ADVERTISEMENT

ಬೆಳಗಾವಿ: ಬಂಗಲೆಗಳ ಸಮೀಕ್ಷೆಗೆ ಸಮಿತಿ ರಚನೆ

ದಂಡು ಮಂಡಳಿ ಸಭೆಯಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 15:59 IST
Last Updated 23 ನವೆಂಬರ್ 2020, 15:59 IST
ಬೆಳಗಾವಿಯ ದಂಡು ಮಂಡಳಿಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ಅನಿಲ ಬೆನಕೆ ಮಾತನಾಡಿದರು
ಬೆಳಗಾವಿಯ ದಂಡು ಮಂಡಳಿಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ಅನಿಲ ಬೆನಕೆ ಮಾತನಾಡಿದರು   

ಬೆಳಗಾವಿ: ನಗರದ ದಂಡು ಮಂಡಳಿ ವ್ಯಾಪ್ತಿಗೆ ಒಳಪಡುವ 150ಕ್ಕೂ ಅಧಿಕ ಹಳೆಯ ಬಂಗಲೆಗಳ ದಾಖಲೆಗಳ ಪರಿಶೀಲನೆ, ವಾಣಿಜ್ಯ ಉದ್ದೇಶಕ್ಕೆ ಬಳಸಲಾಗಿದೆಯೇ ಅಥವಾ ಅಕ್ರಮ ನಿರ್ಮಾಣ ಕಾರ್ಯ ನಡೆದಿದೆಯೇ ಎಂಬಿತ್ಯಾದಿ ಅಂಶಗಳನ್ನು ಆಧರಿಸಿ ಸಮೀಕ್ಷೆ ನಡೆಸಲು ಸಮಿತಿ ರಚಿಸಲು ನಿರ್ಧರಿಸಲಾಗಿದೆ.

ಇಲ್ಲಿನ ಮರಾಠಾ ಲಘು ಪದಾತಿ ದಳದ (ಎಂಎಲ್‌ಐಆರ್‌ಸಿ) ಬ್ರಿಗೇಡಿಯರ್ ರೋಹಿತ್ ಚೌಧರಿ ನೇತೃತ್ವದಲ್ಲಿ ಸೋಮವಾರ ನಡೆದ ದಂಡು ಮಂಡಳಿ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಬಂಗಲೆಗಳ ಸಮೀಕ್ಷೆ ನಡೆಸುವುದಕ್ಕೆ ಶಾಸಕ ಅನಿಲ ಬೆನಕೆ ಹಾಗೂ ದಂಡು ಮಂಡಳಿಯ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಸಮಿತಿಯಲ್ಲಿ ತಮ್ಮನ್ನು ಸೇರಿಸಿಕೊಳ್ಳದಂತೆ ಬ್ರಿಗೇಡಿಯರ್ ಹಾಗೂ ದಂಡು ಮಂಡಳಿಯ ಸಿಇಒ ಬರ್ಚಸ್ವ ಅವರನ್ನು ಕೋರಿದರು.

ADVERTISEMENT

‘ಹಲವು ದಶಕಗಳಿಂದ ದಂಡು ಮಂಡಳಿ ಪ್ರದೇಶದ ಬಂಗಲೆಗಳಲ್ಲಿ (ಮನೆ) ಜನರು ವಾಸಿಸುತ್ತಿದ್ದಾರೆ. ಏಕಾಏಕಿ ಸಮೀಕ್ಷೆ ನಡೆಸಲು ಮುಂದಾಗಿರುವುದರಿಂದ ಅವರು ಆತಂಕಕ್ಕೆ ಒಳಗಾಗಿದ್ದಾರೆ. ಸಮೀಕ್ಷೆ ನಡೆಸುತ್ತಿರುವ ಉದ್ದೇಶವಾದರೂ ಏನು. ದಂಡು ಮಂಡಳಿ ವ್ಯಾಪ್ತಿಯಲ್ಲಿರುವ ಈ ಬಂಗಲೆಗಳನ್ನು ಎಂಎಲ್‍ಐಆರ್‌ಸಿ ವಶಪಡಿಸಿಕೊಳ್ಳಲಿದೆಯೇ ಎಂಬಿತ್ಯಾದಿ ಆತಂಕದ ಪ್ರಶ್ನೆಗಳು ಜನರಲ್ಲಿ ಉಂಟಾಗಿವೆ’ ಎಂದು ಸದಸ್ಯರು ತಿಳಿಸಿದರು.

