ಸಂತಿ ಬಸ್ತವಾಡ ಗ್ರಾಮದಲ್ಲಿ ಕುರಾನ್ ಸುಟ್ಟುಹಾಕಿದ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ, ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಮುಸ್ಲಿಂ ಯುವಕರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು
ಪ್ರಜಾವಾಣಿ ಚಿತ್ರ
ಬೆಳಗಾವಿ: ತಾಲ್ಲೂಕಿನ ಸಂತಿ ಬಸ್ತವಾಡ ಗ್ರಾಮದ ಮಸೀದಿಯಲ್ಲಿದ್ದ ಇಸ್ಲಾಂ ಧರ್ಮಗ್ರಂಥ ಕುರಾನ್ ಮತ್ತು ಹದೀಸ್‌ಅನ್ನು ಸೋಮವಾರ ಕಿಡಿಗೇಡಿಗಳು ಸುಟ್ಟು ಹಾಕಿದ್ದಾರೆ. ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿ, ಮುಸ್ಲಿಂ ಸಮಾಜದ ಯುವಕರು ರಾಣಿ ಚನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಮಾಡಿದರು.
ಸಂತಿ ಬಸ್ತವಾಡದಲ್ಲಿ ನಿರ್ಮಾಣ ಹಂತದ ಮಸೀದಿ ಕೆಳ ಮಹಡಿಯಲ್ಲಿ ಕುರಾನ್ ಮತ್ತು ಎರಡು ಹದೀಸ್‌ಗಳಿದ್ದವು. ಬೆಳಿಗ್ಗೆ ಪ್ರಾರ್ಥನೆ ವೇಳೆ ಅವೆರಡೂ ಕಾಣದಿದ್ದಾಗ, ಸ್ಥಳೀಯರು ಹುಡುಕಾಡಿದರು. ಮಸೀದಿ ಪಕ್ಕದ ಜಮೀನಿನಲ್ಲಿ ಅವು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದವು. ಇದರಿಂದ ಗ್ರಾಮದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸಂಚಾರ ಬಂದ್
ಸಂಜೆ 7ರ ಸುಮಾರಿಗೆ ಸಂತಿ ಬಸ್ತವಾಡದಿಂದ ನಗರದ ರಾಣಿ ಚನ್ನಮ್ಮ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ಮಾಡಿದ ಯುವಕರು, ವೃತ್ತದಲ್ಲಿ ಧರಣಿ ಕೂಡ ನಡೆಸಿದರು. ಆರೋಪಿಗಳನ್ನು ಬಂಧಿಸುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಶಾಸಕ ಆಸಿಫ್ ಸೇಠ್, ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ರೋಹನ್ ಜಗದೀಶ್ ಸ್ಥಳಕ್ಕೆ ಧಾವಿಸಿ ಯುವಜನರಿಗೆ ಮನವರಿಕೆ ಮಾಡಲು ಯತ್ನಿಸಿದರು.
ನಿರಂತರ ಘೋಷಣೆ ಮೊಳಗಿಸಿದ ಯುವಕರು ಎರಡು ತಾಸು ವೃತ್ತದ ಸಂಚಾರ ಬಂದ್ ಮಾಡಿದರು. ಇದರಿಂದ ವಾಹನಗಳು ಪರ್ಯಾಯ ಮಾರ್ಗದ ಮೂಲಕ ಸಾಗಿದವು. ರಾತ್ರಿ 7.30ರ ನಂತರ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು. ಆಗ ಚನ್ನಮ್ಮ ವೃತ್ತದ ಸಂಚಾರ ಆರಂಭವಾಯಿತು.
ಸ್ಥಳದಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗೃತಾ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.