ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದ ಹೊರವಲಯದಲ್ಲಿ ಅಲೆಮಾರಿಗಳ ಜೋಪಡಿಗಳಿಗೆ ಕೃಷ್ಣಾ ನದಿ ನೀರು ಜಲಾವೃತಗೊಂಡಿರುವುದು.
ಚಿಕ್ಕೋಡಿ: ‘ಅಯ್ಯೋ..ನೀರು ಬಂತು ನಡ್ರೋ...ಜೋಪಡಿ ಪಟ್ಟಿಯನ್ನೆಲ್ಲ ಸುತ್ತುವರದೈತಿ...’ ಅನ್ನೋ ಭಯದಿಂದ ಹೊರಗಡೆ ಓಡೋಡಿ ಬಂದ ಅಂಕಲಿ ಗ್ರಾಮದ ಹೊರವಲಯದಲ್ಲಿ ನೆಲೆ ನಿಂತ ಅಲೆಮಾರಿ ಜನರು.
‘ಎಪ್ಪೋ.ಯಾವಾಗ ಹೊಳಿ ಏರತೈತೋ ಯಾರಿಗ್ಹೊತ್ತು...ಜಾನುವಾರುಗಳನ್ನು ಹೊಡೆದುಕೊಂಡು ಹೊರಗ್ಹೋಗೋಣ ನಡೀರಿ...’ ಅಂತಾ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ತರುತ್ತಿರುವ ಇಂಗಳಿ ಗ್ರಾಮದ ಮಳಿ ಭಾಗದ ನಿವಾಸಿಗಳು.
ಮಹಾರಾಷ್ಟ್ರದಲ್ಲಿ ಮಳೆಯಾದರೆ ಚಿಕ್ಕೋಡಿ ಉಪ ವಿಭಾಗದಲ್ಲಿ ಮಹಾಪೂರ ಬರೋದು ಕಳೆದ 2-3 ದಶಕಗಳಿಂದ ತಪ್ಪಿಲ್ಲ. ಹೀಗಾಗಿಯೇ ಪ್ರತಿ ವರ್ಷವೂ ಇಂತಹದೊಂದು ನರಕಯಾತನೆಯನ್ನು ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ಕೃಷ್ಣಾ, ಧೂಧಗಂಗಾ, ವೇದಗಂಗಾ ನದಿ ತೀರದ ಜನರು ಅನುಭವಿಸುತ್ತಲೇ ಇದ್ದಾರೆ. ಕಳೆದೊಂದು ವಾರದಿಂದ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಸುರಿದ ಭಾರೀ ಪ್ರಮಾಣದ ಮಳೆಯಿಂದಾಗಿ ಕೃಷ್ಣಾ ನದಿಯ ಹೊರ ಹರಿವು ಎರಡೂವರೆ ಲಕ್ಷ ಕ್ಯೂಸೆಕ್ ದಾಟಿದ್ದರಿಂದ ಮಹಾಪೂರದ ಭೀತಿ ನದಿ ತೀರದ ಜನರಲ್ಲಿ ಹೆಚ್ಚಿದೆ.
ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ನಿನ್ನೆಯಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಮಳೆ ಹನಿ ನಿಂತರೂ ಮರದ ಹನಿ ನಿಲ್ಲಲ್ಲ ಅನ್ನೋ ಹಾಗೇ ಚಿಕ್ಕೋಡಿ ಉಪ ವಿಭಾಗದಲ್ಲಿ ನದಿ ನೀರಿನ ಹರಿವು ಹೆಚ್ಚುತ್ತಲೇ ಇದೆ. ಹೀಗಾಗಿ ತಾಲ್ಲೂಕಿನ ಅಂಕಲಿ ಗ್ರಾಮದ ಹೊರವಲಯದ ಅಲೆಮಾರಿ ಜನರು ವಾಸವಿದ್ದ (ಶಿವಮೊಗ್ಗ ಮೂಲದವರು) 20ಕ್ಕೂ ಹೆಚ್ಚು ಜೋಪಡಿಗಳ ಸುತ್ತಲೂ ಗುರುವಾರ ತಡರಾತ್ರಿ ಕೃಷ್ಣಾ ನದಿ ನೀರು ಸುತ್ತುವರೆದಿದ್ದರಿಂದ 20ಕ್ಕೂ ಹೆಚ್ಚು ಕುಟುಂಬಗಳು ಎಚ್ಚೆತ್ತುಕೊಂಡು ಸುರಕ್ಷಿತ ಸ್ಥಳ ಸೇರಿವೆ.
