ADVERTISEMENT

ಆ್ಯಂಡ್ರಾಯ್ಡ್‌ ಕೀಪ್ಯಾಡ್ ಸ್ಮಾರ್ಟ್‌ಫೋನ್‌ಗೆ ಅಭಿಯಾನ

ಬೈಲಹೊಂಗಲದ ಸಿದ್ದಲಿಂಗೇಶ್ವರ ಇಂಗಳಗಿ ಹೆಜ್ಜೆ

ಎಂ.ಮಹೇಶ
Published 4 ಡಿಸೆಂಬರ್ 2021, 8:05 IST
Last Updated 4 ಡಿಸೆಂಬರ್ 2021, 8:05 IST
ಸಿದ್ದಲಿಂಗೇಶ್ವರ ಇಂಗಳಗಿ
ಸಿದ್ದಲಿಂಗೇಶ್ವರ ಇಂಗಳಗಿ   

ಬೆಳಗಾವಿ: ಜಿಲ್ಲೆಯ ಬೈಲಹೊಂಗಲದ ದ್ವಿತೀಯ ದರ್ಜೆ ಲೆಕ್ಕಸಹಾಯಕ, ಸ್ವತಃ ದೃಷ್ಟಿದೋಷ ಹೊಂದಿರುವ ಸಿದ್ದಲಿಂಗೇಶ್ವರ ಇಂಗಳಗಿ ಅವರು, ದೃಷ್ಟಿದೋಷವುಳ್ಳವರು ಮತ್ತು ಹಿರಿಯ ನಾಗರಿಕರಿಗಾಗಿ ಆ್ಯಂಡ್ರಾಯ್ಡ್‌ ಕೀಪ್ಯಾಡ್ ಸ್ಮಾರ್ಟ್‌ಫೋನ್‌ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವಂತೆ ಕೋರಿ ಆನ್‌ಲೈನ್‌ನಲ್ಲಿ ವಿಶೇಷ ಅಭಿಯಾನ ಆರಂಭಿಸಿದ್ದಾರೆ.

‘ಚೇಂಜ್ ಡಾಟ್ ಆರ್ಗ್‌’ ಜಾಲತಾಣದ ಮೂಲಕ ಅವರು ಹಾಕಿರುವ ಮನವಿ (ಪಿಟಿಷನ್‌)ಗೆ ಶನಿವಾರ ಬೆಳಿಗ್ಗೆವರೆಗೆ 3,544 ಮಂದಿ ಬೆಂಬಲ ಸೂಚಿಸಿ ಸಹಿ ಹಾಕಿದ್ದಾರೆ. ಮೊಬೈಲ್ ಫೋನ್ ಉತ್ಪಾದಿಸುವ ಕಂಪನಿಗಳಿಗೆ ಈ ಮನವಿ ಮಾಡಿಕೊಂಡಿದ್ದಾರೆ.

‘ಮಾರುಕಟ್ಟೆಯಲ್ಲಿರುವ ಎಲ್ಲ ಮೊಬೈಲ್ ಕಂಪನಿಗಳವರೂ ಆ್ಯಂಡ್ರಾಯ್ಡ್‌ ಸ್ಮಾರ್ಟ್ ಫೋನ್‌ಗಳನ್ನು ಭೌತಿಕ ಕೀಪ್ಯಾಡ್‌ನೊಂದಿಗೆ ತಯಾರಿಸಬೇಕು ಮತ್ತು ದೃಷ್ಟಿದೋಷವುಳ್ಳವರಿಗೆ ಬಿಡುಗಡೆ ಮಾಡಬೇಕು. ಅದು ಸಾರ್ವತ್ರಿಕ ವಿನ್ಯಾಸವಾಗಿರಬೇಕು. ಇದರಿಂದ, ಹಿರಿಯ ನಾಗರಿಕರು ಮತ್ತು ದೃಷ್ಟಿದೋಷವುಳ್ಳವರಿಗೆ ಬಹಳ ಅನುಕೂಲವಾಗುತ್ತದೆ’ ಎನ್ನುತ್ತಾರೆ ಅವರು.

