ADVERTISEMENT

ನಾವು ಸಚಿವರಾಗೋದು ನಮ್ಮ ಕೈಲಿಲ್ಲ: ಶಾಸಕ ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 14:08 IST
Last Updated 19 ಡಿಸೆಂಬರ್ 2019, 14:08 IST

ಬೆಳಗಾವಿ: ‘ನಾವು ಸಚಿವರಾಗುವುದು ನಮ್ಮ ಕೈಯಲ್ಲಿಲ್ಲ. ಅದನ್ನು ಹೈಕಮಾಂಡ್ ನಿರ್ಧರಿಸಲಿದೆ’ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಸಾಂಬ್ರಾ ವಿಮಾನನಿಲ್ದಾಣದಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವುದು ಮುಖ್ಯಮಂತ್ರಿಗಿರುವ ಪರಮಾಧಿಕಾರವಾಗಿದೆ. ಅವರೇ ತೀರ್ಮಾನಿಸಲಿದ್ದಾರೆ. ನಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತಾರೋ, ಇಲ್ಲವೋ ಗೊತ್ತಿಲ್ಲ’ ಎಂದರು.

‘ಗೋಕಾಕ ಉಪ ಚುನಾವಣೆಯಲ್ಲಿ ಗೆದ್ದದ್ದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಹೊರತು ರಮೇಶ ಜಾರಕಿಹೊಳಿ‌ ಅಲ್ಲ’ ಎಂಬ ಸೋದರ ಲಖನ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಹೌದು. ಯಡಿಯೂರಪ್ಪನವರೇ ನಮ್ಮನ್ನು ಗೆಲ್ಲಿಸಿದ್ದು. ನನಗೆ ಸಾವಿರ ಮತಗಳನ್ನು ಪಡೆಯುವಷ್ಟೂ ಸಾಮರ್ಥ್ಯವಿಲ್ಲ’ ಎಂದು ತಿರುಗೇಟು ನೀಡಿದರು.

ADVERTISEMENT

‘ಸತೀಶ ಜಾರಕಿಹೊಳಿ‌ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಹುಚ್ಚು ನಾಯಿಗೆ ಕಲ್ಲು ಹೊಡೆಯಬೇಕಷ್ಟೇ, ಮತ್ತೇನೂ ಮಾಡಲಾಗುವುದಿಲ್ಲ’ ಎಂದು ಸೋದರನನ್ನು ಹುಚ್ಚು ನಾಯಿಗೆ ಹೋಲಿಸಿದರು.

‘ಮಹದಾಯಿ ವಿವಾದದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಅದರ ಬಗ್ಗೆ ತಿಳಿದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ’ ಎಂದರು.

‘ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಭಾರತದ ಮುಸ್ಲಿಮರು‌ ಹೆದರುವ ಅಗತ್ಯವಿಲ್ಲ. ಈ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಯಾರದೋ ಮಾತು ಕೇಳಿಕೊಂಡು ಗಲಾಟೆ ಮಾಡುವುದು ಒಳ್ಳೆಯದಲ್ಲ. ಆತಂಕವಿದ್ದರೆ ಚರ್ಚಿಸಿ ಸರಿಪಡಿಸಿಕೊಳ್ಳಬಹುದು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.