ಇನ್ನು, ಕೃಷ್ಣಾ ನದಿ ತೀರದ ಇಂಗಳಿ ತೋಟದ ವಸತಿ ಪ್ರದೇಶವಾಗಿರುವ ಮಳಿ ಭಾಗಕ್ಕೆ ನದಿ ನೀರು ಸುತ್ತುವರೆದು ನಡುಗಡ್ಡೆಯಾದೀತು ಎಂಬ ಆತಂಕದಿಂದ ಇಲ್ಲಿನ ಹತ್ತಾರು ಕುಟುಂಬಗಳು ತಮ್ಮ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ತರುವ ಕಾರ್ಯವನ್ನು ಶುಕ್ರವಾರ ಇಡೀ ದಿನ ಮಾಡಿದ್ದು ಕಂಡು ಬಂತು. ಹಾಗೇನೇ, ಯಡೂರ ಗ್ರಾಮದಲ್ಲಿ ಕಾಡಸಿದ್ದೇಶ್ವರ ಮಠದಿಂದ ನಿರ್ವಹಿಸುವ ಗೋಶಾಲೆಯವರೆಗೆ ಕೃಷ್ಣಾ ನದಿ ನೀರು ಸುತ್ತುವರೆದಿದ್ದರಿಂದ ಇಲ್ಲಿನ 45ಕ್ಕೂ ಹೆಚ್ಚು ಹಸು ಹಾಗೂ ಕರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಕಲ್ಲೋಳ ಗ್ರಾಮದ ತೋಟದ ವಸತಿ ಪ್ರದೇಶದಲ್ಲಿರುವ 50ಕ್ಕೂ ಹೆಚ್ಚು ಕುಟುಂಬಗಳು ಗ್ರಾಮದ ಮಸೋಬಾ ದೇವಸ್ಥಾನದ ಬಳಿಯಲ್ಲಿರುವ ತಮ್ಮ ನೆಂಟರಿಷ್ಟರ ಮನೆಗೆ ತೆರಳಿವೆ. ಕೃಷ್ಣಾ ನದಿ ನೀರು ಪಾತ್ರ ಮೀರಿ ಹರಿಯುತ್ತಿರುವ ಪರಿಣಾಮವಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಇಲ್ಲಿನ ಜನರು ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಇಲ್ಲಿ ಟ್ಯಾಂಕರ್ ಮೂಲಕವಾದರೂ ಕುಡಿಯುವ ನೀರನ್ನು ಪೂರೈಕೆ ಮಾಡಬೇಕೆಂಬ ಬೇಡಿಕೆ ಇದೆ.
ಕೃಷ್ಣಾ ಹಾಗೂ ಉಪನದಿಗಳ ತೀರದಲ್ಲಿರುವ ಪ್ರತಿ ವರ್ಷ ಮಳೆಗಾಲದಲ್ಲಿ ಅನುಭವಿಸುವ ಯಾತನೆಗೆ ಕೊನೆ ಇಲ್ಲದಂತಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕಿದೆಅಮರ ನಾಯಕ ಸ್ಥಳೀಯರು ಅಂಕಲಿ
ಕೃಷ್ಣಾ ನದಿ ಪಾತ್ರ ಮೀರಿ ಹರಿದಿದ್ದರಿಂದ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಆಗಮಿಸಿದ್ದರೂ ಇಲ್ಲಿ ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿದ್ದೇವೆ. ಸಂಬಂಧಿಸಿದವರು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕುಈಶ್ವರ ಕೆರೂರೆ ಕಲ್ಲೋಳ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.