ADVERTISEMENT

ಬೆಳಗಾವಿ|ಸಮುದಾಯ ಕಟ್ಟಿದವರನ್ನು ಪಕ್ಷ ಗುರುತಿಸಬೇಕಿತ್ತು: ವಿನಯ ಕುಲಕರ್ಣಿ ಅಸಮಾಧಾನ

ಖಾತೆ ಹಂಚಿಕೆಯಲ್ಲೂ ಲಿಂಗಾಯತರಿಗೆ ಅನ್ಯಾಯ, ಹಿಂದೆ ಮಾಡಿದ ಅನ್ಯಾಯ ಪುನರಾವರ್ತನೆಯಾಗದಿರಲಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 14:05 IST
Last Updated 4 ಜೂನ್ 2023, 14:05 IST
ಶಾಸಕ ವಿನಯ ಕುಲಕರ್ಣಿ
ಶಾಸಕ ವಿನಯ ಕುಲಕರ್ಣಿ   

ಬೆಳಗಾವಿ: ‘ರಾಜ್ಯದಲ್ಲಿ ವೀರೇಂದ್ರ ಪಾಟೀಲ ಅವರ ನೇತೃತ್ವದ ಬಳಿಕ, ಈ ಬಾರಿಯೇ ಕಾಂಗ್ರೆಸ್‌ಗೆ ದೊಡ್ಡ ಮಟ್ಟದಲ್ಲಿ ಬಹುಮತ ಸಿಕ್ಕಿದೆ. ಆದರೆ, ನಮ್ಮ ಸಮುದಾಯಕ್ಕೆ ಹಿಂದೆ ಮಾಡಿದ ಅನ್ಯಾಯ ಪುನರಾವರ್ತನೆಯಾಗಬಾರದು’ ಎಂದು ಶಾಸಕ ವಿನಯ ಕುಲಕರ್ಣಿ ವಿನಂತಿಸಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದಿನ ಚುನಾವಣೆಗಳಲ್ಲಿ ನಮ್ಮ ಸಮುದಾಯದವರು ಕಾಂಗ್ರೆಸ್‌ಗೆ ಕಡಿಮೆ ಪ್ರಮಾಣದಲ್ಲಿ ಮತ ನೀಡಿದ್ದರು. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿದ್ದರಿಂದ ಕಾಂಗ್ರೆಸ್‌ 135 ಸ್ಥಾನ ಗೆಲ್ಲಲು ಸಾಧ್ಯವಾಗಿದೆ. ನಮ್ಮ ಸಮುದಾಯಕ್ಕೆ ಒತ್ತು ನೀಡದಿದ್ದರೆ, ಕಾಂಗ್ರೆಸ್ ಪರಿಸ್ಥಿತಿ ಇಷ್ಟು ವರ್ಷ ಏನಾಗಿತ್ತು ಎಂಬುದನ್ನು ಪಕ್ಷದ ಮುಖಂಡರು ಗಮನದಲ್ಲಿ ಇರಿಸಿಕೊಳ್ಳಬೇಕು’ ಎಂದು ಹೇಳಿದರು.

ಪಂಚಮಸಾಲಿ‌ ಮೀಸಲಾತಿ ಹೋರಾಟ ಮುನ್ನಡೆಸಿದವರಿಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಪ್ರತಿಕ್ರಿಯಿಸಿದ ವಿನಯ, ‘ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿ ಪಂಚಮಸಾಲಿ ಸಮುದಾಯದ 13 ಜನರು ಆಯ್ಕೆಯಾಗಿದ್ದೇವೆ. ಯಾರು ಸಮುದಾಯ ಕಟ್ಟುವ ಕೆಲಸವನ್ನು ಮಾಡಿದ್ದರೋ ಅವರನ್ನು ಪಕ್ಷ ಗುರುತಿಸಬೇಕಿತ್ತು. ಆದರೆ, ಆ ಕೆಲಸವಾಗಿಲ್ಲ. ಇದನ್ನು ಸಮುದಾಯ ಬಹಳ ಸೂಕ್ಷ್ಮವಾಗಿ ಗಮನಿಸುತ್ತದೆ. ಈ ವಿಚಾರ ಲೋಕಸಭೆ ಚುನಾವಣೆ ಮೇಲೆ ಪ್ರಭಾವ ಬೀರಲಿದೆ. ಖಾತೆ ಹಂಚಿಕೆಯಲ್ಲೂ ಲಿಂಗಾಯತರಿಗೆ ಅನ್ಯಾಯವಾಗಿದೆ’ ಎಂದರು.

