ADVERTISEMENT

ಬೆಳಗಾವಿ: ಗೃಹಿಣಿ ಸ್ವಾತಿ ಸಾವು; ತನಿಖೆಗೆ ಆಗ್ರಹ

ನಗರ ಪೊಲೀಸ್‌ ಕಮಿಷನರ್‌ ಕಚೇರಿ ಆವರಣದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 2:50 IST
Last Updated 1 ಆಗಸ್ಟ್ 2025, 2:50 IST
ಬೆಳಗಾವಿ ಪೊಲೀಸ್‌ ಕಮಿಷನರ್‌ ಕಚೇರಿ ಆವರಣದಲ್ಲಿ ಮಚ್ಛೆಯ ಮಹಿಳೆಯರು ಗುರುವಾರ ಪ್ರತಿಭಟನೆ ನಡೆಸಿದರು   ಪ್ರಜಾವಾಣಿ ಚಿತ್ರ 
ಬೆಳಗಾವಿ ಪೊಲೀಸ್‌ ಕಮಿಷನರ್‌ ಕಚೇರಿ ಆವರಣದಲ್ಲಿ ಮಚ್ಛೆಯ ಮಹಿಳೆಯರು ಗುರುವಾರ ಪ್ರತಿಭಟನೆ ನಡೆಸಿದರು   ಪ್ರಜಾವಾಣಿ ಚಿತ್ರ    

ಬೆಳಗಾವಿ: ‘ಬೆಂಗಳೂರಿನಲ್ಲಿ ಜುಲೈ 12ರಂದು ಸ್ವಾತಿ ಸನದಿ ಅಸಹಜವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ, ನ್ಯಾಯಯುತವಾಗಿ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿ ಬಿಜೆಪಿ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಡಾ.ಸೋನಾಲಿ ಸರ್ನೋಬತ್ ನೇತೃತ್ವದಲ್ಲಿ ತಾಲ್ಲೂಕಿನ ಮಚ್ಛೆಯ ಮಹಿಳೆಯರು ನಗರ ಪೊಲೀಸ್‌ ಕಮಿಷನರ್‌ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. 

ನಂತರ ಪೊಲೀಸ್‌ ಕಮಿಷನರ್‌ ಭೂಷಣ ಬೊರಸೆ ಅವರಿಗೆ ಮನವಿ ಸಲ್ಲಿಸಿದರು.

‘ಮಚ್ಛೆಯ ಶ್ರೀಧರ ಮತ್ತು ಸ್ವಾತಿ 18 ತಿಂಗಳ ಹಿಂದೆ ವಿವಾಹವಾಗಿದ್ದರು. ಆರಂಭದಲ್ಲಿ ಸಂಸಾರ ಸುಖವಾಗಿತ್ತು. ನಂತರದ ದಿನಗಳಲ್ಲಿ ಶ್ರೀಧರ, ಅವರ ಅಕ್ಕ ಹಾಗೂ ಅಮ್ಮ ಸೇರಿಕೊಂಡು ಸ್ವಾತಿ ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರಿನ ತಮ್ಮ ಮನೆಯಲ್ಲಿ ಸ್ವಾತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪತಿ ಮನೆಯವರೇ ಕೊಲೆ ಮಾಡಿದ ಸಂಶಯ ಮೂಡಿದೆ. ಈ ಸಂಬಂಧ ಸ್ವಾತಿ ಕುಟುಂಬಸ್ಥರು ಕೆ.ಆರ್‌.ಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  ಆದರೆ, ಅಲ್ಲಿನ ಪೊಲೀಸರು ಸಂತ್ರಸ್ತೆ ಕುಟುಂಬದ ಹೇಳಿಕೆ ಸ್ವೀಕರಿಸಿಲ್ಲ. ಹಾಗಾಗಿ ಈ ಪ್ರಕರಣದ ಕುರಿತು  ನ್ಯಾಯಯುತವಾಗಿ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಸ್ವಾತಿ ಮರಣೋತ್ತರ ಪರೀಕ್ಷೆ ವರದಿಗಳನ್ನು ಬಹಿರಂಗಪಡಿಸಬೇಕು. ಈ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ತ್ವರಿತವಾಗಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುಡಸ ಗ್ರಾಮದ ಕುರಿಗಾಹಿಗಳು ಪ್ರತಿಭಟನೆ ನಡೆಸಿದರು 

ಅತಿಕ್ರಮಣ ತೆರವಿಗೆ ಆಗ್ರಹ

‘ಹುಕ್ಕೇರಿ ತಾಲ್ಲೂಕಿನ ಗುಡಸ ಗ್ರಾಮದಲ್ಲಿ ಗಾಯರಾಣ ಜಮೀನು ಅತಿಕ್ರಮಣ ಮಾಡಿರುವುದನ್ನು ತೆರವುಗೊಳಿಸಬೇಕು’ ಎಂದು ಒತ್ತಾಯಿಸಿ ಗುಡಸದ ಕುರಿಗಾಹಿಗಳು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ‘ಗುಡಸದಲ್ಲಿ ಗಾಯರಾಣ ಜಮೀನನ್ನು ಕೆಲವರು ಅತಿಕ್ರಮಣ ಮಾಡಿದ್ದಾರೆ. ಅದನ್ನು ತೆರವುಗೊಳಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ತಕ್ಷಣವೇ ಅತಿಕ್ರಮಣ ತೆರವು ಮಾಡಿ ನಮಗೆ ಅನುಕೂಲ ಕಲ್ಪಿಸಬೇಕು’ ಎಂದು ಆಗ್ರಹಿಸಿದರು. ಸಿಂಧೂರ ಕುರಿಗಾರ ಬಸವಣ್ಣಿ ನಿಡಸೋಸಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.