ADVERTISEMENT

ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ವಂಚಿಸುತ್ತಿದ್ದ ಜಾಲ ಪತ್ತೆ: ಪ್ರಮುಖ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 12:20 IST
Last Updated 15 ಜುಲೈ 2024, 12:20 IST
<div class="paragraphs"><p>ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಜಾಲದಿಂದ ವಶಕ್ಕೆ ಪಡೆದ ಹಣ ಹಾಗೂ ಸಲಕರಣೆಗಳನ್ನು ಬೆಳಗಾವಿ ಡಿಸಿಪಿ ರೋಹನ್‌ ಜಗದೀಶ್‌ ಅವರು ಸೋಮವಾರ ಮಾರ್ಕೆಟ್‌ ಠಾಣೆ ಎದುರು ಪ್ರದರ್ಶಿಸಿದರು</p></div>

ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಜಾಲದಿಂದ ವಶಕ್ಕೆ ಪಡೆದ ಹಣ ಹಾಗೂ ಸಲಕರಣೆಗಳನ್ನು ಬೆಳಗಾವಿ ಡಿಸಿಪಿ ರೋಹನ್‌ ಜಗದೀಶ್‌ ಅವರು ಸೋಮವಾರ ಮಾರ್ಕೆಟ್‌ ಠಾಣೆ ಎದುರು ಪ್ರದರ್ಶಿಸಿದರು

   

– ಪ್ರಜಾವಾಣಿ ಚಿತ್ರ

ಬೆಳಗಾವಿ: ಸರ್ಕಾರಿ ಕಾಲೇಜುಗಳಲ್ಲಿ ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ವಿದ್ಯಾರ್ಥಿಗಳನ್ನು ವಂಚಿಸುತ್ತಿದ್ದ ಜಾಲವೊಂದನ್ನು ಬೆಳಗಾವಿ ಪೊಲೀಸರು ಪತ್ತೆ ಮಾಡಿದ್ದಾರೆ. ಜಾಲದ ಪ್ರಮುಖ ಆರೋಪಿಯನ್ನು ಮುಂಬೈನಲ್ಲಿ ಬಂಧಿಸಿದ್ದಾರೆ. ಅಕ್ರಮಕ್ಕೆ ಬಳಸಿದ ಸಲಕರಣೆ ಹಾಗೂ ₹12 ಲಕ್ಷ ಹಣ ವಶಕ್ಕೆ ಪಡೆದಿದ್ದಾರೆ.

ADVERTISEMENT

ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಗಚ್ಚಿಭೌಳಿಯ ಇಂದಿರಾನಗರ ಮೂಲದ ಅರಗೊಂಡ ಅರವಿಂದ ಅಲಿಯಾಸ್‌ ಅರುಣಕುಮಾರ್ ಅರಗೊಂಡ ಪ್ರಕಾಶಂ (47) ಬಂಧಿತ. ಆರೋಪಿ ವಿರುದ್ಧ ಈಗಾಗಲೇ ತೆಲಂಗಾಣದಲ್ಲಿ 6, ಭೂಪಾಲ್‌ನಲ್ಲಿ 1, ಬೆಂಗಳೂರಿನ ಅಶೋಕ ನಗರ ಹಾಗೂ ಆರ್.ಟಿ.ನಗರದ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿವೆ ಎಂದು ಡಿಸಿಪಿ ರೋಹನ್‌ ಜಗದೀಶ್‌ ತಿಳಿಸಿದ್ದಾರೆ.

ಕೃತ್ಯಕ್ಕೆ ಬಳಸಿದ ಐದು ಮೊಬೈಲ್, 15 ಸಿಪಿಯು ಮಾನಿಟರ್, 1 ಲ್ಯಾಪ್‌ಟಾಪ್, ಮೂರು ಕ್ರೆಡಿಟ್ ಮತ್ತು ಮೂರು ಡೆಬಿಟ್ ಕಾರ್ಡ್, 12 ಅಡಾಪ್ಟರ್, 1 ಬಯೋಮೆಟ್ರಿಕ್ ಸಲಕರಣೆ ಹಾಗೂ 1 ಡಿವಿಆರ್ ಜಪ್ತಿ ಮಾಡಲಾಗಿದೆ.

