
ಚಿಕ್ಕೋಡಿ: ಉಪ ವಿಭಾಗ ವ್ಯಾಪ್ತಿಯ ಚಿಕ್ಕೋಡಿ ಸೇರಿದಂತೆ ಹಲವು ಕಡೆಗೆ ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆ, ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿರುವ ರಸ್ತೆಗಳಲ್ಲಿ ರಸ್ತೆ ವಿಭಜಕಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಹಲವು ಕಡೆ ಇವು ಅಪಾಯಕ್ಕೆ ಆಹ್ವಾನ ನೀಡುವಂತಿವೆ. ಅದರಲ್ಲೂ ಚಿಕ್ಕೋಡಿ ಪಟ್ಟಣದಲ್ಲಿ ಪದೇ ಪದೇ ವಾಹನ ಅಪಘಾತಗಳಿಗೆ ಕಾರಣವಾಗಿದೆ.
ಅದರಲ್ಲೂ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲ್ಲೂಕು ವ್ಯಾಪ್ತಿಯಲ್ಲಿ ಹಲವು ಕಡೆಗೆ ಇಕ್ಕಟ್ಟಾಗಿರುವ ರಸ್ತೆಗಳಲ್ಲಿ, ಅನಾವಶ್ಯಕ ಸ್ಥಳಗಳಲ್ಲಿ ಡಿವೈಡರ್‌ಗಳನ್ನು ನಿರ್ಮಿಸಲಾಗಿದೆ. ಹೀಗೆ ಅಳವಡಿಸಿದ ಸ್ಥಳದಲ್ಲಿ ಸೂಚನಾ ಫಲಕಗಳಾಗಲೀ, ರೇಡೀಯಂ ಸ್ಟಿಕ್ಕರ್‌ಗಳನ್ನಾಗಲೀ, ಬೆಳಕಿನ ವ್ಯವಸ್ಥೆಯಾಗಲೀ ಇಲ್ಲ. ಹೀಗಾಗಿ ಸಾಕಷ್ಟು ಕಡಗೆ ರಾತ್ರಿ ವೇಳೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ.
ಕೆಲವು ದಿನಗಳ ಹಿಂದಷ್ಟೇ ಸದಲಗಾ ಪಟ್ಟಣದಲ್ಲಿ ಪೊಲೀಸ್ ಠಾಣೆ ಎದುರಿನಲ್ಲಿರುವ ಬೃಹತ್ ಸ್ವಾಗತ ಕಮಾನಿನ ಕಂಬಕ್ಕೆ ಲಾರಿಯೊಂದು ಡಿಕ್ಕಿ ಹೊಡೆದಿದ್ದರಿಂದ ಲಾರಿ ಚಾಲಕ ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ. ಅಷ್ಟೇ ಅಲ್ಲದೇ, ನಿಪ್ಪಾಣಿ ತಾಲ್ಲೂಕಿನ ಶಿರದವಾಡ ಗ್ರಾಮದಲ್ಲಿ ಯಾವುದೇ ಪ್ರತಿಫಲನಗಳು ಇಲ್ಲದ ರಸ್ತೆ ವಿಭಜಕದ ನಡುವೆಯೇ ಲಾರಿಯೊಂದು ತೂರಿ ಹೋಗಿ ಸಿಕ್ಕಿಹಾಕಿಕೊಂಡಿತ್ತು. ಹೀಗೆ ಪ್ರತಿ ದಿನ ಒಂದಿಲ್ಲೊಂದು ಅವಾಂತರಗಳು ಡಿವೈಡರ್‌ಗಳಿಂದ ಸಂಭವಿಸುತ್ತಲೇ ಇವೆ.
ರಸ್ತೆ ವಿಭಜಕಗಳನ್ನು ನಿರ್ಮಾಣ ಮಾಡಲಾಗಿದ್ದರೂ ಸೂಚನಾ ಫಲಕ ಹಾಗೂ ರೇಡಿಯಂ ಇಲ್ಲದ್ದರಿಂದ ಕಡಿಮೆ ಗೋಚರತೆಯ ಸಮಯದಲ್ಲಿ ಹಾಗೂ ರಾತ್ರಿ ವೇಳೆಯಲ್ಲಿ ವಾಹನ ಸವಾರರಿಗೆ ತೊಂದರೆಯನ್ನುಂಟು ಮಾಡುತ್ತಿವೆ. ಮಳೆಗಾಲದಲ್ಲಿಯಂತೂ ಅಪಾಯದ ತೀವ್ರತೆಯು ಹೆಚ್ಚುತ್ತದೆ. ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವಿಕೆ ಪ್ರಾರಂಭಿಸಿದ ನಂತರವಂತೂ ಕಬ್ಬು ಸಾಗಾಟ ಮಾಡುವ ಟ್ರ್ಯಾಕ್ಟರ್, ಲಾರಿಗಳ ಚಾಲಕರು ಅನುಭವಿಸುವ ತೊಂದರೆಯಂತೂ ದೇವರಿಗೇ ಪ್ರೀತಿ ಎಂಬಂತಿರುತ್ತದೆ.
