ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್
ಬೆಳಗಾವಿ: ‘ಜಾತಿ ಗಣತಿ ಕುರಿತು ವೈಜ್ಞಾನಿಕ ಹಾಗೂ ವೈಜ್ಞಾನಿಕ ಅಂಶಗಳ ಮುಕ್ತ ಚರ್ಚೆ ಆಗಬೇಕಿದೆ. ಅದಕ್ಕಾಗಿ ಸರ್ಕಾರ ಒಂದು ವಾರ ವಿಶೇಷ ಅಧಿವೇಶನ ಕರೆಯಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಆಗ್ರಹಿಸಿದರು.
‘ಬಿಜೆಪಿ ನಾಯಕರಲ್ಲಿ ಮತ್ತು ಕೆಲವು ಸಮುದಾಯಗಳ ನಾಯಕರಲ್ಲಿ ಈ ಜಾತಿ ಗಣತಿ ಬಗ್ಗೆ ಅಸಮಾಧಾನಗಳಿವೆ. ಇದು ಸೂಕ್ತವಾಗಿಲ್ಲ ಎಂಬ ದೂರುಗಳೂ ಇವೆ. ಹಾಗಾಗಿ, ಪರಾಮರ್ಶೆಗೆ ಅವಕಾಶ ನೀಡಬೇಕು’ ಎಂದು ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘2013–14ರಲ್ಲಿ ಈ ಜಾತಿಗಣತಿ ಸಮೀಕ್ಷೆ ಆಗಿದೆ. ಲಕ್ಷಾಂತರ ಮನೆಗಳಿಗೆ ಭೇಟಿ ನೀಡಲು ಆಗಿಲ್ಲ. ಸ್ವತಃ ನನ್ನ ಮನೆಗೇ ಯಾರೂ ಬಂದಿಲ್ಲ. ಹಾಗಾಗಿ, ಇದು ನಿಖರವಾಗಿದೆ ಎಂದು ಹೇಗೆ ಪರಿಗಣಿಸಲು ಸಾಧ್ಯ? ಈಗಾಗಲೇ ಸಣ್ಣಸಣ್ಣ ಸಮುದಾಯಗಳು ಸಾಕಷ್ಟು ಅನ್ಯಾಯಕ್ಕೆ ಒಳಗಾಗಿವೆ. ಅಂಥವರಿಗೆ ಆರ್ಥಿಕ ಹಾಗೂ ಸಾಮಾಜಿಕ ನ್ಯಾಯ ಸಿಗಬೇಕೆಂದರೆ ನಿಖರವಾದ ವರದಿಗಳು ಬೇಕು’ ಎಂದೂ ಹೇಳಿದರು.
‘ಈ ಸರ್ಕಾರ ಹಾಲಿನ ದರವನ್ನು ಮೂರು ಬಾರಿ ಏರಿಕೆ ಮಾಡಿದೆ. ಮೂರೂ ಸೇರಿ ಪ್ರತಿ ಲೀಟರ್ ಹಾಲಿನ ಮೇಲೆ ₹9 ಹೆಚ್ಚಳ ಮಾಡಿದಂತಾಗಿದೆ. ಇದರಲ್ಲಿ ₹4 ರೈತರಿಗೆ ಸಿಗುತ್ತದೆ ಎಂದು ಹೇಳುತ್ತಾರೆ. ಆದರೆ, ರೈತರಿಗೆ ಒಂದು ಪೈಸೆಯೂ ಸಿಗುವುದಿಲ್ಲ. ಇದಕ್ಕೆ ಪ್ರತಿಯಾಗಿ ಹಾಲಿನ ಉಪ ಉತ್ಪನ್ನಗಳ ದರ, ಚಹಾ, ಕಾಫಿ ಸೇರಿ ಹೋಟೆಲ್‌ನ ತಿಂಡಿಗಳ ದರವೂ ಹೆಚ್ಚುತ್ತದೆ’ ಎಂದರು.
