ಬೆಳಗಾವಿ: ‘ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಮೇಲೆ ದಾಳಿ ಮಾಡಿದ ಘಟನೆ ಖಂಡಿಸಿ ಮೇ 24ರಂದು ಕಲಬುರ್ಗಿ ಚಲೋ ಆಯೋಜಿಸಲಾಗಿದೆ. ರಾಜ್ಯದ ಮೂಲೆಮೂಲೆಯಿಂದ ಬಿಜೆಪಿ ಕಾರ್ಯಕರ್ತರು ಬರಲಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾರಾಯಣಸ್ವಾಮಿ ಅವರಿಗೆ ಕಲಬುರಗಿಯಲ್ಲಿ ಐದು ತಾಸು ದಿಗ್ಬಂಧನ ಹಾಕಲಾಗಿದೆ. ಕಾಂಗ್ರೆಸ್‌ನ ಗೂಂಡಾಗಳನ್ನು ಬಳಸಿ ಕೊಲೆ ಮಾಡಿಸುವ ಹುನ್ನಾರ ನಡೆದಿದೆ. ಇಡೀ ಜಿಲ್ಲೆಯನ್ನು ಖರ್ಗೆ ಕುಟುಂಬದವರು ತಮ್ಮ ‘ರಿಪಬ್ಲಿಕ್’ ಮಾಡಿಕೊಂಡಿದ್ದಾರೆ’ ಎಂದರು.
‘ವಿಪಕ್ಷ ನಾಯಕ ಹುದ್ದೆಯು ಮುಖ್ಯಮಂತ್ರಿಯ ನೆರಳು ಇದ್ದಂತೆ. ಅವರಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಕಲಬುರಗಿ ಪೊಲೀಸರು ಸಚಿವ ಪ್ರಿಯಾಂಕ್ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಬೆರಳೆಣಿಕೆಯಷ್ಟು ಇದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ನಿಯಂತ್ರಣ ಮಾಡಿಲ್ಲ’ ಎಂದೂ ಆರೋಪಿಸಿದರು.
‘ಖರ್ಗೆ ಕುಟುಂಬದವರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಈ ಹಿಂದೆ ನಾರಾಯಣಸ್ವಾಮಿ ಈ ಕುಟುಂಬದ ಅಕ್ರಮ ಬಯಲಿಗೆ ಎಳೆದಿದ್ದರು. ಕೆಐಎಡಿಬಿಯಿಂದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಅಕ್ರಮವಾಗಿ ಪಡೆದಿದ್ದ 5 ಎಕರೆ ಜಮೀನನ್ನು ವಾಪಸ್ ಕೊಡುವಂತೆ ಮಾಡಿದ್ದರು. ಅದರ ಸೇಡಿಗಾಗಿ ಸಚಿವ ಪ್ರಿಯಾಂಕ್ ಖರ್ಗೆ ನಾರಾಯಣಸ್ವಾಮಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ’ ಎಂದರು.
‘ಯಾವಾಗಲೂ ಸಂವಿಧಾನ ರಕ್ಷಣೆ ಮಾಡುತ್ತೇವೆ ಎಂದು ಬಾಯಿ ಬಡಿದುಕೊಳ್ಳುವ ಕಾಂಗ್ರೆಸ್ಸಿಗರು ಕಲಬುರಗಿಯಲ್ಲಿ ಸಂವಿಧಾನ ವಿರೋಧಿ ಕೃತ್ಯ ಎಸಗಿದ್ದಾರೆ. ಇವರ ನಿಜವಾದ ಬಣ್ಣ ಬಯಲಾಗಿದೆ. ಜನಪ್ರತಿನಿಧಿ ಮೇಲೆ ಇಂತಹ ದೌರ್ಜನ್ಯ ನಡೆದ ಮೇಲೆ ಜಿ.ಪರಮೇಶ್ವರ ಅವರು ಗೃಹಮಂತ್ರಿ ಸ್ಥಾನದಲ್ಲಿ ಉಳಿಯುವ ನೈತಿಕ ಹಕ್ಕು ಹೊಂದಿಲ್ಲ. ಕೂಡಲೇ ಅವರು ರಾಜೀನಾಮೇ ನೀಡಬೇಕು’ ಎಂದೂ ಆಗ್ರಹಿಸಿದರು.
ಪಕ್ಷದ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಸುಭಾಷ್ ಪಾಟೀಲ ಮಾತನಾಡಿದರು. ಬಿಜೆಪಿ ಜಿಲ್ಲಾ ಪ್ರಭಾರಿಗಳಾದ ರಮೇಶ್ ದೇಶಪಾಂಡೆ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಾದಮ್ಮನವರ, ರಾಜಶೇಖರ್ ಡೋಣಿ, ಈರಯ್ಯ ಖೋತ್, ಮಹಾನಗರ ಜಿಲ್ಲಾ ಮಾಧ್ಯಮ ಪ್ರಮುಖ ಹನುಮಂತ ಕೊಂಗಾಲಿ, ಎಸ್.ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಯಲ್ಲೇಶ ಕೊಲಕಾರ, ಗ್ರಾಮಾಂತರ ಜಿಲ್ಲಾ ಮಾಧ್ಯಮ ಪ್ರಮುಖ ಸಚಿನ್ ಕಡಿ, ಸಾಮಾಜಿಕ ಜಾಲತಾಣ ಸಹ ಸಂಚಾಲಕ ಮನೋಜ್ ಪಾಟೀಲ, ವೀರಭದ್ರ ಪೂಜಾರಿ ಹಾಗೂ ಪ್ರಮುಖರು ಇದ್ದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಶನಿವಾರ ಕಲಬುರಗಿ ಚಲೋ ಆಯೋಜಿಸಿದ್ದು ಜಿಲ್ಲೆಯಿಂದ ಹೆಚ್ಚಿನ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆಸುಭಾಷ್ ಪಾಟೀಲ ಅಧ್ಯಕ್ಷ ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.