ADVERTISEMENT

ಬೆಳಗಾವಿಯಲ್ಲೂ ‘ಚೆಂಬೆಳಕು’ ಬೀರಿದ್ದ ಚೆನ್ನವೀರ ಕಣವಿ

ಗಡಿ ಬಗ್ಗೆ‍ ಪ್ರೀತಿ, ಹಲವು ಕಾರ್ಯಕ್ರಮಗಳಲ್ಲಿ ಭಾಗಿ

ಎಂ.ಮಹೇಶ
Published 16 ಫೆಬ್ರುವರಿ 2022, 14:23 IST
Last Updated 16 ಫೆಬ್ರುವರಿ 2022, 14:23 IST
ಚೆನ್ನವೀರ ಕಣವಿ ಅವರು ಬೆಳಗಾವಿಯಲ್ಲಿ ಕೆಎಲ್‌ಇ ಸಂಸ್ಥೆಯ ಶತಮಾನೋತ್ಸವಕ್ಕೆ ಚಾಲನೆ ನೀಡಿದ್ದ ಸಂದರ್ಭ. ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಕೇಂದ್ರ ಸಚಿವ ಅನುರಾಗ್ ಠಾಕೂರ್, ಆಗ ಅಧ್ಯಕ್ಷರಾಗಿದ್ದ ವಿ.ಎಸ್. ಕೌಜಲಗಿ ಇದ್ದಾರೆ (ಸಂಗ್ರಹ ಚಿತ್ರ)
ಚೆನ್ನವೀರ ಕಣವಿ ಅವರು ಬೆಳಗಾವಿಯಲ್ಲಿ ಕೆಎಲ್‌ಇ ಸಂಸ್ಥೆಯ ಶತಮಾನೋತ್ಸವಕ್ಕೆ ಚಾಲನೆ ನೀಡಿದ್ದ ಸಂದರ್ಭ. ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಕೇಂದ್ರ ಸಚಿವ ಅನುರಾಗ್ ಠಾಕೂರ್, ಆಗ ಅಧ್ಯಕ್ಷರಾಗಿದ್ದ ವಿ.ಎಸ್. ಕೌಜಲಗಿ ಇದ್ದಾರೆ (ಸಂಗ್ರಹ ಚಿತ್ರ)   

ಬೆಳಗಾವಿ: ಕಾವ್ಯದ ಮೂಲಕ ಸಮಾಜದಲ್ಲಿ ಸುಧಾರಣೆ–ಬದಲಾವಣೆಗೆ ಹಂಬಲಿಸಿದ್ದ ಖ್ಯಾತ ಕವಿ ಡಾ.ಚೆನ್ನವೀರ ಕಣವಿ ಅವರು ಕುಂದಾನಗರಿಯಲ್ಲೂ ತಮ್ಮ ಜ್ಞಾನದ–ಮಾರ್ಗದರ್ಶನದ ‘ಚೆಂಬೆಳಕು’ ಬೀರಿದ್ದರು. ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಗಡಿಯಲ್ಲಿ ಭಾಷೆಗೆ–ನೆಲಕ್ಕೆ ಧಕ್ಕೆಯಾದಾಗ ದನಿ ಎತ್ತುತ್ತಿದ್ದರು.

ಇಲ್ಲಿನ ಸಾಹಿತಿಗಳು, ಕನ್ನಡಪರ ಹೋರಾಟಗಾರರು, ಚಿಂತಕರರು ಹಾಗೂ ಶಿಕ್ಷಣ ರಂಗದ ಪ್ರಮುಖರೊಂದಿಗೆ ಒಡನಾಟ ಹೊಂದಿದ್ದರು. ಆಗಾಗ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದರು.

ಇಲ್ಲಿನ ಕೆಎಲ್‌ಇ ಸಂಸ್ಥೆಯೊಂದಿಗೆ ನಂಟಿನ ಜೊತೆಗೆ ಅಭಿಮಾನವನ್ನೂ ಹೊಂದಿದ್ದರು. ಏಕೆಂದರೆ, ಅವರು ಈ ಸಂಸ್ಥೆಯು ಧಾರವಾಡದಲ್ಲಿ ನಡೆಸುತ್ತಿರುವ ಆರ್‌ಎಲ್‌ಎಸ್ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ. ಈ ಸಂಸ್ಥೆ ಹುಟ್ಟುಹಾಕಿದ ‘ಸಪ್ತರ್ಷಿ’ಗಳ ಬಗ್ಗೆ ತಮ್ಮ ಕವನಗಳಲ್ಲಿ ಉಲ್ಲೇಖಿಸಿರುವುದೂ ಇದೆ. ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಗೆ ಸ್ವಾಗತ ಗೀತೆ ರಚಿಸಿಕೊಟ್ಟಿದ್ದರು. ಅಂತೆಯೇ ನಾಗನೂರು ರುದ್ರಾಕ್ಷಿಮಠದ ಒಡನಾಟದಲ್ಲೂ ಇದ್ದರು.

