ADVERTISEMENT

‘ರೈತರಿಗಾಗಿ ₹10 ಕೋಟಿ ವಿನಿಯೋಗ’

ವಿವಿಧ ಸಲಕರಣೆಗಳನ್ನು ವಿತರಿಸಿದ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 2:40 IST
Last Updated 19 ಆಗಸ್ಟ್ 2025, 2:40 IST
ಬೆಳಗಾವಿಯಲ್ಲಿ ಭಾನುವಾರ ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ರೈತರಿಗೆ ₹6 ಕೋಟಿ ವೆಚ್ಚದಲ್ಲಿ ಸಲಕರಣೆಗಳನ್ನು ವಿತರಿಸಿದರು
ಬೆಳಗಾವಿಯಲ್ಲಿ ಭಾನುವಾರ ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ರೈತರಿಗೆ ₹6 ಕೋಟಿ ವೆಚ್ಚದಲ್ಲಿ ಸಲಕರಣೆಗಳನ್ನು ವಿತರಿಸಿದರು   

ಬೆಳಗಾವಿ: ‘ಜಿಲ್ಲಾ ಹಾಲು ಒಕ್ಕೂಟಕ್ಕೆ ಕಳೆದ ವರ್ಷ ಸುಮಾರು ₹13 ಕೋಟಿ ಲಾಭವಾಗಿದ್ದು, ಇದರಲ್ಲಿ ₹10 ಕೋಟಿ ಹಣವನ್ನು ರೈತರಿಗಾಗಿಯೇ ವಿವಿಧ ಯೋಜನೆಗಳಿಗಾಗಿ ಮೀಸಲಿಡಲಾಗಿದೆ’ ಎಂದು ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ನಗರದ ಜಿಲ್ಲಾ ಹಾಲು ಒಕ್ಕೂಟದ ಸಭಾಗೃಹದಲ್ಲಿ ಭಾನುವಾರ ₹6 ಕೋಟಿ ವೆಚ್ಚದಲ್ಲಿ ರೈತರಿಗೆ ವಿವಿಧ ಸಲಕರಣೆಗಳನ್ನು ವಿತರಿಸಿ ಮಾತನಾಡಿದ ಅವರು, ‘ಲಾಭದ ಹಂಚಿಕೆಯಲ್ಲಿ ರೈತರಿಗೆ ಅನೇಕ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಈಗಾಗಲೇ ಶೇ 60ರಷ್ಟು ರಿಯಾಯಿತಿ ದರದಲ್ಲಿ ವಿವಿಧ ಸಾಮಗ್ರಿಗಳನ್ನು ವಿತರಿಸಲು ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲ 15 ತಾಲ್ಲೂಕು ಕೇಂದ್ರಗಳಲ್ಲಿ ಮಾಡಲು ನಿರ್ಧರಿಸಲಾಗಿದೆ’ ಎಂದರು.

‘ಪ್ರಸ್ತುತ ಆಕಳು ಹಾಲಿಗೆ ₹38 ಮತ್ತು ಎಮ್ಮೆ ಹಾಲಿಗೆ ₹52 ದರವಿದೆ. ಗ್ರಾಹಕರಿಂದ ಹೆಚ್ಚಿನ ಪ್ರಮಾಣದಲ್ಲಿ ಎಮ್ಮೆ ಹಾಲಿಗೆ ಬೇಡಿಕೆ ಬರುತ್ತಿದೆ. ಹಾಲು ಪೂರೈಕೆ ಮಾಡುತ್ತಿರುವ ರೈತರಿಗೆ 10 ದಿನಗಳೊಳಗೆ ಬಿಲ್ಲನ್ನು ಸಂದಾಯ ಮಾಡುತ್ತಿದ್ದೇವೆ. ರೈತರು ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಿ ಅವರನ್ನು ಬಲಶಾಲಿಗಳನ್ನಾಗಿ ಮಾಡಲು ನಮ್ಮ ಒಕ್ಕೂಟದಿಂದ ಅನೇಕ ಸೌಲಭ್ಯಗಳನ್ನು ದೊರಕಿಸಿಕೊಡಲು ಸಿದ್ಧರಿದ್ದೇವೆ. ರೈತರೇ ಈ ದೇಶದ ಆಸ್ತಿಯಾಗಿದ್ದು, ಅವರನ್ನು ಆರ್ಥಿಕವಾಗಿ ಬಲಾಢ್ಯರನ್ನಾಗಿ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ’ ಎಂದು ತಿಳಿಸಿದರು.