‘ತಮ್ಮನ್ನು ತಾವು 2ನೇ ದೇವರಾಜ ಅರಸು ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರು, ಒಂದೆಡೆ ಬೆಲೆ ಏರಿಕೆಯ ದಾಳಿ, ತೆರಿಗೆಯ ದಾಳಿ ನಡೆಸಿದ್ದಾರೆ. ನೀರಿನ ಮೇಲೆ ಕರ ತೆರಿಗೆ ಹೆಚ್ಚಿಸಿದ್ದಾರೆ ಎಂಬುದನ್ನು ಸಹಿಸಿಕೊಳ್ಳಬಹುದು. ಆದರೆ, ಕಸದ ಮೇಲೂ ತೆರಿಗೆ ಹಾಕಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಉಳಿಸಿಕೊಳ್ಳಲು ಇಡೀ ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಇದರ ವಿರುದ್ಧ ಜನಾಕ್ರೋಶ ಯಾತ್ರೆ ನಡೆದಿದೆ’ ಎಂದೂ ಅವರು ಹರಿಹಾಯ್ದರು.
‘ಕೇಂದ್ರ ಸರ್ಕಾರ ಇಂಧನ ತೈಲಗಳ ದರವನ್ನು ₹50 ಹೆಚ್ಚಳ ಮಾಡಿದ್ದು ನೇರವಾಗಿ ಉತ್ಪಾದನಾ ಕಂಪನಿಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಸಾಮಾನ್ಯ ಜನರ ಮೇಲೆ ಹೊರೆ ಬೀಳುವುದಿಲ್ಲ. ಈ ಹಿಂದೆ ನಮ್ಮದೇ ಸರ್ಕಾರ ₹1,003 ಇದ್ದ ಅಡುಗೆ ಅನಿಲ ದರವನ್ನು ₹800ಕ್ಕೆ ಇಳಿಸಿತ್ತು. ಅದರಲ್ಲೇ ಈಗ ₹50 ಹೆಚ್ಚಳ ಮಾಡಲಾಗಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಬಿಜೆಪಿ ಮುಖಂಡ ಮುರುಘೇಂದ್ರಗೌಡ ಪಾಟೀಲ ಇದ್ದರು.
‘ರಾಜ್ಯ ಸರ್ಕಾರದ ಮುಸ್ಲಿಂ ತುಷ್ಟೀಕರಣ ವಿರೋಧಿಸಿ ಏ.16ರಂದು ಬೆಳಗಾವಿಯಲ್ಲಿ ಎರಡನೇ ಹಂತದ ಜನಾಕ್ರೋಶ ಜಾತ್ರೆ ಆರಂಭಿಸಲಾಗುವುದು’ ಎಂದು ಎನ್.ರವಿಕುಮಾರ್ ತಿಳಿಸಿದರು.
‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ, ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಈ ಯಾತ್ರೆ ನಡೆಯಲಿದೆ. ಬೆಳಗಾವಿ ಬಳಿಕ ಹುಬ್ಬಳ್ಳಿ, ಬಾಗಲಕೋಟೆ, ವಿಜಯಪುರದಲ್ಲಿ ಯಾತ್ರೆ ಆರಂಭವಾಗಲಿದೆ’ ಎಂದರು.
‘ಮಸೀದಿ, ಮದರಸಾಗಳಿಗೆ ಬೇಕಾಬಿಟ್ಟಿ ಅನುದಾನ ನೀಡಲಾಗುತ್ತಿದೆ. ಪ್ರಾರ್ಥನೆ ಮಾಡುವ ಇಮಾಮಿಗಳಿಗೆ ಮಾಸಿಕ ₹6,000 ಕೊಡಲಾಗುತ್ತಿದೆ. ಆದರೆ, ಹಿಂದೂ ಪೂಜಾರಿಗಳಿಗೆ ಬಿಡಿಗಾಸೂ ಇಲ್ಲ. ಮುಸ್ಲಿಂ ನವದಂಪತಿಗೆ ₹50 ಸಾವಿರ, ವಿದೇಶಕ್ಕೆ ಹೋಗುವ ಮುಸ್ಲಿಂ ವಿದ್ಯಾರ್ಥಿಗಳಿಗೆ ₹5 ಲಕ್ಷ ನೆರವು ನೀಡಲಾಗುತ್ತಿದೆ’ ಎಂದು ದೂರಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.