ತಳೇವಾಡಿ: ನನಗ ಪಕ್ಕಾ ಗೊತ್ತದರಿ. ಮೂರು ತಲೆಮಾರಿಂದ ಇದೇ ಕಾಡ್ಮನೆಯಲ್ಲಿ ತೊಟ್ಟಿಲು ತೂಗಿದಾವ್. ನಮ್ಮಜ್ಜ, ನಮ್ಮಜ್ಜಿ, ನಮ್ಮಪ್ಪ, ನಮ್ಮಾಯಿ ಮತ್ತು ನಾನು, ನನ್ನ ಮಕ್ಳು... ಎಲ್ಲಾರೂ ಇದೇ ಕಾಡಿನಲ್ಲಿ ಹುಟ್ಟಿದವರು. ಹಿರಿಯರು ಹೆಂಗೋ ಜೀವನ ಸಾಗಿಸಿದರು. ನಮ್ಮದೂ ಅರ್ಧ ಜೀವನ ಮುಗೀತು. ಆದರ ಮಕ್ಕಳ ಜೀವನ ತ್ರಾಸ್ ಆಗಬಾರದು. ಅದಕ್ಕ ಕಾಡು ಬಿಟ್ಟು ಹೋಗಬೇಕಂತ ಡಿಸೈಡ್ ಮಾಡೇವಿರಿ...
ಜಿಲ್ಲೆಯ ಖಾನಾಪುರ ತಾಲ್ಲೂಕಿನ ದಟ್ಟಾರಣ್ಯದ ಮಡಿಲಲ್ಲಿ ಅವಿತಿರುವ ಪುಟಾಣಿ ಹಳ್ಳಿ ತಳೇವಾಡಿಯ ಜನರ ಮನದಾಳವಿದು.
ತಲೆ– ತಲಾಂತರಗಳಿಂದ ವನದೇವಿ ಮಡಿಲಲ್ಲಿದ್ದ ಮಕ್ಕಳು ಈಗ ಹೊರ ಜಗತ್ತಿಗೆ ಹೊರಟು ನಿಂತಿದ್ದಾರೆ. ಅವರು ಆಡಿ ಬೆಳೆದ ಅಂಗಳ ಇನ್ನು ಖಾಲಿ–ಖಾಲಿ. ನೋವು–ನಲಿವು ಕಂಡಿದ್ದ ಪುಟ್ಟ ಮನೆಗಳಿಗೆ ಈಗ ಇತಿಹಾಸದ ಪುಟದಲ್ಲೂ ಜಾಗವಿಲ್ಲ. ಮನೆಯ ಮುಂದಿನ ಬೆಟ್ಟ–ಗುಡ್ಡಗಳು, ನದಿ– ಜಲಪಾತಗಳು, ಖಗ– ಮೃಗಗಳು ಎಲ್ಲದರಿಂದಲೂ ಸಂಬಂಧದ ಕೊಂಡಿ ಕಳಚಿಕೊಂಡಿದೆ. ತಿರುಗಿ ನೋಡಿದರೆ ಅವರದ್ದು ಎನ್ನುವುದು ಇಲ್ಲಿ ಯಾವುದೂ ಉಳಿದಿರುವುದಿಲ್ಲ...
ಹೌದು. ಜಮಾನಾದಿಂದಲೂ ತಳೇವಾಡಿಯಲ್ಲಿ ಜೀವನ ಸಾಗಿಸುತ್ತಿದ್ದ ಜನ ಸ್ಥಳಾಂತರಕ್ಕೆ ಒಪ್ಪಿಕೊಂಡಿದ್ದಾರೆ. ರಾಜ್ಯ ಸರ್ಕಾರ ಪ್ರತಿ ಕುಟುಂಬಕ್ಕೆ ₹15 ಲಕ್ಷ ಘೋಷಣೆ ಮಾಡಿದ್ದು, ₹10 ಲಕ್ಷ ‘ಅಡ್ವಾನ್ಸ್’ ನೀಡಿದೆ. ಇಲ್ಲಿರುವ 27 ಕುಟುಂಬಗಳಲ್ಲಿ ವಯಸ್ಸಾದವರೇ ಹೆಚ್ಚಾಗಿದ್ದಾರೆ. ಹರೆಯದವರು ಶಿಕ್ಷಣಕ್ಕೋ, ದುಡಿಮೆಗೋ ವಲಸೆ ಹೋಗಿದ್ದಾರೆ. ಕನ್ನಡ– ಮರಾಠಿ ಭಾಷಿಕರಾದ ಇವರು ಕಾಡುಮೊಲದಷ್ಟೇ ಮುಗ್ದರು.
