ಚನ್ನಮ್ಮನ ಕಿತ್ತೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಜಾತಿ ಗಣತಿ ಸಮೀಕ್ಷೆಯಲ್ಲಿ ಚನ್ನಮ್ಮನ ಕಿತ್ತೂರು ತಾಲ್ಲೂಕು ಶೇ 102.64 ರಷ್ಟು ಉತ್ತಮ ಸಾಧನೆ ಮಾಡಿದ್ದು, ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.
‘ದಾಖಲೆ ಪ್ರಕಾರ ತಾಲ್ಲೂಕಿನಲ್ಲಿ 1,10,106 ಜನಸಂಖ್ಯೆ ಇದೆ. ಸಮೀಕ್ಷೆಯಲ್ಲಿ 1,13, 011 ಜನರ ಸಮೀಕ್ಷೆ ಕೈಗೊಳ್ಳಲಾಗಿದೆ. ಈ ಮೂಲಕ ಶೇ 102.64 ರಷ್ಟು ಸಾಧನೆ ಮಾಡಿದಂತಾಗಿದೆ’ ಎಂದು ತಹಶೀಲ್ದಾರ್ ಕಲಗೌಡ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.
‘28,339 ಕುಟುಂಬಗಳ ಗುರಿ ನಿಗದಿ ಪಡಿಸಲಾಗಿತ್ತು. ಆದರೆ, 31,002 ಕುಟುಂಬಗಳ ಸಮೀಕ್ಷೆಯನ್ನು ತಾಲ್ಲೂಕಿನಲ್ಲಿ ಪೂರ್ಣಗೊಳಿಸಲಾಗಿದೆ. 3337 ಮನೆಗಳ ಬಾಗಿಲು ಹಾಕಲಾಗಿತ್ತು. ಅಲ್ಲಲ್ಲಿ ಉಳಿದಿರುವ ಈ ಮನೆಗಳ ಸಮೀಕ್ಷೆಯನ್ನೂ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಏಕಕಾಲಕ್ಕೆ 50 ಶಿಕ್ಷಕರು: ‘ತಾಲ್ಲೂಕಿನ ಗುಡ್ಡದ ಊರುಗಳಾಗಿರುವ ಕುಲವಳ್ಳಿ, ಪೇಪರ್ ಮಿಲ್, ಮಾಚಿ, ಗಂಗ್ಯಾನಟ್ಟಿ, ಸಾಗರ, ಕತ್ರಿದಡ್ಡಿ, ನಿಂಗಾಪುರ, ಗಲಗಿನಮಡ ಹಾಗೂ ದಿಂಡಲಕೊಪ್ಪ ಗ್ರಾಮಗಳಲ್ಲಿ ಏಕಕಾಲಕ್ಕೆ 50 ಶಿಕ್ಷಕರ ನಿಯೋಜನೆ ಮಾಡಿ ಅಲ್ಲಿ ವಾಸಿಸುವ 900 ಮನೆಗಳ ಸರ್ವೇ ಕಾರ್ಯವನ್ನು ಸಮರೋಪಾದಿಯಲ್ಲಿ ನಡೆಸಲಾಯಿತು’ ಎಂದು ಸಮೀಕ್ಷೆ ನೇತೃತ್ವ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಚನಬಸಪ್ಪ ತುಬಾಕದ ತಿಳಿಸಿದರು.
ತಹಶೀಲ್ದಾರ್ ಕಲಗೌಡ ಪಾಟೀಲ ಮಾರ್ಗದರ್ಶನ, ಬಿಸಿಎಂ ಇಲಾಖೆ ಅಧಿಕಾರಿ ಮಂಜುನಾಥ ಕರಿಸಿರಿ, ಎಲ್ಲ ಶಿಕ್ಷಕರು ಮತ್ತು ಜನರ ಸಹಕಾರವನ್ನು ತುಬಾಕದ ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.