ADVERTISEMENT

ಬೆಳಗಾವಿ | ಕನ್ನಡಿಗರಿಗೆ ಮೇಯರ್‌, ಮರಾಠಿಗರಿಗೆ ಉಪಮೇಯರ್‌?

ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ತಂತ್ರ ಹೆಣೆಯುತ್ತಿದೆ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 7:30 IST
Last Updated 15 ಫೆಬ್ರುವರಿ 2024, 7:30 IST
<div class="paragraphs"><p>ಬೆಳಗಾವಿ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಗುರುವಾರ ನಡೆದ ಮೇಯರ್, ಉಪಮೇಯರ್ ಚುನಾವಣೆ ಪ್ರಕ್ರಿಯೆಯಲ್ಲಿ ಕೇಸರಿ ಪೇಟಾ ಧರಿಸಿ ಪಾಲ್ಗೊಂಡ ಆಡಳಿತಾರೂಢ ಬಿಜೆಪಿ ಸದಸ್ಯರು.</p></div>

ಬೆಳಗಾವಿ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಗುರುವಾರ ನಡೆದ ಮೇಯರ್, ಉಪಮೇಯರ್ ಚುನಾವಣೆ ಪ್ರಕ್ರಿಯೆಯಲ್ಲಿ ಕೇಸರಿ ಪೇಟಾ ಧರಿಸಿ ಪಾಲ್ಗೊಂಡ ಆಡಳಿತಾರೂಢ ಬಿಜೆಪಿ ಸದಸ್ಯರು.

   

ಬೆಳಗಾವಿ: ಈ ಬಾರಿಯ ಮೇಯರ್‌ ಸ್ಥಾನವನ್ನು ಕನ್ನಡಿಗರಿಗೆ, ಉಪಮೇಯರ್ ಸ್ಥಾನವನ್ನು ಮರಾಠಿಗರಿಗೆ ನೀಡಲು ಬಿಜೆಪಿ ಮುಖಂಡರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲೋಕಸಭಾ ಚುನಾವಣೆಯಲ್ಲಿ ಕನ್ನಡ ಹಾಗೂ ಮರಾಠಿಗರ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಈ ತಂತ್ರ ಹೆಣೆದಿದೆ ಎನ್ನಲಾಗಿದೆ.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಗುರುವಾರ ಬೆಳಿಗ್ಗೆಯಿಂದಲೇ ಮೇಯರ್‌– ಉಪಮೇಯರ್‌ ಚುನಾವಣೆ ಚಟುವಟಿಕೆಗಳು ಬಿರುಸಿನಿಂದ ಸಾಗಿವೆ.

ADVERTISEMENT

ಮೇಯರ್ ಸ್ಥಾನ ಪರಿಶಿಷ್ಟ ಜಾತಿ (ಮಹಿಳೆ)ಗೆ ಮೀಸಲಾಗಿದೆ. ಆಡಳಿತಾರೂಢ ಬಿಜೆಪಿಯ 17ನೇ ವಾರ್ಡ್ ಸದಸ್ಯೆ ಸವಿತಾ ಕಾಂಬಳೆ ಹಾಗೂ 35ನೇ ವಾರ್ಡ್ ಸದಸ್ಯೆ ಲಕ್ಷ್ಮಿ ರಾಠೋಡ ನಾಮಪತ್ರ ಸಲ್ಲಿಸಿದ್ದಾರೆ.

ಉಪಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಬಿಜೆಪಿಯಿಂದ 44ನೇ ವಾರ್ಡ್ ಸದಸ್ಯ ಆನಂದ ಚೌಹ್ವಾನ್ ಹಾಗೂ 54ನೇ ವಾರ್ಡ್ ಸದಸ್ಯ ಮಹಾದೇವಿ ರಾಗೋಚೆ ನಾಮಪತ್ರ ಸಲ್ಲಿಸಿದ್ದಾರೆ.

