ADVERTISEMENT

ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ: ಅಧಿವೇಶನದಲ್ಲಿ ಮುಖ್ಯಮಂತ್ರಿ ಬಳಿ ನಿಯೋಗ

ಸಭೆಯಲ್ಲಿ ವಿವಿಧ ಮಠಾಧೀಶರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 3:07 IST
Last Updated 4 ಡಿಸೆಂಬರ್ 2025, 3:07 IST
ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಸಭೆಯಲ್ಲಿ ನಿಡಸೋಸಿ ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿದರು
ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಸಭೆಯಲ್ಲಿ ನಿಡಸೋಸಿ ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿದರು   

ಚಿಕ್ಕೋಡಿ: ‘ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಘೋಷಣೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಅಧಿವೇಶನದ ಸಂದರ್ಭದಲ್ಲಿ ಸ್ವಾಮೀಜಿಗಳ ನಿಯೋಗ ತೆರಳಿ ಮನವಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ’ ಎಂದು ನಿಡಸೋಶಿಯ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆಯ ಸಭಾಭವನದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ವಿವಿಧ ಮಠಾಧೀಶರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

‘ಮೂರು ದಶಕಗಳಿಂದ ಜಿಲ್ಲೆ ಘೋಷಣೆಗೆ ಹೋರಾಟ ನಡೆದಿದ್ದು, ಈ ಅವಧಿಯಲ್ಲಿ ರಾಜ್ಯದಲ್ಲಿ ಸಾಕಷ್ಟು ದೊಡ್ಡ ಜಿಲ್ಲೆಗಳು ವಿಭಜನೆಯಾಗಿ 10ಕ್ಕೂ ಹೆಚ್ಚು ಹೊಸ ಜಿಲ್ಲೆಗಳು ರಚನೆಯಾಗಿವೆ. 60 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಜಿಲ್ಲೆ ಘೋಷಣೆ ಮಾಡುವುದಾಗಿ ಹಲವು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ’ ಎಂದರು.

ADVERTISEMENT

ಬೆಳವಿಯ ಚರಂತೇಶ್ವರ ವಿರಕ್ತಮಠದ ಶರಣಬಸವ ದೇವರು ಮಾತನಾಡಿ, ‘ಚಿಕ್ಕೋಡಿ ಜಿಲ್ಲೆ ಘೋಷಣೆ ಮಾಡುವುದರಿಂದ ಕರ್ನಾಟಕ– ಮಹಾರಾಷ್ಟ್ರ ಗಡಿ ಮತ್ತಷ್ಟು ಭದ್ರವಾಗುತ್ತದೆ’ ಎಂದರು.

ಜೋಡಕುರಳಿಯ ಸಿದ್ಧಾರೂಢ ಮಠದ ಚಿದ್ಘನಾನಂದ ಸ್ವಾಮೀಜಿ ಮಾತನಾಡಿ, ‘ಜಿಲ್ಲೆ ವಿಭಜನೆ ಆದರೆ ಅಭಿವೃದ್ಧಿಗೆ ಅನುಕೂಲವಾಗಲಿದೆ’ ಎಂದರು.

ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಮಾತನಾಡಿದರು. ಬೆಲ್ಲದ ಬಾಗೇವಾಡಿಯ ವಿರಕ್ತಮಠದ ಶಿವಾನಂದ ಸ್ವಾಮೀಜಿ, ಬೆಂಡವಾಡದ ರೇವಣಸಿದ್ದೇಶ್ವರ ಮಠದ ಗುರುಸಿದ್ಧ ಸ್ವಾಮೀಜಿ, ಆಡಿಯ ಸಿದ್ದೇಶ್ವರಮಠದ ಸಿದ್ದೇಶ್ವರ ಸ್ವಾಮೀಜಿ, ಕಮತೇನಟ್ಟಿಯ ಪ್ರಭುಲಿಂಗೇಶ್ವರಮಠದ ಗುರುದೇವ ದೇವರು, ನಿಪ್ಪಾಣಿಯ ಮುರುಘೇಂದ್ರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಡೋಣವಾಡದ ದುರದುಂಡೇಶ್ವರಮಠದ ಶಿವಾನಂದ ಸ್ವಾಮೀಜಿ, ಖಡಕಲಾಟದ ಕುಮಾರೇಶ್ವರಮಠದ ಶಿವಬಸವ ಸ್ವಾಮೀಜಿ, ಕಬ್ಬೂರಿನ ಗೌರಿಶಂಕರ ಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಗೌರವಾಧ್ಯಕ್ಷ ರುದ್ರಪ್ಪ ಸಂಗಪ್ಪಗೋಳ, ಸುರೇಶ ಬ್ಯಾಕೂಡ, ರಾಮಕೃಷ್ಣ ಪಾನಬುಡೆ, ನಾಗೇಶ ಮಾಳಿ, ಭರತ ಕಲಾಚಂದ್ರ, ತ್ಯಾಗರಾಜ ಕದಂ, ಕೃಷ್ಣ ಕೆಂಚನ್ನವರ, ಕುಮಾರ ಭಾಗವಹಿಸಿದ್ದರು.

ಡಿ.31ರೊಳಗೆ ರಾಜ್ಯಗಳು ಹೊಸ ಜಿಲ್ಲೆ– ತಾಲ್ಲೂಕುಗಳನ್ನು ರಚಿಸಿಕೊಳ್ಳಲು ಕೇಂದ್ರ ಸರ್ಕಾರ ಸೂಚನೆ ನೀಡಿದ್ದು ಚಿಕ್ಕೋಡಿ ಜಿಲ್ಲಾ ಘೋಷಣೆಯ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ
–ಎಸ್.ವೈ. ಹಂಜಿ, ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.