ನಿಪ್ಪಾಣಿ: ‘ಲೋಕೋಪಯೋಗಿ ಇಲಾಖೆ ಅಧೀನದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ನಿಪ್ಪಾಣಿ ಕ್ಷೇತ್ರದ ವ್ಯಾಪ್ತಿಯಲ್ಲಿ ಭೋಜ-ಕಾರದಗಾ ರಸ್ತೆಯಲ್ಲಿ ದೂದಗಂಗಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ಟರ್ನ್‍ಕೀ ಆಧಾರದ ಮೇಲೆ ₹13.37 ಕೋಟಿ ಮೊತ್ತದ ಗುತ್ತಿಗೆ ಕೈಗೆತ್ತಿ ಕೊಳ್ಳಲಾಗಿರುತ್ತದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಶಶಿಕಲಾ ಜೊಲ್ಲೆಯವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಕಾಮಗಾರಿಗೆ ಇಲ್ಲಿಯವರೆಗೆ ₹13.64 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಕಾಮಗಾರಿಯ ಪ್ರಗತಿಗೆ ಅನುಗುಣವಾಗಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಪ್ರಸ್ತುತ, ಸೇತುವೆ ಕಟ್ಟಡ ಭಾಗದ ಕಾಮಗಾರಿ ಪೂರ್ಣಗೊಂಡಿದ್ದು, ಸಂಪರ್ಕ ರಸ್ತೆಗಳ ನಿರ್ಮಾಣ ಕಾಮಗಾರಿ ಕೈಗೊಳ್ಳಬೇಕಾಗಿದೆ’ ಎಂದಿದ್ದಾರೆ.
‘ಭೋಜ-ಕಾರದಗಾ ಗ್ರಾಮಗಳ ಹತ್ತಿರ ದೂದಗಂಗಾ ನದಿಗೆ ಅಡ್ಡಲಾಗಿ ಕೈಗೊಳ್ಳಲಾಗಿರುವ ಸೇತುವೆ ನಿರ್ಮಾಣ ಕಾಮಗಾರಿಯ ಮೂಲ ಅಂದಾಜಿನಲ್ಲಿ 24.60 ಮೀಟರ್ ಉದ್ದದ 4 ಅಂಕಣಗಳುಳ್ಳ ಒಟ್ಟು 98.40 ಮೀಟರ್ ಉದ್ದದ ಸೇತುವೆ ನಿರ್ಮಿಸಲು ಯೋಜಿಸಲಾಗಿತ್ತು. ಆದರೆ 2019 ರಲ್ಲಿ ಉಂಟಾದ ಅನಿರೀಕ್ಷಿತ ಭಾರಿ ಪ್ರವಾಹದ ಪರಿಣಾಮವಾಗಿ ನದಿಯಲ್ಲಿ ಹರಿದ ಹೆಚ್ಚಿನ ನೀರಿನ ಮಟ್ಟಕ್ಕೆ ಅನುಗುಣವಾಗಿ ಸದರಿ ಸೇತುವೆಯ ಉದ್ದ ಮತ್ತು ಎತ್ತರವನ್ನು ಪರಿಷ್ಕರಿಸಿ, 24.60 ಮೀಟರ್ ಉದ್ದದ 6 ಅಂಕಣಗಳುಳ್ಳ ಒಟ್ಟು 147.60 ಮೀಟರ್ ಉದ್ದಕ್ಕೆ ಸೇತುವೆ ಮಟ್ಟವನ್ನು 0.78 ಮೀಟರ್ ಹೆಚ್ಚಿಸಿ ನಿರ್ಮಿಸಲು ಕ್ರಮಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.
‘ಪ್ರಸ್ತುತ, ಭೋಜ-ಕಾರದಗ-ರೇಂದಲ ರಸ್ತೆಯಲ್ಲಿ ದೂದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸೇತುವೆಯ ಕಟ್ಟಡ ಭಾಗದ ಕಾಮಗಾರಿ ಪೂರ್ಣಗೊಂಡಿದ್ದು, ಸಂಪರ್ಕ ರಸ್ತೆಗಳನ್ನು ನಿರ್ಮಿಸಬೇಕಿದೆ’ ಎಂದು ಹೇಳಿದರು.
‘ಈ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಪ್ರಗತಿಗೆ ಅನುಗುಣವಾಗಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲಾಗುತ್ತಿದ್ದು, ಪ್ರಸ್ತುತ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಅನುದಾನದ ಕೊರತೆ ಇರುವುದಿಲ್ಲ. ಸಂಪರ್ಕ ರಸ್ತೆ ಪ್ರಗತಿಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ಉತ್ತರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.