ADVERTISEMENT

ಚಿಕ್ಕೋಡಿ: ಭಂಡಾರದ ಓಕುಳಿಯಲ್ಲಿ ಮಿಂದೆದ್ದ ಭಕ್ತವೃಂದ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2025, 4:29 IST
Last Updated 11 ಮಾರ್ಚ್ 2025, 4:29 IST
-ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದ ಅರಣ್ಯ ಸಿದ್ದೇಶ್ವರ-ಮಲಕಾರಿ ಸಿದ್ದೇಶ್ವರ ಜಾತ್ರೆಯಲ್ಲಿ ಭಂಡಾರ ತೂರುತ್ತಿರುವುದು. ಚಿತ್ರ- ಇಂದ್ರಕುಮಾರ ದಸ್ತೆನವರ
-ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದ ಅರಣ್ಯ ಸಿದ್ದೇಶ್ವರ-ಮಲಕಾರಿ ಸಿದ್ದೇಶ್ವರ ಜಾತ್ರೆಯಲ್ಲಿ ಭಂಡಾರ ತೂರುತ್ತಿರುವುದು. ಚಿತ್ರ- ಇಂದ್ರಕುಮಾರ ದಸ್ತೆನವರ   

ಚಿಕ್ಕೋಡಿ: ತಾಲ್ಲೂಕಿನ ಕೇರೂರ ಗ್ರಾಮದ ಅರಣ್ಯ ಸಿದ್ದೇಶ್ವರ ಹಾಗೂ ಮಲಕಾರಿ ಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತವಾಗಿ ನಡೆದ ನಿವ್ವಾಳಕಿ ಹಾಗೂ ದೇವರ ನುಡಿಯ ಕಾರ್ಯಕ್ರಮದಲ್ಲಿ ದೇವರ ಮೇಲೆ ಭಂಡಾರ ತೂರಿ ಸಹಸ್ರಾರು ಭಕ್ತರು ತಮ್ಮ ಹರಕೆ ತೀರಿಸಿದರು. ನಾಲ್ಕೂ ದಿಕ್ಕಿಗಳಿಂದ ಉಲ್ಕೆಗಳಂತೆ ಭಂಡಾರ ತೂರಿ ಬರುವ ದೃಶ್ಯ ನಯನಮನೋಹರವಾಗಿತ್ತು.

ಮಾ 6 ರಿಂದ 10ರವರೆಗೆ ಐದು ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಜಾತ್ರೆಯ ಕೊನೆಯ ದಿನ ಸೋಮವಾರದಂದು ದೇವರಿಗೆ ನಿವ್ವಾಳಕಿಯನ್ನು ಸಲ್ಲಿಸುವ ಹಾಗೂ ದೇವನುಡಿಯೊಂದಿಗೆ ಜಾತ್ರೆಯು ಸಂಪನ್ನಗೊಂಡಿತು.

‘ಹಂಡ ಕುದರಿ ಪುಂಡ ಅರಣ್ಯಸಿದ್ದಗ ಚಾಂಗ ಬಲೋ...ಬಿಳಿಗುಡಿ ಅರಣ್ಯಸಿದ್ದಗ ಜಾಂಗ ಬಲೋ’ ಎಂಬ ಉದ್ಘೋಷದೊಂದಿಗೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತ ಸಮೂಹ 25-30 ಟನ್ ಗೂ ಹೆಚ್ಚು ಭಂಡಾರವನ್ನು ತೂರಿದ್ದರಿಂದ ಕೇರೂರ ಗ್ರಾಮದ ದೇವಸ್ಥಾನದ ಆವರಣ ಹಳದಿಮಯವಾಗಿತ್ತು. ಭಂಡಾರವೋ? ಬಂಗಾರವೋ ಅನ್ನುವಂತೆ ಸೂರ್ಯ ಕಿರಣಗಳಿಗೆ ಹೊನ್ನು ಹೊಳೆದಂತೆ ಹೊಳೆಯುತ್ತಿತ್ತು.

ADVERTISEMENT

‘ಬೆಳಗಾವಿ ಜಿಲ್ಲೆಯಲ್ಲಿ ಸುಪ್ರಸಿದ್ದವಾಗಿರುವ ಭಂಡಾರ ತೂರುವ ಜಾತ್ರೆಗಳಲ್ಲೊಂದಾಗಿರುವ ಕೇರೂರ ಗ್ರಾಮದ ಜಾತ್ರೆಯು ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು, ಇಲ್ಲಿ ಭಂಡಾರ ಹಾರಿಸುವ ದೃಶ್ಯ ಮನಮೋಹಕವಾಗಿರುತ್ತದೆ’ ಎನ್ನುತ್ತಾರೆ ಹವ್ಯಾಸಿ ಛಾಯಾಗ್ರಾಹಕ ಇಂದ್ರಕುಮಾರ ದಸ್ತೆನವರ.

15 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಕೇರೂರ ಗ್ರಾಮದಲ್ಲಿ ಎಲ್ಲಿಯೂ ಕೂಡ ಫ್ಲೆಕ್ಸ್ ಗಳನ್ನು ಅಳವಡಿಸದೇ ಹಾಗೂ ಜಾತ್ರೆಯಲ್ಲಿ ಶುದ್ದ ಅರಿಸಿಣ ಪುಡಿಯನ್ನೇ ಮಾರಾಟ ಮಾಡಿ ಜಾತ್ರಾ ಕಮಿಟಿಯು ಪರಿಸರ ಕಾಳಜಿಯನ್ನು ಮೆರೆಯುತ್ತಿದೆ. ಕಳಪೆ ಗುಣಮಟ್ಟದ, ರಾಸಾಯನಿಕ ಮಿಶ್ರಿತ ಭಂಡಾರ ಮಾರಾಟ ಮಾಡಿದ್ದಲ್ಲಿ ಮುಲಾಜಿಲ್ಲದೇ ಕಂಜಾತ್ರಾ ಕಮಿಟಿ ₹5 ಸಾವಿರ ದಂಡ ವಿಧಿಸುತ್ತದೆ.