ಮೇಯರ್ ಮೀಸಲಾತಿಯ ಕಾರಣ ವಿರೋಧ ಪಕ್ಷವಾದ ಕಾಂಗ್ರೆಸ್‌ನಿಂದ ಯಾರೂ ಸ್ಪರ್ಧೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ, ಮೇಯರ್‌ ಹುದ್ದೆ ಅವಿರೋಧವಾಗಿ ನಡೆಯುವ ಸಾಧ್ಯತೆ ಇದೆ.

ಉಪಮೇಯರ್‌ ಹುದ್ದೆ ಸಾಮಾನ್ಯವಾದ್ದರಿಂದ ಕಾಂಗ್ರೆಸ್‌ನಿಂದ ಶಹಮುದ್ದಿನ್ ಪಠಾಣ್‌ ಹಾಗೂ ಜ್ಯೋತಿ ಕಡೋಲ್ಕರ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಅವಿರೋಧ ಆಯ್ಕೆ ತಪ್ಪಿಸುವ ಉದ್ದೇಶದಿಂದ ಈ ಇಬ್ಬರೂ ನಾಮಪತ್ರ ಸಲ್ಲಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಲಕ್ಷ್ಮಿ ರಾಠೋಡ

ಸವಿತಾ ಕಾಂಬಳೆ

ರಠೋಡ ಪರ ಲಾಬಿ:

ಈ ಬಾರಿ ಸವಿತಾ ಕಾಂಬಳೆ ಅವರನ್ನು ಮೇಯರ್ ಮಾಡಿ, ಅವರ ಮೂಲಕ ದುಡಿಯುವ ವರ್ಗದ ಮತಗಳನ್ನು ಸೆಳೆಯಬೇಕು ಎಂಬುದು ಬಿಜೆಪಿ ಮುಖಂಡರ ಚಿಂತನೆ. ಆದರೆ, ಪಕ್ಷದಲ್ಲಿರುವ 35 ಸದಸ್ಯರ ಪೈಕಿ 25 ಜನ ಇದಕ್ಕೆ ವಿರೋಧ ನಿಲುವು ವ್ಯಕ್ತಪಡಿಸಿದ್ದಾರೆ ಎನ್ನುತ್ತವೆ ಮೂಲಗಳು.

ಲಕ್ಷ್ಮಿ ರಾಠೋಡ ಅವರನ್ನೇ ಅವಿರೋಧವಾಗಿ ಆಯ್ಕೆ ಮಾಡಿ, ಲಂಬಾಣಿ ಸಮುದಾಯಕ್ಕೆ ಆದ್ಯತೆ ನೀಡಬೇಕು ಎಂದು ಕುಡಚಿ ಕ್ಷೇತ್ರದ ಮಾಜಿ ಶಾಸಕ ಪಿ.ರಾಜೀವ ಒತ್ತಡ ಹೇರಿದ್ದಾರೆ. ಹೀಗಾಗಿ, ಯಾರನ್ನು ಮೇಯರ್‌ ಮಾಡಬೇಕು ಎಂಬ ಬಗ್ಗೆ ಇನ್ನೂ ಜಿದ್ದಾಜಿದ್ದಿನ ಮಾತುಕತಡೆ ನಡೆದಿದೆ ಎಂಬುದು ಸಭಾಂಗಣದೊಳಗಿಂದ ಬಂದ ಮಾಹಿತಿ.

ಶಾಸಕ ಅಭಯ ಪಾಟೀಲ ತೀರ್ಮಾಣವೇ ಅಂತಿಮ ಎಂದು ಕೆಲವು ಸದಸ್ಯರು ಮಾಹಿತಿ ನೀಡಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಸಂಸದೆ ಮಂಗಲಾ ಅಂಗಡಿ ಕೂಡ ಭಾಗಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಯಾವುದೇ ಸಚಿವರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು ಭಾಗವಹಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.