ADVERTISEMENT

ಬೆಳಗಾವಿಯಲ್ಲೇ ವಿಧಾನಮಂಡಲ ಅಧಿವೇಶನ: ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 12:23 IST
Last Updated 7 ಡಿಸೆಂಬರ್ 2021, 12:23 IST
ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ   

ಬೆಳಗಾವಿ: 'ವಿಧಾನಮಂಡಲ ಚಳಿಗಾಲದ ಅಧಿವೇಶನವನ್ನು, ನಿಗದಿಯಾಗಿರುವಂತೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲೇ ಡಿ.13ರಿಂದ ನಡೆಸಲಾಗುವುದು' ಎಂದು ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದ ಅವರು,'ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸುವುದಿಲ್ಲ, ಮುಂದೂಡುತ್ತಾರೆ ಎಂದೆಲ್ಲಾ ಕೆಲವರು ಹಬ್ಬಿಸುತ್ತಿದ್ದಾರೆ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಸುವರ್ಣ ವಿಧಾನಸೌಧದಲ್ಲೇ ನಡೆಸುತ್ತೇವೆ. ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ' ಎಂದು ಹೇಳಿದರು.

'ರಾಜ್ಯದಲ್ಲಿ ಅಕಾಲಿಕ‌ ಮಳೆಯಿಂದ ಮನೆಗಳು ಹಾಗೂ ಬೆಳೆಗಳಿಗೆ ಆಗಿರುವ ಹಾನಿ ಮೊದಲಾದ ಜನರ ವಿಚಾರಗಳ ಕುರಿತು ಚರ್ಚೆಯಾಗಬೇಕು. ಸಂತ್ರಸ್ತರಿಗೆ ಹಾಗೂ ‌ರೈತರಿಗೆ ಪರಿಹಾರ ಸಿಗಬೇಕು. ಪರಿಹಾರ ವಿತರಣೆಯಲ್ಲಿ ಈಗಾಗಲೇ ಕೈಗೊಂಡಿರುವ ಕ್ರಮದ ಬಗ್ಗೆಯೂ ಚರ್ಚೆ ಆಗಬೇಕು ಎನ್ನುವುದು ನಮ್ಮ ಭಾವನೆಯಾಗಿದೆ' ಎಂದರು.

ADVERTISEMENT

'ರಾಜ್ಯದಲ್ಲಿ ಭಾನುವಾರದವರೆಗೆ₹ 422 ಕೋಟಿ ಪರಿಹಾರ ನೀಡಲಾಗಿದೆ. ಸಮೀಕ್ಷೆ ಪೂರ್ಣವಾಗುತ್ತಿದ್ದಂತೆಯೇ ಕೂಡಲೇ ಪರಿಹಾರ ಬಿಡುಗಡೆ‌ ಮಾಡಲಾಗುತ್ತಿದೆ' ಎಂದು ತಿಳಿಸಿದರು.

'ಮಳೆಯಿಂದ ಹಾನಿಗೊಳಗಾದ ವಾಣಿಜ್ಯ ಬೆಳೆಗಳು ಸೇರಿದಂತೆ ಎಲ್ಲ ಬೆಳೆಗಳಿಗೂ ಪರಿಹಾರ ಕೊಡಲಾಗುವುದು' ಎಂದು ಭರವಸೆ ‌ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.