‘ನೀಟ್‌’ನಲ್ಲಿ ಕಡಿಮೆ ಅಂಕ ಪಡೆದಿದ್ದರೂ ಸರ್ಕಾರಿ ಕಾಲೇಜಿನಲ್ಲಿ ಎಂಬಿಬಿಎಸ್‌ ಸೀಟ್‌ ಕೊಡಿಸುವುದಾಗಿ ಹಲವು ವಿದ್ಯಾರ್ಥಿಗಳನ್ನು ನಂಬಿಸಿದ್ದ. ಅವರಿಂದ ಲಕ್ಷಲಕ್ಷ ಹಣ ಪಡೆದುಕೊಂಡಿದ್ದ. ಎಂಬಿಎ ಪದವಿ ಪಡೆದಿರುವ ಆರೋಪಿ; ಕೆಲವು ಜಿಲ್ಲಾ ಕೇಂದ್ರಗಳಲ್ಲಿ ಹೈಟೆಕ್‌ ಕಚೇರಿಗಳನ್ನು ತೆರೆದಿದ್ದ. ‘ನೀಟ್‌’ ತರಬೇತಿ ನೀಡುವುದಾಗಿ ನಂಬಿಸಿ ವಿದ್ಯಾರ್ಥಿಗಳನ್ನು ಸೆಳೆಯುತ್ತಿದ್ದ. ಕೆಲವು ಸಿಬ್ಬಂದಿಯನ್ನು ಕೆಲಸಕ್ಕೆ ಇಟ್ಟುಕೊಂಡು ಅವ್ಯವಹಾರ ನಡೆಸುತ್ತಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ಜಾಲ ಪತ್ತೆಯಾಗಿದ್ದು ಹೇಗೆ?:

2023ರಲ್ಲಿ ಬೆಳಗಾವಿಯಲ್ಲಿ ನೀಟ್‌ ಮಾರ್ಗದರ್ಶನ ಕೇಂದ್ರ ತೆರೆದಿದ್ದ ಆರೋಪಿ, ಎಂಬಿಬಿಎಸ್‌ ಸೀಟ್‌ ಕೊಡಿಸುವುದಾಗಿ ಬೀದರ್‌ನ ವಿದ್ಯಾರ್ಥಿನಿಯೊಬ್ಬರಿಂದ ₹3.75 ಲಕ್ಷ ಪಡೆದಿದ್ದ. ಇದೇ ರೀತಿ 10 ವಿದ್ಯಾರ್ಥಿಗಳಿಂದ ಒಟ್ಟು ₹ 1.31 ಕೋಟಿ ಹಣ ಪಡೆದು ಪರಾರಿಯಾಗಿದ್ದ. ಒಬ್ಬ ವಿದ್ಯಾರ್ಥಿನಿ ಕಳೆದ ನವೆಂಬರ್‌ನಲ್ಲಿ ಇಲ್ಲಿನ ಮಾರ್ಕೆಟ್‌ ಠಾಣೆಗೆ ದೂರು ನೀಡಿದ್ದರು.

ಆರು ತಿಂಗಳಿಂದ ಹುಡುಕಾಡಿದ ಪೊಲೀಸರಿಗೆ ಆರೋಪಿ ಮುಂಬೈನಲ್ಲಿರುವುದು ಗೊತ್ತಾಯಿತು. ವಿಶೇಷ ತಂಡ ಅಲ್ಲಿಗೆ ಭೇಟಿ ನೀಡಿದಾಗ ‘ಅದ್ವಯ ವಿದ್ಯಾ ಪ್ರವೇಶ ಮಾರ್ಗದರ್ಶಕ ಪ್ರೈ.ಲಿ’ ಎಂಬ ಹೆಸರಲ್ಲಿ ನೀಟ್ ಮಾರ್ಗದರ್ಶನ ಸೆಂಟರ್‌ ನಡೆಸುತ್ತಿರುವುದು ಖಾತ್ರಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.