ಹೆಮ್ಮಡಗಾ ಅರಣ್ಯದ ನೇರಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ತಳೇವಾಡಿಯಲ್ಲಿ ಕನಿಷ್ಠ ಸೌಕರ್ಯಗಳೂ ಇಲ್ಲ. ಮಳೆಗಾಲದಲ್ಲಿ ನಾಲ್ಕು ತಿಂಗಳು ಹೊರ ಜಗತ್ತಿನೊಂದಿಗೆ ಸಂಪರ್ಕ ಕಡಿದುಹೋಗುತ್ತದೆ. ಗರ್ಭಿಣಿ, ಬಾಣಂತಿ, ವೃದ್ಧರು, ಚಿಣ್ಣರು ಯಾರಿಗೇ ಆರೋಗ್ಯ ಕೆಟ್ಟರೆ ಕಟ್ಟಿಗೆಯ ‘ಪಲ್ಲಕ್ಕಿ’ ಮಾಡಿ ಹೊತ್ತುಕೊಂಡೇ ಬರಬೇಕು. ಬೆಟ್ಟ, ಗುಡ್ಡ, ಕಾಡು ದಾಟಿ ಹತ್ತಾರು ಕಿ.ಮೀ ನಡೆದು, ವಾಹನಗಳಿಗೆ ಕಾಯಬೇಕು. ಈ ದುರ್ಗಮ ಸ್ಥಿತಿಯಿಂದ ಹೊರಬರಲು ಜನ ಬಯಸಿದ್ದಾರೆ.
‘ಒಂದಿಡೀ ಬದುಕಿನ ಬೆಲೆ ಕೇವಲ ₹15 ಲಕ್ಷವೇ?’ ಎಂಬ ಪ್ರಶ್ನೆ ಮಾತ್ರ ಅವರ ತಲೆಯಲ್ಲಿ ‘ಗುಂಗಿಹುಳ’ದಂತೆ ಗುಞ್... ಗುಟ್ಟುತ್ತಿದೆ! ಅದನ್ನು ಗಟ್ಟಿಯಾಗಿ ಅಭಿವ್ಯಕ್ತ ಮಾಡುವಂಥ ಧ್ವನಿಯೂ ಅವರಿಗೆ ಇಲ್ಲ. ಎಲ್ಲಿಯಾದರೂ ರೂಮು ಮಾಡಿ ಇದ್ದರಾಯಿತು, ದುಡಿದರಾಯಿತು, ಮುಂದೆ ದೇವರಿದ್ದಾನೆ ಎಂಬ ಭರವಸೆಯಷ್ಟೇ ಎದೆಯ ಮೇಲಿದೆ.
ಇವರಲ್ಲಿ ಎಲ್ಲರೂ ಅನಕ್ಷರಸ್ಥರೇನಲ್ಲ. ಪದವಿಯರೆಗೆ ಓದಿದವರೂ ಕೆಲವರಿದ್ದಾರೆ. ಗೋವಾ, ಪುಣೆ, ಬೆಳಗಾವಿ ಕಡೆಗೆ ದುಡಿಮೆಗೆ ವಲಸೆ ಹೋಗಿದ್ದಾರೆ. ಹಿರಿಯರು, ಮಕ್ಕಳು ಮಾತ್ರ ಮನೆತಳಕ್ಕೆ ಇದ್ದಾರೆ. ಓದಿದವರು ಎಲ್ಲಿಯಾದರೂ ಕೆಲಸ ಮಾಡಬಹುದು. ವಯಸ್ಸಾದವರು ಏನು ಮಾಡುವುದು? ಹರೆಯದವರಿಗೆ ಗೌಂಡಿ ಕೆಲಸ ಬಿಟ್ಟರೆ ಬೇರೇನೂ ಬರುವುದಿಲ್ಲ. ವ್ಯಾಪಾರ– ವಹಿವಾಟು ಮಾಡುವ ಕೌಶಲವನ್ನು ಅವರಿಗೆ ಯಾರೂ ಕಲಿಸಿಲ್ಲ.
