ಪ್ರಜಾವಾಣಿ ವಾರ್ತೆ
ಚಿಕ್ಕೋಡಿ: ‘ಚಿಕ್ಕೋಡಿ– ಸದಲಗಾ ಕ್ಷೇತ್ರವನ್ನು ಮಾದರಿಯನ್ನಾಗಿಸಲು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಹಾಗೂ ಚಿಕ್ಕೋಡಿ– ಸದಲಗಾ ಶಾಸಕ ಗಣೇಶ ಹುಕ್ಕೇರಿ ಆದ್ಯತೆ ನೀಡಿದ್ದಾರೆ. ಕ್ಷೇತ್ರದಲ್ಲಿ ಅನುದಾನದ ಹೊಳೆ ಹರಿಸಿ ಅಭಿವೃದ್ಧಿಯನ್ನು ಮಾಡುತ್ತಿದ್ದಾರೆ’ ಎಂದು ಚಿಕ್ಕೋಡಿ ಪುರಸಭೆ ಸದಸ್ಯ ರಾಮಾ ಮಾನೆ ಹೇಳಿದರು.
ಪಟ್ಟಣದ ವಿಶ್ವೇಶ್ವರಯ್ಯಾ ಬಡಾವಣೆಯಲ್ಲಿ ಭಾನುವಾರ ರಸ್ತೆ ಸುಧಾರಣಾ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ‘ರಸ್ತೆ, ಚರಂಡಿ, ನೀರಾವರಿ, ಶಿಕ್ಷಣ ಕ್ಷೇತ್ರಕ್ಕೆ ಗಣೇಶ ಹುಕ್ಕೇರಿ ಹಾಗೂ ಪ್ರಕಾಶ ಹುಕ್ಕೇರಿ ಹೆಚ್ಚಿನ ಆದ್ಯತೆ ನೀಡಿದ್ದು, ಪಟ್ಟಣದ ಕುವೆಂಪು ನಗರ, ವಿಶ್ವೇಶ್ವರಯ್ಯಾ ನಗರ ಹಾಗೂ ಸಂಗೊಳ್ಳಿ ರಾಯಣ್ಣ ನಗರಗಳಲ್ಲಿ ₹90 ಲಕ್ಷ ಅನುದಾನದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದರು.
ಮುಖಂಡ ಸುರೇಶ ಚೌಗಲಾ ಮಾತನಾಡಿ, ‘ಹೆಚ್ಚಿನ ಅನುದಾನವನ್ನು ಚಿಕ್ಕೋಡಿ ಪಟ್ಟಣದ ವಿವಿಧ ಬಡಾವಣೆಗಳಿಗೆ ನೀಡಿ ಅಭಿವೃದ್ಧಿಗೆ ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯರು ಆದ್ಯತೆ ನೀಡಿದ್ದಾರೆ. ವಿಶ್ವೇಶ್ವರಯ್ಯಾ ಬಡಾವಣೆಯ ಆಂಜನೇಯ ದೇವಸ್ಥಾನ ಸೇರಿದಂತೆ ವಿವಿಧೆಡೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಶಾಸಕರು ಕೈಗೆತ್ತಿಕೊಳ್ಳಬೇಕು’ ಎಂದರು.
ಹಿರೇಕೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮಾದೇವಿ ಮುಕುಂದ, ಅನಿಲ ಮಾನೆ, ಗುಲಾಬಹುಸೇನ ಬಾಗವಾನ, ಸಂಜೀವ ಕಾಂಬಳೆ, ಸತೀಶ ದಾಮನ್ನವರ, ಗ್ರಾಮ ಪಂಚಾಯಿತಿ ಸದಸ್ಯರಾದ ರಾಮಾ ಬಂಡಗರ, ಬಾಬಾಸಾಹೇಬ ಗುಡಿಮನಿ, ಅಜೀತ ಸಣ್ಣಕ್ಕಿ, ರಂಜೀತ ಕಾರಣಿಕ, ಲೋಹಿತ ಶಿರೋಳ, ಗುತ್ತಿಗೆದಾರ ಸಂಗ್ರಾಮ ಪೂಜಾರಿ, ನಿಹಾಲ ಮಾಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.