ADVERTISEMENT

ಕೊಡುಗೆ ನೆನೆದ ಕೋರೆ:

‘ಅವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅನುಪಮ– ಚಿರಸ್ಮರಣೀಯವಾದುದು. ಬದುಕಿನುದ್ದಕ್ಕೂ ಪಂಥ-ಪಂಗಡಗಳಿಗೆ ಒಳಗಾಗದೆ ಸಮನ್ವಯದ ಕವಿಯಾಗಿ ಕನ್ನಡ ಸಾಹಿತ್ಯ ಗಂಗೋತ್ರಿಯನ್ನು ಪೋಷಿಸಿದರು. ಕೆಎಲ್‌ಇ ಸಂಸ್ಥೆಯ ಅಪ್ಪಟ ಅಭಿಮಾನಿ ಆಗಿದ್ದರು’ ಎಂದು ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ನೆನೆಯುತ್ತಾರೆ.

‘ಲಿಂಗರಾಜ ಕಾಲೇಜಿನ ಕನ್ನಡ ಸಂಘ, ಜೆಎನ್‌ಎಂಸಿ ಕನ್ನಡ ಬಳಗದ್ದು ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದರು. 2007ರ ಮಾರ್ಚ್28ರಂದು ಲಿಂಗರಾಜ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಆಡಿದ್ದ ಮಾತುಗಳು ಇಂದಿಗೂ ನೆನಪಿವೆ’ ಎಂದಿದ್ದಾರೆ.

2016ರಲ್ಲಿ ಕೆಎಲ್‌ಇ ಸಂಸ್ಥೆಯ ಶತಮಾನೋತ್ಸವಕ್ಕೆ ಚಾಲನೆ ನೀಡಿದ್ದರು. ರ‍್ಯಾಲಿಯಲ್ಲೂ ಭಾಗವಹಿಸಿದ್ದರು. ಕೆಎಲ್‌ಇ ಅಂಚೆ ಚೀಟಿ, ಶತಮಾನೋತ್ಸವದ ಲಾಂಛನ ಅನಾವರಣ ಮಾಡಿದ್ದರು. ಅಲ್ಲಿನ ಪ್ರಸಾರಾಂಗದ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಮಾತೃ ಭಾಷೆಯಲ್ಲಿರಲಿ ಎಂದಿದ್ದರು:

2017ರ ಡಿ.7ರಂದು ನಾಗನೂರ ರುದ್ರಾಕ್ಷಿಮಠದಿಂದ ಶಿವಬಸವ ನಗರದಲ್ಲಿರುವ ಆರ್‌.ಎನ್‌. ಶೆಟ್ಟಿ ಪಾಲಿಟೆಕ್ನಿಕ್‌ ಆವರಣದಲ್ಲಿ ಶಿವಬಸವ ಸ್ವಾಮೀಜಿಯವರ ಜಯಂತಿ ಮಹೋತ್ಸವದಲ್ಲಿ ಲಿಂ.ಪ್ರಭು ಸ್ವಾಮೀಜಿ ಪುಣ್ಯಸ್ಮರಣೆ, ಕರ್ನಾಟಕ ರಾಜ್ಯೋತ್ಸವ ಹಾಗೂ ಪ್ರಸಾದನಿಲಯಗಳ ಹಳೆಯ ವಿದ್ಯಾರ್ಥಿಗಳ ಸಮಾವೇಶ ಉದ್ಘಾಟಿಸಿದ್ದರು. ‘ಪ್ರಾಥಮಿಕ ಶಾಲಾ ಹಂತದ ಶಿಕ್ಷಣ ಮಾತೃ ಭಾಷೆಯಲ್ಲಿಯೇ ಇರಬೇಕು. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೂ ಸಮಾಲೋಚಿಸಿ, ತಿದ್ದುಪಡಿಗೆ ಕೇಂದ್ರದ ಮೇಲೆ ಒತ್ತಡ ಹೇರಬೇಕು’ ಎಂದು ಒತ್ತಾಯಿಸಿದ್ದರು.

2017ರ ಸೆ.25ರಂದು ಬಿ.ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಗೊಳ್ಳಿರಾಯಣ್ಣ ಶಿಕ್ಷಣ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬ.ಗಂ. ತುರುಮರಿ ಅವರ ಜನ್ಮಶತಮಾನೋತ್ಸವದಲ್ಲಿ ಪಾಲ್ಗೊಂಡಿದ್ದರು.

2018ರ ಮಾರ್ಚ್ 4ರಂದು ಇಲ್ಲಿನ ಬಸವರಾಜ ಕಟ್ಟೀಮನಿ ಪ್ರತಿಷ್ಠಾನವು ಆಯೋಜಿಸಿದ್ದ ‘ಬಸವರಾಜ ಕಟ್ಟೀಮನಿ: ನೆನಪಿನಂಗಳ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ‘ಅಪರೂಪದ ಬರಹಗಾರರಾಗಿದ್ದ ಕಟ್ಟೀಮನಿ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡವರಲ್ಲ. ಎಡಪಂಥೀಯ ನಿಲುವುಗಳಿಗೆ ಬದ್ಧರಾಗಿ ಬರೆದಿದ್ದಾರೆ’ ಎಂದು ಸ್ಮರಿಸಿದ್ದರು.

ಬಳಿಕ ವಯೋಸಹಜ ಆರೋಗ್ಯ ಸಮಸ್ಯೆ ಕಾರಣಕ್ಕೆ ಜಿಲ್ಲೆಗೆ ಭೇಟಿ ನೀಡುವುದನ್ನು ಕಡಿಮೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.