ಈಗ ಸರ್ಕಾರ ಕೂಡ ಮನೆ ಕಟ್ಟಿ ಕೊಡದೇ, ಹೊಲ ಕೊಡದೇ, ಕನಿಷ್ಠ ನಿವೇಶನವನ್ನೂ ನೀಡದೇ ಕಾಡಿನಿಂದ ಕಳುಹಿಸುತ್ತಿದೆ. ಕೈಯಲ್ಲಿದ್ದ ಪರಿಹಾರದ ಹಣ ಮುಗಿದ ಮೇಲೆ ಮುಂದೇನು ಎಂಬ ಬಗ್ಗೆ ಸರ್ಕಾರ ಯೋಚನೆಯನ್ನೂ ಮಾಡಿಲ್ಲ ಎಂಬುದು ಅವರಲ್ಲಿ ಅಡಗಿದ ನೋವು.
‘ನಿಯಮಬದ್ಧವಾಗಿಯೇ ಸ್ಥಳಾಂತರ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೇ ಹೇಳಿದ್ದಾರೆ. ಸ್ಥಳಾಂತರದ ಆಚೆಗೆ ಹೊಸ ಬದುಕು ಇದೆ, ಹೊಸ ಮನ್ವಂತರ ಆರಂಭವಾಗಬೇಕಿದೆ ಆ ನಿಯಮಗಳಿಗೆ ಯಾರು ಹೊಣೆ ಎಂಬುದು ಈ ಕಾಡಿನ ಕೂಸುಗಳ ಪ್ರಶ್ನೆ.
ಮುಂದೆ ಎಲ್ಲಿಗೆ ಹೋಗಬೇಕು ಎಂದು ಗೊತ್ತಿಲ್ಲ. ಒಂದು ಕಡೆ ನೆಲೆ ನಿಲ್ಲುವಂತೆ ಸರ್ಕಾರ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ದಿಕ್ಕಾಪಾಗುತ್ತೇವೆಜನಾರ್ದನ ವರಕ ತಳೇವಾಡಿ ನಿವಾಸಿ
ಕೇವಲ ಒಂದು ಎಕರೆ ಜಾಗದಲ್ಲಿ ಇಡೀ ಊರನ್ನು ಮತ್ತೆ ನಿರ್ಮಾಣ ಮಾಡಬಹುದು. ಇಲ್ಲದಿದ್ದರೆ ಸಂಬಂಧಿಕರೆಲ್ಲ ಚದುರಿಹೋಗಿ ಅಸ್ತಿತ್ವವೇ ಮಾಯವಾಗುತ್ತದೆಸುನೀಲ ದಬಾಲೆ ತಳೇವಾಡಿ ನಿವಾಸಿ
ಸ್ಥಳಾಂತರಗೊಂಡವರು ವಸತಿ ಯೋಜನೆಗಳ ಲಾಭ ಪಡೆಯಬಹುದು. ಇಷ್ಟಕ್ಕೇ ಕೈ ಬಿಡುವುದಿಲ್ಲ. ಮುಂದಿನ ದಿನಗಳಲ್ಲೂ ಅವರಿಗೆ ಸರ್ಕಾರ ಆಸರೆಯಾಗುತ್ತದೆಈಶ್ವರ ಖಂಡ್ರೆ ಅರಣ್ಯ ಸಚಿವ
₹15 ಲಕ್ಷ ಪರಿಹಾರ ಬದುಕಿಗೆ ಸಾಲುವುದಿಲ್ಲ. ದುಬಾರಿ ನಾಡಿನಲ್ಲಿ ಬದುಕು ಕಟ್ಟಿಕೊಳ್ಳಬೇಕಾಗಿದೆ. ಪರಿಹಾರ ಮೊತ್ತ ಹಚ್ಚಿಸಲು ಪ್ರಯತ್ನ ಮಾಡುಲಾಗುವುದುಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವ
ಸಚಿವರು ಬೆಂಗಳೂರಿಗೆ ಹೋಗಬೇಕೆಂದರೆ ಮೊದಲು ರೂಮ್ ಬುಕ್ ಮಾಡುತ್ತೀರಿ. ಕಾಡಿನಿಂದ ಹೊರ ಹೋಗುವವರಿಗೆ ನೆರಳಿನ ವ್ಯವಸ್ಥೆಯನ್ನೇ ಮಾಡದಿದ್ದರೆ ಹೇಗೆ?ವಿಠ್ಠಲ ಹಲಗೇಕರ ಶಾಸಕ ಖಾನಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.