ADVERTISEMENT

ಚನ್ನಮ್ಮನ ಕಿತ್ತೂರು: ಇನ್ನೂ ಹಸ್ತಾಂತರವಾಗದ ‘ತಾಲ್ಲೂಕು ಆಡಳಿತ ಸೌಧ’

ಉದ್ಘಾಟನೆಯಾಗಿ ಒಂದು ವರ್ಷ; ತಪ್ಪದ ಜನರ ಪಡಿಪಾಟಲು

ಪ್ರದೀಪ ಮೇಲಿನಮನಿ
Published 10 ಅಕ್ಟೋಬರ್ 2023, 6:25 IST
Last Updated 10 ಅಕ್ಟೋಬರ್ 2023, 6:25 IST
ಚನ್ನಮ್ಮನ ಕಿತ್ತೂರಿನಲ್ಲಿ ಕಳೆದ ವರ್ಷ ಉದ್ಘಾಟನೆಯಾಗಿದ್ದ ತಾಲ್ಲೂಕು ಆಡಳಿತ ಸೌಧ
ಚನ್ನಮ್ಮನ ಕಿತ್ತೂರಿನಲ್ಲಿ ಕಳೆದ ವರ್ಷ ಉದ್ಘಾಟನೆಯಾಗಿದ್ದ ತಾಲ್ಲೂಕು ಆಡಳಿತ ಸೌಧ   

ಚನ್ನಮ್ಮನ ಕಿತ್ತೂರು: ಇಲ್ಲಿ ನಿರ್ಮಾಣಗೊಂಡಿದ್ದ ‘ತಾಲ್ಲೂಕು ಆಡಳಿತ ಸೌಧ’ ಉದ್ಘಾಟನೆಯಾಗಿ ವರ್ಷ ಸಮೀಪಿಸುತ್ತಿದೆ. ಆದರೆ, ಕಂದಾಯ ಇಲಾಖೆಗೆ ಕಟ್ಟಡ ಇನ್ನೂ ಹಸ್ತಾಂತರವಾಗಿಲ್ಲ. ತರಾತುರಿಯಲ್ಲಿ ಉದ್ಘಾಟನೆಯಾದ ಕಟ್ಟಡದಲ್ಲೇ ಸದ್ಯ ತಾಲ್ಲೂಕು ಕಚೇರಿ ಆಡಳಿತ ನಡೆಸುತ್ತಿದೆ. ಹಲವು ಸೌಕರ್ಯಗಳ ಕೊರತೆಯೂ ಈ ಕಟ್ಟಡವನ್ನು ಕಾಡುತ್ತಿದೆ.

ಡಿ.ಬಿ.ಇನಾಮದಾರ ಶಾಸಕರಿದ್ದಾಗ, ಕಿತ್ತೂರಿಗೆ ಆಡಳಿತ ಸೌಧ ಮಂಜೂರಾಗಿತ್ತು. ನೆರೆ ಮತ್ತು ಕೊರೊನಾ ಹಾವಳಿಯಿಂದಾಗಿ ಆಮೆಗತಿಯಲ್ಲಿ ಕೆಲಸ ಸಾಗಿತ್ತು. ಹಲವು ತೊಡಕುಗಳ ಮಧ್ಯೆಯೂ 2022ರ ಜನವರಿಯಲ್ಲಿ ಕಾಮಗಾರಿ ಮುಕ್ತಾಯಗೊಂಡಿತು. ಕಳೆದ ವರ್ಷ ಕಿತ್ತೂರು ಉತ್ಸವದ ಉದ್ಘಾಟನೆಗೆ(2022ರ ಅ.24ರಂದು) ಬಂದಿದ್ದ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದನ್ನು ಉದ್ಘಾಟಿಸಿದ್ದರು. ಆದರೆ, ಹಸ್ತಾಂತರ ಪ್ರಕ್ರಿಯೆ ವಿಳಂಬವಾದ ಕಾರಣ, ಹಲವು ಕಚೇರಿಗಳೂ ಇನ್ನೂ ‘ಸೌಧ’ಕ್ಕೆ ಬಂದಿಲ್ಲ ಎಂಬುದು ನಾಗರಿಕರ ದೂರು.

‘ಒಂದೇ ಸೂರಿನಡಿ ಎಲ್ಲ ಕಚೇರಿಗಳು ಕೆಲಸ ಮಾಡಬೇಕಿತ್ತು. ಆದರೆ, ಕೆಲವು ಕಚೇರಿಗಳು ಸೌಧಕ್ಕೆ ಸ್ಥಳಾಂತರವಾಗದ್ದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ತಾಲ್ಲೂಕು ಕಚೇರಿ ಊರಿನ ಹೊರವಲಯದಲ್ಲಿದ್ದರೆ, ಕೆಲವು ಕಚೇರಿ ಊರೊಳಗೆ ಇವೆ. ಯಾವುದೇ ಕೆಲಸಕ್ಕೆ ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡುವಂತಾಗಿದೆ’ ಎಂದು ಅಳಲು ತೋಡಿಕೊಂಡರು.