ಬೆಳಕಿನ ಕೊರತೆ ಕಾರಣ ಮಳೆಗಾಲದ ಸಂದರ್ಭದಲ್ಲಿ ರಸ್ತೆ ವಿಭಜಕಗಳು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ರಾತ್ರಿ ವೇಳೆ ವಿಭಜಕ ಎಲ್ಲಿದೆ ಎಂಬುವುದುನ್ನು ಗುರುತಿಸುವುದು ಚಾಲಕರಿಗೆ ಕಷ್ಟವಾಗುತ್ತದೆ. ಡಿವೈಡರ್ ಇರುವ ಕುರಿತು ಎಲ್ಲಿಯೂ ಕೂಡ ಸೂಚನಾ ಫಲಕಗಳು ಕಾಣುವುದೇ ಇಲ್ಲ. ಜನಪ್ರತಿನಿಧಿಗಳಂತೂ ಸರ್ಕಾರದಿಂದ ಅನುದಾನ ತಂದು ರಸ್ತೆ ನಿರ್ಮಾಣ ಮಾಡಿದರೆ ಮುಗೀತು ಅತ್ತ ಕಡೆಗೆ ಕಣ್ಣು ಹಾಯಿಸುವುದೇ ಇಲ್ಲ. ಅಧಿಕಾರಿಗಳು ಕೂಡ ರಸ್ತೆ ನಿರ್ಮಾಣ ಮಾಡುವಲ್ಲಿ ತೋರುವ ಆಸಕ್ತಿಯನ್ನು, ಸುರಕ್ಷತಾ ನಿಯಮಗಳನ್ನು ಅನುಷ್ಠಾನಗೊಳಿಸುವ ಗೋಜಿಗೆ ಹೋಗುವುದಿಲ್ಲ. ಚಿಕ್ಕೋಡಿ ಸಂಚಾರಿ ಪೊಲೀಸ್ ಠಾಣೆ ಸೇರಿದಂತೆ ಯಾವೊಂದು ಪೊಲೀಸ್ ಠಾಣೆಗಳು ಸಂಚಾರ ನಿಯಮ ಜಾಗೃತಿಗೆ ಒತ್ತು ನೀಡಿದ್ದು ಕಂಡು ಬರುತ್ತಿಲ್ಲ.
ಕೆಲವೊಂದು ಕಡೆಗಂತೂ ಎದುರು ಬದುರಿನಲ್ಲಿ ಎರಡು ವಾಹನಗಳು ಹಾದು ಹೋಗಲು ಸ್ಥಳಾವಕಾಶ ಇಲ್ಲದಿದ್ದರೂ ಡಿವೈಡರ್ ನಿರ್ಮಾಣ ಮಾಡುವ ಫ್ಯಾಷನ್ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲ್ಲೂಕು ವ್ಯಾಪ್ತಿಯಲ್ಲಿ ಕಾಣಬಹುದಾಗಿದೆ. ಚಿಕ್ಕದಾಗಿರುವ ರಸ್ತೆಗಳಲ್ಲಿ ಡಿವೈಡರ್ ನಿರ್ಮಾಣ ಮಾಡುವುದರಿಂದ ಅಪಘಾತಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತಿವೆ. ಹೀಗಾಗಿ ಅಪಘಾತಗಳನ್ನು ತಡೆಯಬೇಕಿರುವ ಡಿವೈಡರ್ ಗಳು ಅನಾಹುತಗಳಿಗೆ ಕಾರಣವಾಗುತ್ತಿವೆ.