‘ಒಂದು ವೇಳೆ, ಮನೆಗಳನ್ನು ವಶಪಡಿಸಿಕೊಂಡರೆ ಅಲ್ಲಿನ ನಿವಾಸಿಗಳು ಎಲ್ಲಗೆ ಹೋಗಬೇಕು? ಅವರು ಬೀದಿಗೆ ಬೀಳಬೇಕಾಗುತ್ತದೆ’ ಎಂದು ಭೀತಿ ವ್ಯಕ್ತಪಡಿಸಿದರು.

‘ಮನೆಗಳನ್ನು ವಶಪಡಿಸಿಕೊಳ್ಳುವ ಉದ್ದೇಶ ನಮ್ಮದಿಲ್ಲ. ಮನೆಗಳ ನವೀಕರಣ ಹಾಗೂ ಅವುಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ಮಾತ್ರವೇ ಪರಿಶೀಲನೆ ನಡೆಸಲಾಗುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರದಿಂದ ನಿರ್ದೇಶನ ಬಂದಿದೆ. ಕೇವಲ ಬೆಳಗಾವಿ ದಂಡುಮಂಡಳಿಯ ಮನೆಗಳನ್ನು ಮಾತ್ರವೇ ಸಮೀಕ್ಷೆಗೆ ಒಳಪಡಿಸುತ್ತಿಲ್ಲ. ದೇಶದಲ್ಲಿರುವ ಎಲ್ಲ ದಂಡುಮಂಡಳಿ ವ್ಯಾಪ್ತಿಯಲ್ಲೂ ಸಮೀಕ್ಷೆ ನಡೆಸಲಾಗುತ್ತಿದೆ’ ಎಂದು ಸಿಇಒ ಬರ್ಚಸ್ವ ಸ್ಪಷ್ಟಪಡಿಸಿದರು.

ಒಂದು ಹಂತದಲ್ಲಿ, ‘ಸಮೀಕ್ಷೆ ಕಾರ್ಯವನ್ನೇ ಕೈಬಿಡಬೇಕು’ ಎಂದು ಸದಸ್ಯರು ಪಟ್ಟು ಹಿಡಿದರು. ‘ನಿವಾಸಿಗಳಿಗೆ ಯಾವುದೇ ತೊಂದರೆ ಕೊಡುವುದಿಲ್ಲ’ ಎಂದು ಬ್ರಿಗೇಡಿಯರ್ ಭರವಸೆ ನೀಡಿದ್ದರಿಂದ, ಸಮಿತಿ ರಚನೆಗೆ ನಿರ್ಣಯಿಸಲಾಯಿತು.

ಬಳಿಕ, ‘ಸಮಿತಿಯಲ್ಲಿ ನಮ್ಮನ್ನು ಸೇರಿಸಿಕೊಳ್ಳಬೇಡಿ’ ಎಂದು ಸದಸ್ಯರು ಸಿಇಒಗೆ ಲಿಖಿತ ಮನವಿ ಸಲ್ಲಿಸಿದರು.

ಶಾಸಕ ಬೆನಕೆ ಮಾತನಾಡಿ, ‘ಗೋಗಟೆ ವೃತ್ತದಲ್ಲಿರುವ ಸೈನಿಕ ಸ್ಮಾರಕ ಅಭಿವೃದ್ಧಿಪಡಿಸಬೇಕು. ದಂಡು ಮಂಡಳಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆಗಳನ್ನು ಸುಧಾರಿಸಬೇಕು. ದಂಡು ಮಂಡಳಿ ವ್ಯಾಪ್ತಿಯಲ್ಲಿರುವ ಬೀದಿಬದಿ ವ್ಯಾಪಾರಿಗಳು ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಲ್ಲಿ ₹ 10ಸಾವಿರ ಆರ್ಥಿಕ ಸಹಾಯ ಪಡೆಯಲು ವ್ಯಾಪಾರ ಪರವಾನಗಿ ವಿತರಿಸಬೇಕು. ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ ಅನುಷ್ಠಾನಗೊಳಿಸಬೇಕು. 24x7 ಕುಡಿಯುವ ನೀರು ಪೂರೈಕೆಗೆ ಯೋಜನೆಗೆ ಅಗತ್ಯವಾಗಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಕೈಗೊಳ್ಳಬೇಕು’ ಎಂದು ತಿಳಿಸಿದರು.

ಸದಸ್ಯರಾದ ನಿರಂಜನ ಪ್ರದೀಪ ಅಷ್ಟೇಕರ, ಶಾಜಿದ್ ಶೇಖ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.