ADVERTISEMENT

‘₹10 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ‘ಸೌಧ’ ಈಗಾಗಲೇ ಸೋರುತ್ತಿದೆ. ಮೊದಲ ಮಹಡಿಯಲ್ಲಿ ಶೌಚಗೃಹ ನಿರ್ಮಿಸಲಾಗಿದ್ದು, ಚಾವಣಿ ಹಾಳಾಗಿದೆ. ಹಾಗಾಗಿ ಶೌಚದ ನೀರು ನೆಲಮಹಡಿಯಲ್ಲಿ ತೊಟ್ಟಿಕ್ಕುತ್ತದೆ. ಮಳೆ ಬಿರುಸುಗೊಂಡರೆ ಇನ್ನಷ್ಟು ಸೋರುತ್ತಿದೆ. ಚಾವಣಿಯಿಂದ ನೀರು ಬಸಿಯುತ್ತಿದೆ. ಗೋಡೆಗಳು ಹಸಿಯಾಗುತ್ತಿವೆ’ ಎಂದು ಕಚೇರಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಬರಬೇಕಿವೆ ಕಚೇರಿಗಳು: ಚನ್ನಮ್ಮನ ಕಿತ್ತೂರು ತಾಲ್ಲೂಕು ಘೋಷಣೆಯ ಗೆಜೆಟ್ ಅಧಿಸೂಚನೆ ಪ್ರಕಟವಾಗಿ 10 ವರ್ಷ ಕಳೆದಿವೆ. ತಹಶೀಲ್ದಾರ್ ಹುದ್ದೆ ಸೃಜನೆಯಾಗಿ ಏಳು ವರ್ಷ ಸಂದಿವೆ. ಆದರೆ ಹಲವು ಇಲಾಖೆಗಳ ಕಚೇರಿಗಳು ಇನ್ನೂ ಕಿತ್ತೂರಿನತ್ತ ಮುಖಮಾಡಿಲ್ಲ. ‘ತಾಲ್ಲೂಕು ವೈದ್ಯಾಧಿಕಾರಿ ಕೃಷಿ ಸಹಾಯಕ ನಿರ್ದೇಶಕರು ತೋಟಗಾರಿಕೆ ಸಹಾಯಕ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹುದ್ದೆಯೇ ಕಿತ್ತೂರು ತಾಲ್ಲೂಕಿಗೆ ಮಂಜೂರಾಗಿಲ್ಲ. ಜನರು ವಿವಿಧ ಕೆಲಸಗಳಿಗಾಗಿ ಈಗಲೂ ಬೈಲಹೊಂಗಲಕ್ಕೆ ಓಡಾಡುವುದು ತಪ್ಪಿಲ್ಲ’ ಎನ್ನುತ್ತಾರೆ ರಾಣಿ ಚನ್ನಮ್ಮ ನವಭಾರತ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಭೀಮರಾಣಿ.

ಆಡಳಿತ ಸೌಧದಲ್ಲಿ ಗುತ್ತಿಗೆದಾರರು ಇನ್ನೂ ಒಂದಿಷ್ಟು ಕೆಲಸ ಬಾಕಿ ಉಳಿಸಿದ್ದಾರೆ. ಅವು ಮುಗಿದ ತಕ್ಷಣ ಸೌಧವನ್ನು ಅಧಿಕೃತವಾಗಿ ಹಸ್ತಾಂತರ ಮಾಡಿಕೊಳ್ಳಲಾಗುವುದು
-ಬಾಬಾಸಾಹೇಬ ಪಾಟೀಲ ಶಾಸಕ
ಯೋಜನೆ ಪ್ರಕಾರ ಗುತ್ತಿಗೆದಾರ ಎಲ್ಲ ಕೆಲಸ ಮಾಡಿದ್ದಾರೆ. ಯಾವುದಾದರೂ ಕೆಲಸ ಉಳಿದಿದ್ದರೆ ಅದನ್ನು ಕೈಗೊಳ್ಳುವಂತೆ ಗುತ್ತಿಗೆದಾರನಿಗೆ ಸೂಚಿಸಲಾಗಿದೆ
-ಸಂಜೀವ ಮಿರಜಕರ ಎಇಇ ಲೋಕೋಪಯೋಗಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.