ರಸ್ತೆ ವಿಭಜಕಗಳನ್ನು ಸರಿಯಾಗಿ ನಿರ್ಮಾಣ ಮಾಡದ್ದರಿಂದ ಚಾಲಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಸಂಬಂಧಿಸಿದವರು ಡಿವೈಡರ್‌ಗಳನ್ನು ವೈಜ್ಞಾನಿಕವಾಗಿ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು–ಅಭಿಲಾಷ್ ಕದಂ ಟ್ರ್ಯಾಕ್ಟರ್ ಚಾಲಕ
ಕಬ್ಬು ಸಾಗಾಟ ಮಾಡುವ ಸಂದರ್ಭದಲ್ಲಿ ಸಮರ್ಪಕವಾಗಿಲ್ಲದ ಡಿವೈಡರ್‌ಗಳಿಂದಾಗಿ ಅಪಘಾತಗಳು ಹೆಚ್ಚು ಸಂಭವಿಸುತ್ತಿವೆ. ಸೂಚನಾ ಫಲಕಗಳನ್ನು ಅಳವಿಡಿಸಿದಲ್ಲಿ ಇಂತಹ ಅಪಘಾತಗಳನ್ನು ತಡೆಯಬಹುದಾಗಿದೆ–ಮಂಜುನಾಥ ಪರಗೌಡ ರೈತ ಮುಖಂಡ ಕೇರೂರ
ಸ್ಥಳೀಯ ಸಂಸ್ಥೆಗಳು ಪೊಲೀಸ್ ಇಲಾಖೆ ಸಂಚಾರ ಪೊಲೀಸರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜೊತೆಗೂಡಿ ರಸ್ತೆ ವಿಭಜಕಗಳನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಬೇಕು–ಸುಮಾ ಕುಲಕರ್ಣಿ ಬೆಳಗಾವಿ
ಅನವಶ್ಯಕ ಡಿವೈಡರ್‌ಗಳನ್ನು ತೆರವುಗೊಳಿಸಿ ರಸ್ತೆಗಳನ್ನು ಅಗಲೀಕರಣಗೊಳಿಸಬೇಕು. ಇನ್ನು ಕೆಲವು ಕಡೆಗೆ ರಸ್ತೆ ವಿಭಜಕ ಅವಶ್ಯಕತೆ ಇದ್ದರೂ ರಸ್ತೆ ವಿಭಜಕಗಳು ಇಲ್ಲದಿರುವುದು ಅಪಘಾತಗಳಿಗೆ ಕಾರಣವಾಗುತ್ತಿವೆ–ರೋಹಿಣಿ ದೀಕ್ಷಿತ ಸಾಮಾಜಿಕ ಕಾರ್ಯಕರ್ತೆ ಚಿಕ್ಕೋಡಿ
ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಇರುವ ಅವೈಜ್ಞಾನಿಕ ಡಿವೈಡರ್‌ಗಳಲ್ಲಿ ಸುರಕ್ಷತಾ ನಿಯಮಗಳನ್ನು ಬರೆಸಬೇಕು. ರೇಡಿಯಂ ಅಳವಡಿಸಬೇಕು. ಹಾಗಾದಲ್ಲಿ ಮಾತ್ರ ಅಪಘಾತಗಳ ಸಂಖ್ಯೆ ಕಡಿಮೆ ಮಾಡಬಹುದಾಗಿದೆ–ಚಂದ್ರಕಾಂತ ಹುಕ್ಕೇರಿ ಸಾಮಾಜಿಕ ಕಾರ್ಯಕರ್ತ ಚಿಕ್ಕೋಡಿ
ಬೆಳಗಾವಿ ನಗರ ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾ ಸದಲಗಾ ನಿಪ್ಪಾಣಿ ತಾಲ್ಲೂಕಿನ ಬೋರಗಾಂವ ಬೇಡಕಿಹಾಳ ರಾಯಬಾಗ ತಾಲ್ಲೂಕಿನ ಕುಡಚಿ ಹಾರೂಗೇರಿ ಅಥಣಿ ತಾಲ್ಲೂಕಿನ ತೆಲಸಂಗ ಸತ್ತಿ ಕಾಗವಾಡ ತಾಲ್ಲೂಕಿನ ಉಗಾರ ಐನಾಪೂರ ಮುಂತಾದ ಪಟ್ಟಣಗಳಲ್ಲಿ ರಸ್ತೆ ವಿಭಜಕಗಳನ್ನು ನಿರ್ಮಿಸಲಾಗಿದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿವೆ. ರಸ್ತೆ ವಿಭಜಕಗಳನ್ನು ಸರಿಯಾಗಿ ನಿರ್ಮಿಸಿಲ್ಲದ್ದರಿಂದ ಅಪಘಾತಗಳು ಸಂಭವಿಸುತ್ತಿರುವುದಾಗಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ ಎಂಬ ಆರೋಪ ಸಾರ್ವಜನಿಕರದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.