ADVERTISEMENT

‘ಪ್ರಸ್ತುತ ಎಲ್ಲ ಕಂಪನಿಗಳೂ ಟಚ್‌ಸ್ಕ್ರೀನ್ ಆ್ಯಂಡ್ರಾಯ್ಡ್ ಮೊಬೈಲ್‌ ಫೋನ್‌ಗಳನ್ನು ಮಾತ್ರ ತಯಾರಿಸಿ ಬಿಡುಗಡೆ ಮಾಡುತ್ತಿವೆ. ಆ ಫೋನ್‌ಗಳನ್ನು ನಿರ್ವಹಿಸಲು ದೃಷ್ಟಿದೋಷವುಳ್ಳ ನಮ್ಮಂಥವರಿಗೆ ಸಾಕಷ್ಟು ಸಮಸ್ಯೆಗಳು ಆಗುತ್ತಿವೆ. ಆ್ಯಂಡ್ರಾಯ್ಡ್‌ ಟಚ್‌‍ಸ್ಕ್ರೀನ್ ಮೊಬೈಲ್‌ ಫೋನ್‌ಗಳು ಟಾಕ್‌ಬ್ಯಾಕ್ ಸ್ಕ್ರೀನ್‌ರೀಡರ್ ಸೌಲಭ್ಯ ಹೊಂದಿವೆ. ಜನಸಂದಣಿಯ ಸ್ಥಳಗಳಲ್ಲಿದ್ದಾಗ ಅಥವಾ ಬಸ್‌ನಲ್ಲಿ ಪ್ರಯಾಣಿಸುವಾಗ ನಾವು ಆ ಫೋನ್‌ಗಳನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಹೀಗಾಗಿ, ಕನಿಷ್ಠ 2-3 ಮಾದರಿಯ ಕೀಪ್ಯಾಡ್ ಹ್ಯಾಂಡ್‌ಸೆಟ್‌ಗಳನ್ನು ಕೈಗೆಟಕುವ ದರದಲ್ಲಿ ಬಿಡುಗಡೆ ಮಾಡಬೇಕು’ ಎಂದು ಕೋರಿದರು.

‘ಆ ಕೀಪ್ಯಾಡ್ ಫೋನ್, ಇತ್ತೀಚಿನ ಆ್ಯಂಡ್ರಾಯ್ಡ್ ಅಪ್‌ಡೇಟ್ ಬೆಂಬಲದೊಂದಿಗೆ ಕನಿಷ್ಠ 3 ಜಿಬಿ ರಾಮ್ ಮತ್ತು 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿರಬೇಕು. ಫೋನ್‌ನಲ್ಲಿ ನ್ಯಾವಿಗೇಷನ್ ಮೆನು ಆಯ್ಕೆ ಮತ್ತು ಭೌತಿಕ ‘ಕ್ಯೂಡಬ್ಲ್ಯುಆರ್‌ಟಿವೈ’ ಕೀಪ್ಯಾಡ್‌ನೊಂದಿಗೆ ಆಲ್ಫಾ ಸಂಖ್ಯಾತ್ಮಕ ಸೇರಿದಂತೆ ಎಲ್ಲ ಕೀಲಿಗಳನ್ನು ಹೊಂದಿರಬೇಕು’ ಎಂದು ಮನವಿ ಮೂಲಕ ಮೊಬೈಲ್ ಕಂಪನಿಗಳ ಗಮನವನ್ನು ಅವರು ಸೆಳೆದಿದ್ದಾರೆ.

ಗೂಗಲ್‌ ಟಿಸಿಎಸ್‌ ‘ಟೆಕ್ಸ್ಟ್‌ ಟು ಸ್ಪೀಚ್‌’ (ಪಠ್ಯದಿಂದ ಮಾತಿಗೆ) ತಂತ್ರಾಂಶದಲ್ಲಿ ಕನ್ನಡ ಭಾಷೆಯ ಧ್ವನಿ ಸೇರಿಸಲು ಅವರು ಆನ್‌ಲೈನ್‌ನಲ್ಲಿ ನಡೆಸಿದ್ದ ಅಭಿಯಾನ ಯಶಸ್ವಿಯಾಗಿತ್ತು. ಟಿಸಿಎಸ್‌ ಎಂಬ ಆ್ಯಂಡ್ರಾಯ್ಡ್ ಕಿರುತಂತ್ರಾಂಶಕ್ಕೆ ಕನ್ನಡ ಭಾಷೆಯ ಧ್ವನಿ ಸೇರ್ಪಡೆಗೊಳಿಸುವಂತೆ ಚೇಂಜ್ ಡಾಟ್‌ ಆರ್ಗ್ ವೆಬ್‌ತಾಣದಲ್ಲಿ ಪಿಟಿಷನ್‌ ಹಾಕಿದ್ದರು. ಅವರ ಅಭಿಯಾನಕ್ಕೆ ಫಲ ಸಿಕ್ಕು, ಕನ್ನಡ ಭಾಷೆ ಸೇರಿಸಲಾಗಿದೆ. ಇದೀಗ ತಮ್ಮಂಥವರ ಅನುಕೂಲಕ್ಕಾಗಿ ಮತ್ತೊಂದು ಅಭಿಯಾನವನ್ನು ಅವರು ನಡೆಸುತ್ತಿದ್ದಾರೆ.

ಸಂಪಕರ್ಕಕ್ಕೆ ಮೊ.ಸಂಖ್ಯೆ: ಮೊ:8792639989 (ವಾಟ್ಸ್‌ ಆ್ಯಪ್‌ ಮಾತ್ರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.