ADVERTISEMENT

ಸಿಮೆಂಟ್ ಬೆಲೆ ಏರಿಕೆ: ಜಿಲ್ಲಾಡಳಿತದ ಮಧ್ಯಪ್ರವೇಶಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 14:30 IST
Last Updated 22 ಸೆಪ್ಟೆಂಬರ್ 2020, 14:30 IST
ಸಿಮೆಂಟ್ ಬೆಲೆ ಏರಿಕೆ ನಿಯಂತ್ರಿಸುವಂತೆ ಆಗ್ರಹಿಸಿ ಮಾರಾಟಗಾರರು ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ  ನಡೆಸಿದರು
ಸಿಮೆಂಟ್ ಬೆಲೆ ಏರಿಕೆ ನಿಯಂತ್ರಿಸುವಂತೆ ಆಗ್ರಹಿಸಿ ಮಾರಾಟಗಾರರು ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ  ನಡೆಸಿದರು   

ಬೆಳಗಾವಿ: ‘ಸಿಮೆಂಟ್ ಬೆಲೆ ದಿನೇ ದಿನೇ ಹೆಚ್ಚುತ್ತಿದ್ದು, ಸ್ಥಿರತೆ ಕಾಪಾಡಿಕೊಂಡು ಗ್ರಾಹಕರ ವಿಶ್ವಾಸ ಗಳಿಸಲು ಕಂಪನಿಗಳು ಸಹಕರಿಸುತ್ತಿಲ್ಲ. ಇದರಿಂದ ನಮಗೆ ಆಗುತ್ತಿರುವ ತೊಂದರೆ ನಿವಾರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಜಿಲ್ಲಾ ಸಿಮೆಂಟ್ ಮಾರಾಟಗಾರರ ಸಂಘದವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

‘ಸಮಸ್ಯೆ ಬಗೆಹರಿಯದಿದ್ದರೆ ಸೋಮವಾರ (ಸೆ.28)ದಿಂದ ಸಿಮೆಂಟ್ ಮಾರಾಟ ಬಂದ್ ಮಾಡಲಾಗುವುದು’ ಎಂದು ತಿಳಿಸಿದರು.

‘ಬೆಲೆಯಲ್ಲಿ ಸ್ಥಿರತೆ ಕಾಪಾಡುವಂತೆ ಕೋರಿದರೂ ಕಂಪನಿಗಳವರು ಸ್ಪಂದಿಸುತ್ತಿಲ್ಲ. ಹೀಗಾಗಿ, ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಬೇಕು. ಈ ಮೂಲಕ ಜನರಿಗೂ ಅನುಕೂಲ ಮಾಡಿಕೊಡಬೇಕು’ ಎಂದು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ADVERTISEMENT

ಸಂಘದ ಅಧ್ಯಕ್ಷ ಈರಣ್ಣ ಜಿ. ದಯಣ್ಣವರ ಮಾತನಾಡಿ, ‘ಕಡಿಮೆ ಬೆಲೆಗೆ ಸಿಮೆಂಟ್ ಮಾರಾಟ ಮಾಡಿ ಲಾಕ್‍ಡೌನ್ ಸಂದರ್ಭದಲ್ಲಿನ ಹಾನಿ ತಪ್ಪಿಸಿಕೊಳ್ಳಬೇಕು ಮತ್ತು ವ್ಯತ್ಯಾಸದ ಹಣವನ್ನು ನಂತರ ಪಾವತಿಸುತ್ತೇವೆ ಎಂದು ಕಂಪನಿಗಳವರು ತಿಳಿಸಿದ್ದರು. ಆದರೆ, ಈಗ ಪಾವತಿಸಲು ನಿರಾಕರಿಸುತ್ತಿದ್ದಾರೆ. ಬೆಲೆ ಏರುತ್ತಿರುವುದರಿಂದ ಗ್ರಾಹಕರು ಕೂಡ ಸಿಮೆಂಟ್ ಖರೀದಿಗೆ ಹಿಂಜರಿಯುತ್ತಿದ್ದಾರೆ. ಇದರಿಂದ ನಮಗೆ ಬಹಳ ನಷ್ಟ ಉಂಟಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.