ADVERTISEMENT

ಇದೇ ಸಂದರ್ಭದಲ್ಲಿ ₹2.26 ಕೋಟಿ ಮೊತ್ತದ 3.5 ಮೆಟ್ರಿಕ್‌ ಟನ್ ಸಾಮರ್ಥ್ಯದ ಮಲ್ಟಿ ಪ್ಯೂಯಲ್ ಬಾಯ್ಲರ್‌ಅನ್ನು ಉದ್ಘಾಟಿಸಿದರು.

ಒಕ್ಕೂಟದ ನಿರ್ದೇಶಕರಾದ ಬಾಬು ಕಟ್ಟಿ, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಗಿರೆಣ್ಣವರ, ಡಾ.ಬಸವರಾಜ ಪರಣ್ಣವರ, ಬಾಬುರಾವ ವಾಘಮೋಡೆ, ವಿರೂಪಾಕ್ಷಿ ಈಟಿ, ರಾಯಪ್ಪ ಡೂಗ, ಪ್ರಕಾಶ ಅಂಬೋಜಿ, ಮಹಾದೇವ ಬಿಳಿಕುರಿ, ಸಂಜಯ ಶಿಂತ್ರೆ, ರಮೇಶ ಅಣ್ಣಿಗೇರಿ, ಸದೆಪ್ಪ ವಾರಿ, ಶಂಕರ ಇಟ್ನಾಳ, ಸವಿತಾ ಖಾನಪ್ಪಗೋಳ, ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎನ್. ಶ್ರೀಕಾಂತ ಇದ್ದರು.

ರೈತರಿಗೆ ಒದಗಿಸುವ ಸೌಕರ್ಯಗಳು

‘₹2.46 ಕೋಟಿ ವೆಚ್ಚದಲ್ಲಿ 3100 ಫಲಾನುಭವಿಗಳಿಗೆ 10 ಸಾವಿರ ರಬ್ಬರ್ ಮ್ಯಾಟ್‌ಗಳನ್ನು ಖರೀದಿಯನ್ನು ಮಾಡಲಾಗಿದೆ. ₹86.10 ಲಕ್ಷ ವೆಚ್ಚದಲ್ಲಿ 350 ಫಲಾನುಭವಿಗಳಿಗೆ ವಿದ್ಯುತ್ ಚಾಲಿತ 2 ಎಚ್.ಪಿ. ಮೇವು ಕತ್ತರಿಸುವ ಯಂತ್ರಗಳು ₹13.95 ಲಕ್ಷ ವೆಚ್ಚದಲ್ಲಿ 50 ಫಲಾನುಭವಿಗಳಿಗೆ ವಿದ್ಯುತ್ ಚಾಲಿತ ಹಾಲು ಕರೆಯುವ ಯಂತ್ರಗಳನ್ನು ಖರೀದಿಸಲಾಗಿದೆ.  ಸ್ವಂತ ಕಟ್ಟಡ ಹೊಂದಿರುವ 40 ಸಂಘಗಳಿಗೆ ತಲಾ ₹5 ಲಕ್ಷದಂತೆ ಒಟ್ಟು ₹2 ಕೋಟಿ ಸಹಾಯಧನ ನೀಡಲಾಗುತ್ತಿದೆ. 15 ಹೊಸ ಬಿಎಂಸಿ ಘಟಕಗಳನ್ನು ಖರೀದಿಸಲು ₹1.72 ಕೋಟಿ (ಶೇ 100 ರಿಯಾಯಿತಿ) ಸೇರಿದಂತೆ ಸುಮಾರು ₹6 ಕೋಟಿ ವೆಚ್ಚದ ಸಾಮಗ್ರಿಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಒಟ್ಟಾರೆ ₹10 ಕೋಟಿಯನ್ನು ಹೈನುಗಾರ ರೈತರ ಅನುಕೂಲಕ್ಕಾಗಿ ಸದ್ಭಳಕೆ ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.