಲ್ದಾಣದಲ್ಲಿ ಕಳ್ಳತನ ಮಾಡುವಾಗ ಸಿಕ್ಕಿಬಿದ್ದ ಮಹಿಳೆಯರ ಹಿನ್ನೆಲೆ ಕುರಿತಾಗಿ ತನಿಖೆ ಮಾಡುತ್ತೇವೆ. ಕಳ್ಳತನ ಪ್ರಕರಣಗಳ ನಿಯಂತ್ರಣಕ್ಕೆ ಕ್ರಮ ವಹಿಸುತ್ತೇವೆ
ಭೂಷಣ್‌ ಗುಲಾಬರಾವ್‌ ಬೊರಸೆ ನಗರ ಪೊಲೀಸ್‌ ಕಮಿಷನರ್‌
ಬೆಳಗಾವಿ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಕುಳಿತುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಸುರಕ್ಷತೆ ದೃಷ್ಟಿಯಿಂದ ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಬೇಕು. ಸಿ.ಸಿ.ಟಿ.ವಿ ಕ್ಯಾಮೆರಾಗಳ ಸಂಖ್ಯೆ ಹೆಚ್ಚಿಸಬೇಕು
ಸೀಮಾ ಪವಾರ ಸಾಮಾಜಿಕ ಕಾರ್ಯಕರ್ತೆ ಬೆಳಗಾವಿ

‘ಮತ್ತೆ 8 ಕ್ಯಾಮೆರಾ ಅಳವಡಿಸುತ್ತೇವೆ’

‘ಬೆಳಗಾವಿ ಬಸ್‌ ನಿಲ್ದಾಣದ ಮೂಲಕ ನಿತ್ಯ 1388 ಟ್ರಿಪ್‌ಗಳಷ್ಟು ಬಸ್‌ ಕಾರ್ಯಾಚರಣೆ ನಡೆಸುತ್ತವೆ. ಸುಮಾರು 1 ಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ. ಈಗ ನಿಲ್ದಾಣದಲ್ಲಿ 16 ಸಿ.ಸಿ.ಟಿ.ವಿ ಕ್ಯಾಮೆರಾ ಇವೆ.  ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ಕ್ಯಾಮೆರಾಗೆ ಪೊಲೀಸರು ಬೇಡಿಕೆ ಇರಿಸಿದ್ದಾರೆ. ಹಾಗಾಗಿ ಮತ್ತೆ 8 ಕ್ಯಾಮೆರಾಗಳನ್ನು ಶೀಘ್ರ ಅಳವಡಿಸುತ್ತೇವೆ’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ ಹುದ್ದಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಬ್ಯಾಗ್‌ ಕತ್ತರಿಸಿ ಕಳ್ಳತನ

 ‘ಹೆಚ್ಚಿನ ಆಭರಣ ಹೊಂದಿದ ಮಹಿಳೆಯರು ಬಸ್‌ನಲ್ಲಿ ಎಲ್ಲರಿಗೂ ಕಾಣಿಸುವಂತೆ ಧರಿಸಬಾರದು ಎಂದು ತಿಳಿವಳಿಕೆ ಮೂಡಿಸುತ್ತಿದ್ದೇವೆ. ಇದರಿಂದಾಗಿ ಕೆಲ ಮಹಿಳೆಯರು ಹೆಚ್ಚಿನ ಆಭರಣವಿದ್ದರೆ ಬ್ಯಾಗ್‌ನಲ್ಲಿ ಇರಿಸಿ ಪ್ರಯಾಣಿಸುತ್ತಿದ್ದಾರೆ. ಆದರೆ ಬ್ಯಾಗ್‌ನಲ್ಲಿ ಚಿನ್ನಾಭರಣ ಇರುವುದನ್ನು ಹೇಗೋ ತಿಳಿದುಕೊಂಡು ಕಳ್ಳತನ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕೆಲವರು ನೇರವಾಗಿಯೇ ಒಡವೆ ಕದ್ದರೆ ಇನ್ನೂ ಕೆಲವರು ಬ್ಯಾಗ್‌ ಕತ್ತರಿಸಿ ಕಳ್ಳತನ ಮಾಡುತ್ತಿದ್ದಾರೆ’ ಎಂದು ಮಾರ್ಕೆಟ್‌ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಮಹಾಂತೇಶ ಧಾಮಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು. ‘ಕೆಲವರು ಪುಟ್ಟ ಮಕ್ಕಳೊಂದಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಾರೆ. ಕಳ್ಳತನ ಮಾಡಿದ ತಕ್ಷಣ ಮಗು ಅಳಿಸುತ್ತಾರೆ. ಅದನ್ನು ಸಮಾಧಾನಪಡಿಸಲಾಗುತ್ತಿಲ್ಲ ಎಂಬಂತೆ ಬಿಂಬಿಸಿ ಮುಂದಿನ ನಿಲ್ದಾಣದಲ್ಲೇ ಇಳಿದು ಪರಾರಿಯಾಗುತ್ತಾರೆ. ಕೃತ್ಯ ಎಸಗಿದ ಕೆಲವರು ಮತ್ತೊಂದು ಸೀಟಿಗೆ ಹೋಗಿ ಕುಳಿತಿರುವುದು ವಿಚಾರಣೆ ವೇಳೆ ಗೊತ್ತಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.