ಬೆಳಗಾವಿ: ಗಡಿ ವಿವಾದದ ವಿಷಯ ಇದೆ ಎನ್ನಲಾದ ‘ಪಾಲೋವರ್’ ಕನ್ನಡ ಚಲನಚಿತ್ರ ಪ್ರದರ್ಶನಕ್ಕೆ, ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಜಿಲ್ಲಾ ಘಟಕದ ಕಾರ್ಯಕರ್ತರು ತಡೆಯೊಡ್ಡಿದರು.
ಇಲ್ಲಿನ ಐನಾಕ್ಸ್ ಮಲ್ಪಿಫ್ಲೆಕ್ಸ್‌ನಲ್ಲಿ ಶುಕ್ರವಾರ ರಾತ್ರಿ 8ಕ್ಕೆ ಇದರ ಮೊದಲ ಪ್ರದರ್ಶನವಿತ್ತು. ಚಲನಚಿತ್ರದಲ್ಲಿ ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದ ವಿಷಯ ಎತ್ತಲಾಗಿದೆ ಎಂದು ಆರೋಪಿಸಿ ಪ್ರದರ್ಶನಕ್ಕೆ ಅಡ್ಡಿಪಡಿಸಲಾಯಿತು.
ಬಿಇ ಪದವೀಧರ ಹರ್ಷದ್ ನಲವಡೆ ಈ ಚಿತ್ರ ನಿರ್ಮಿಸಿದ್ದಾರೆ. ಸಿನಿಮಾದ ಟ್ರೈಲರ್‌ನಲ್ಲಿ ‘ಯಳ್ಳೂರು– ಮಹಾರಾಷ್ಟ್ರ ರಾಜ್ಯ’ ಎಂಬ ಬೋರ್ಡ್ ತೋರಿಸಲಾಗಿದೆ. ಇದನ್ನು ಗಮನಿಸಿ ಕರವೇ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಈ ವೇಳೆ ಚಿತ್ರಮಂದಿರದ ಸಿಬ್ಬಂದಿ ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.
ಈ ಆರೋಪ ತಳ್ಳಿಹಾಕಿದ ಚಿತ್ರತಂಡದವರು, ‘ನಾವು ಕನ್ನಡಿಗರೇ ಆಗಿದ್ದೇವೆ. ಕನ್ನಡದಲ್ಲೇ ಸಿನಿಮಾ ಮಾಡಿದ್ದೇವೆ. ಇದರಲ್ಲಿ ಗಡಿ ವಿವಾದದ ಯಾವುದೇ ವಿಷಯ ಇಲ್ಲ. ಏಳು ವರ್ಷ ಕಷ್ಟಪಟ್ಟು ಚಿತ್ರ ನಿರ್ಮಿಸಿದ್ದೇವೆ. ಹೋರಾಟಗಾರರು ಮೊದಲು ಚಿತ್ರ ವೀಕ್ಷಿಸಿ ನಂತರ ಹೋರಾಟ ಮಾಡಲಿ’ ಎಂದರು.
ಖಡೇಬಜಾರ್ ಎಸಿಪಿ ಶೇಖರಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಚಿತ್ರ ಪ್ರದರ್ಶನ ರದ್ದಾದ ಕಾರಣ, ಎಲ್ಲ ಪ್ರೇಕ್ಷಕರ ಹಣವನ್ನೂ ಮರಳಿ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.