ಜಾತ್ರೆಯ ಸಂದರ್ಭದಲ್ಲಿ ಐದು ದಿನಗಳ ಕಾಲ ಗ್ರಾಮದ ಜನರು ದೇವಸ್ಥಾನದ ಸಮೀಪದ ಶಾಲೆ, ದೇವಸ್ಥಾನ, ಹೊಲ ಗದ್ದೆಗಳಲ್ಲಿಯೇ ವಸತಿ ಇದ್ದು, ಅಡುಗೆ ಮಾಡಿ ಊಟ ಮಾಡುವ ರೂಢಿಯು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದ್ದು ವಿಶೇಷತೆಗಳಲ್ಲೊಂದಾಗಿದೆ.

ನಿವ್ವಾಳಕಿಯ ನಿಮಿತ್ಯವಾಗಿ ದೇವಸ್ಥಾನದ ಹಿಂಬದಿಯಲ್ಲಿ ಪಲ್ಕಕ್ಕಿ ಆಗಮಿಸುತ್ತಿದ್ದಂತೆಯೇ ಜನ ತಾ ಮುಂದು ನಾ ಮುಂದು ಅಂತಾ ಮಹಿಳೆಯರು, ಮಕ್ಕಳು, ಯುವಕರು ಭಂಡಾರ ಹಾರಿಸಿದರು. ಹೋಯ್..ಹೋಯ್ ಅಂತಾ ಜನ ಪಲ್ಲಕ್ಕಿ, ದೇವರ ಎತ್ತು, ದೇವರ ಕುದುರೆ, ದೇವರ ಪಲ್ಲಕ್ಕಿ ಬಂದಾಗಲೊಮ್ಮೆ ಭಂಡಾರ ತೂರಲಾಗತ್ತತ್ತು. ಹಳದಿ ಬಣ್ಣ ನೆಲ ಮುಗಿಲಿಗೆ ಏಣಿ ಹಾಕಿದಂತೆ ಕಂಡು ಬಂತು.

-ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದ ಅರಣ್ಯ ಸಿದ್ದೇಶ್ವರ-ಮಲಕಾರಿ ಸಿದ್ದೇಶ್ವರ ಜಾತ್ರೆಯಲ್ಲಿ ಭಂಡಾರ ತೂರುತ್ತಿರುವುದು. ಚಿತ್ರ- ಇಂದ್ರಕುಮಾರ ದಸ್ತೆನವರ
‘ದೇವರ ಮಹಿಮೆ ಬಹಳವಿದೆ. ಜಾತ್ರೆಯ ಕೊನೆಯ ದಿನದಂದು ನುಡಿದ ದೇವವಾಣಿ ಹುಸಿ ಹೋಗುವುದಿಲ್ಲ. ಈ ವರ್ಷ ಮಳೆ ಬೆಳೆ ಕೇಡು-ಸೌಖ್ಯ ಹೇಗೆಲ್ಲ ಇದೆ ಅಂತಾ ಕೇಳಲು ಇಲ್ಲಿಗೆ ಸಹಸ್ರಾರು ಜನರು ಬರುತ್ತಾರೆ’
ಮಲ್ಲಿಕಾರ್ಜುನ ಪಾಟೀಲ ಅಧ್ಯಕ್ಷ ಜಾತ್ರಾ ಕಮೀಟಿ
-ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದ ಅರಣ್ಯ ಸಿದ್ದೇಶ್ವರ-ಮಲಕಾರಿ ಸಿದ್ದೇಶ್ವರ ಜಾತ್ರೆಯಲ್ಲಿ ಭಂಡಾರ ತೂರುವ ಒಂದು ನೋಟ. ಚಿತ್ರ - ಚಂದ್ರಶೇಖರ ಎಸ್ ಚಿನಕೇಕರ
‘ನಿವ್ವಾಳಕಿಯನ್ನು ನೋಡುವುದೇ ವಿಶೇಷ. ಇಲ್ಲಿ ಆಡುವ ದೇವರ ನುಡಿಗಳು ಸತ್ಯವಾಗಿದ್ದರಿಂದ ಜನರ ದೇವರ ನುಡಿಗಳನ್ನು ಕೇಳಲು ದೂರದೂರದ ಊರಿನಿಂದ ಇಲ್ಲಿಗೆ ಬರುತ್ತಾರೆ’
ಉಜ್ವಲಾ ಮಾಳಿ ಭಕ್ತೆ ಕೇರೂರ
-ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದ ಅರಣ್ಯ ಸಿದ್ದೇಶ್ವರ-ಮಲಕಾರಿ ಸಿದ್ದೇಶ್ವರ ಜಾತ್ರೆಯಲ್ಲಿ ಭಂಡಾರ ತೂರುವ ಒಂದು ನೋಟ. ಚಿತ್ರ - ಚಂದ್ರಶೇಖರ ಎಸ್ ಚಿನಕೇಕರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.