ADVERTISEMENT

₹400 ಕೋಟಿ ಲೂಟಿ ಪ್ರಕರಣ: ಕೇವಲ ವದಂತಿಯಂತೆ ಕಾಣುತ್ತಿದೆ; ರಾಮರಾಜನ್

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 10:43 IST
Last Updated 25 ಜನವರಿ 2026, 10:43 IST
<div class="paragraphs"><p>ಕಂಟೇನರ್‌ ( ಸಾಂಕೇತಿಕ ಚಿತ್ರ)</p></div>

ಕಂಟೇನರ್‌ ( ಸಾಂಕೇತಿಕ ಚಿತ್ರ)

   

ಬೆಳಗಾವಿ: ‘ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಚೋರ್ಲಾ ಘಾಟ್‌ನಲ್ಲಿ ₹400 ಕೋಟಿ ನಗದು ಹೊತ್ತ ಎರಡು ಕಂಟೇನರ್‌ಗಳ ಲೂಟಿಗೆ ಸಂಬಂಧಿಸಿ ನಾಸಿಕದ ಸಂದೀಪ ದತ್ತ ಪಾಟೀಲ ನೀಡಿರುವ ದೂರು ಕೇವಲ ವದಂತಿಯಂತೆ ಕಾಣುತ್ತಿದೆ. ಅದರ ಆಧಾರದ ಮೇಲೆ ನಾವು ಪ್ರಕರಣ ದಾಖಲಿಸಲು ಸಾಧ್ಯವಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಸಂದೀಪ ಜನವರಿ 9ರಂದು ಮಹಾರಾಷ್ಟ್ರದ ನಾಸಿಕ್‌ನ ಘೋಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ, 2025ರ ಅಕ್ಟೋಬರ್ 16ರಂದು ವಿರಾಟ್ ಗಾಂಧಿ ಪರವಾಗಿ ವಿಶಾಲ ನಾಯ್ಡು ಇತರರು ನನ್ನನ್ನು  ಅಪಹರಿಸಿದ್ದಾರೆ ಎಂದು ಹೇಳಿಕೊಂಡಿದ್ದರು. ನನ್ನನ್ನು ಅಪಹರಿಸಿದವರು ₹400 ಕೋಟಿ ಲೂಟಿ ಮಾಡಿದ್ದಾಗಿ ನನ್ನ ಕಡೆ ತಿಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ, ಹಣ ಇರುವುದನ್ನು ಸಂದೀಪ ನೋಡಿಲ್ಲ’ ಎಂದು ತಿಳಿಸಿದರು.

ADVERTISEMENT

‘ಪ್ರಕರಣದ ವಿವರ ಪಡೆಯಲು ನಾವು ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಮತ್ತು ಮರಾಠಿಯಲ್ಲಿ ಮಾತನಾಡಬಲ್ಲ ಇತರೆ ಮೂವರು ಪೊಲೀಸ್ ಸಿಬ್ಬಂದಿ ನೇತೃತ್ವದ ತಂಡವನ್ನು ನಾಸಿಕ್‌ಗೆ ಕಳುಹಿಸಿದ್ದೇವೆ. ತಂಡವು ದೂರುದಾರರನ್ನು ಮತ್ತು ಪ್ರಕರಣದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡ ಭೇಟಿ ಮಾಡಿದೆ’ ಎಂದರು.

‘ಎಸ್‌ಐಟಿ ತಂಡವು ನಮ್ಮ ತಂಡಕ್ಕೆ ಅಪಹರಣಕಾರರನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ. ಇದು ಪ್ರಗತಿಯಲ್ಲಿರುವ ತನಿಖೆಗಳ ಮೇಲೆ ಪರಿಣಾಮ ಬೀರುತ್ತದೆ’ ಎಂದು ಅವರು ಹೇಳಿದರು.

‘ಘಟನೆಯು ನಮ್ಮ ವ್ಯಾಪ್ತಿಯಲ್ಲಿ ನಡೆದಿರುವುದು ಕಂಡುಬಂದರೆ, ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸುತ್ತೇವೆ. ತನಿಖೆಗಾಗಿ ಮಹಾರಾಷ್ಟ್ರ ಪೊಲೀಸರೊಂದಿಗೆ ಸಹಕರಿಸಲು ನಾವು ಸಿದ್ಧರಿದ್ದೇವೆ’ ಎಂದು ರಾಮರಾಜನ್ ಹೇಳಿದರು.

‘ಈ ಹಣ ಎಲ್ಲಿಂದ ಎಲ್ಲಿಂದ ಬಂತು? ಎಲ್ಲಿಗೆ ಹೊರಟಿತ್ತು ಎಂಬುದು ಸ್ಪಷ್ಟವಾಗಿಲ್ಲ. ಹಳೇ ನೋಟುಗಳಿವೆ ಎಂದು ನಾಶಿಕ ಪೊಲೀಸರ ಪತ್ರದಲ್ಲಿ ಉಲ್ಲೇಖವಾಗಿದೆ. ಆದರೆ, ಯಾವ ಮುಖಬೆಲೆಯವರು ಎಂಬುದು ದೃಢಪಟ್ಟಿಲ್ಲ. ಈ ಬಗ್ಗೆ ತನಿಖೆಯಾಗಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.