ADVERTISEMENT

‘ಸಂಪುಟ ವಿಸ್ತರಣೆಯಲ್ಲಿ ನಮ್ಮ ಸಮುದಾಯವಷ್ಟೇ ಅಲ್ಲ; ಬೇರೆ ಸಮುದಾಯಗಳಿಗೂ ಅವಕಾಶ ಸಿಗಬೇಕಿದೆ. ಹಿಂದೆ ಸಚಿವರಾಗಿದ್ದವರಿಗೆ ಮತ್ತೆ ಅವಕಾಶ ಕೊಡುವಂಥದ್ದೇನಿದೆ? ಯುವಕರಿಗೆ ಸ್ಥಾನ ಬಿಟ್ಟುಕೊಡುವಂತೆ ಕೇಳುತ್ತೇವೆ. ಭವಿಷ್ಯದಲ್ಲಿ ಹೊಸ ನಾಯಕರನ್ನು ಸೃಷ್ಟಿಸಬೇಕಿದೆ’ ಎಂದು ಹೇಳಿದರು.

ದೇಸಿತಳಿ ಹಸು ಉಳಿಸಲು ಯೋಜನೆ ರೂಪಿಸಲಿ’ ಬೆಳಗಾವಿ: ‘ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಮಾತನಾಡುವ ಬಿಜೆಪಿಯ ಯಾವ ನಾಯಕರೂ ತಮ್ಮ ಮನೆಯಲ್ಲಿ ಹಸು ಸಾಕಿಲ್ಲ. ಪ್ಲಾಸ್ಟಿಕ್ ಆಕಳನ್ನು ಕಟ್ಟಿ ಪೂಜಿಸುವ ಅವರು ಮನೆಯಲ್ಲೊಂದು ಆಕಳು ಕಟ್ಟಿ ಮಾತನಾಡಲಿ. ದೇಸಿ ತಳಿಯ ಹಸುಗಳನ್ನು ಉಳಿಸಲು ಸರ್ಕಾರ ಯೋಜನೆಗಳನ್ನು ರೂಪಿಸಲಿ’ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು. ‘ನಾವೆಲ್ಲ ಡೈರಿ ಫಾರ್ಮರ್ಸ್‌. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಕಳು (1600) ಸಾಕಿದವ ನಾನು. ಆದರೆ ಈಗ ಕೃಷಿ ಚಟುವಟಿಕೆಯಲ್ಲಿ ಹೆಚ್ಚಿನವರು ಆಕಳು ಬಳಸುತ್ತಿಲ್ಲ. ಅವುಗಳಿಗೆ ಸರಿಯಾಗಿ ಮೇವು ಸಿಗದ್ದರಿಂದ ಸಾಕುವುದೇ ಕಷ್ಟವಾಗಿದೆ. ಹೀಗಿರುವಾಗ ವಯಸ್ಸಾದ ಮತ್ತು ಬರಡು ಬಿದ್ದ ಆಕಳುಗಳನ್ನು ಏನು‌ ಮಾಡೋದು?’ ಎಂದು ಪ್ರಶ್ನಿಸಿದರು. ‘ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಯಾಗಬೇಕು. ಗೋಮಾತೆ ಹೆಸರಿನಲ್ಲಿ ರಾಜಕೀಯ ಮಾಡುವವರು ಜಾತಿವಾದಿಗಳನ್ನು  ಬಿಟ್ಟು ದನ–ಕರುಗಳನ್ನು ಸಾಕುವವರು ಹಾಲಿನ ಡೈರಿಗಳ ಮಾಲೀಕರು ಮತ್ತು ರೈತರ ವಿಚಾರಗಳನ್ನು ಅರಿಯಬೇಕು’ ಎಂದು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.