ಬೆಳಗಾವಿ: ‘ಆಧುನಿಕ ಯುಗದಲ್ಲಿ ಮಕ್ಕಳು ಯಂತ್ರಗಳಾಗುತ್ತಿದ್ದಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ಕೇವಲ ಅಂಕಗಳಿಕೆಗೆ ಸೀಮಿತಗೊಳಿಸದೇ, ಸಾಹಿತ್ಯಾಸಕ್ತರನ್ನಾಗಿ ಬೆಳೆಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕುಮಾರ ಗಂಧರ್ವ ಮಂದಿರದಲ್ಲಿ ಶನಿವಾರ ನಡೆದ ಜಿಲ್ಲಾ ಪ್ರಥಮ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
‘ಮಕ್ಕಳ ಅಭಿವೃದ್ಧಿಗಾಗಿ ನನ್ನ ಇಲಾಖೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳಿವೆ. ಇದರ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಮುಂದಿನ ಸಮ್ಮೇಳನಕ್ಕೆ ನನ್ನ ಇಲಾಖೆಯಿಂದ ಸಂಪೂರ್ಣ ಬೆಂಬಲ ನೀಡುತ್ತೇನೆ. ಇದು ಕೇವಲ ಮಕ್ಕಳ ಸಾಹಿತಿ, ಹಿರಿಯ ಸಾಹಿತಿಗಳಿಗೆ ಸೀಮಿತವಾಗದೇ, ಬೆಳಗಾವಿ ಜಿಲ್ಲೆಯ ಪ್ರತಿಯೊಬ್ಬ ಶಾಲಾ ಮಕ್ಕಳಿಗೂ ತಲುಪುವಂತಾಗಬೇಕು’ ಎಂದರು.
‘ಮಕ್ಕಳಲ್ಲಿ ನಮ್ಮ ಅಚಾರ, ವಿಚಾರಗಳು ಹೆಚ್ಚಾಗಬೇಕು. ಜೊತೆಗೆ ಮತ್ತೊಬ್ಬರಿಗೆ ಮುಟ್ಟಬೇಕು. ನಾಡಿನಲ್ಲಿ ಮಕ್ಕಳ ಪ್ರತಿಭೆಗೆ ಕೊರತೆಯಿಲ್ಲ. ಮಕ್ಕಳು ಸಾಹಿತ್ಯಾಭಿರುಚಿ ಬೆಳೆಸಿಕೊಂಡರೆ ಮುಂದಿನ ದಿನಗಳಲ್ಲಿ ನಾಡಿನ ಹೆಮ್ಮೆಯ ಸಾಹಿತಿಗಳಾಗುವುದರಲ್ಲಿ ಎರಡು ಮಾತಿಲ್ಲ. ಈ ಸಮ್ಮೇಳನ ಮಕ್ಕಳಲ್ಲಿ ಚೈತನ್ಯ ತುಂಬಲಿ’ ಎಂದು ಸಚಿವೆ ಹೇಳಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಾರಂಜಿ ಮಠದ ಗುರುಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಸ್.ಎಂ. ಶಿರೂರ ಹಾಗೂ ಲಾವಣ್ಯ ಎಂ. ಅಂಗಡಿ ಅವರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು. ಮಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮ ಮಾ. ನಿಲಜಗಿ, ಉಪಾಧ್ಯಕ್ಷ ಪ್ರಕಾಶ ಅ. ಹೊಸಮನಿ, ಸಂಘಟನಾ ಕಾರ್ಯದರ್ಶಿ ಎಂ.ವೈ. ಮೆಣಸಿನಕಾಯಿ, ಬೆಳಗಾವಿ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ಸಕ್ರೆನ್ನವರ, ಹುಕ್ಕೇರಿ ತಾಲ್ಲೂಕು ಕಸಾಪ ಅಧ್ಯಕ್ಷ ಪ್ರಕಾಶ ಅವಲಕ್ಕಿ, ಚ.ನಂ.ಅಶೋಕ, ಮಕ್ಕಳ ಸಾಹಿತಿ ಹನುಮಂತ ನಾಗಪ್ಪಗೋಳ, ಬಸವರಾಜ ಗಾರ್ಗಿ, ಪ್ರೊ.ಜಯಾನಂದ ಮಾದರ್, ಲಕ್ಷ್ಮೀ ಪಾಟೀಲ ಹಾಗೂ ಮಸಾಪ ಪದಾಧಿಕಾರಿಗಳು ಇದ್ದರು.
ಟಿವಿ ಮೊಬೈಲ್ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದು ಉತ್ತಮ ಅಚಾರ– ವಿಚಾರಗಳನ್ನು ಬೆಳೆಸಿಕೊಂಡರೆ ಮಕ್ಕಳು ನಾಡಿನ ಉತ್ತಮ ಪ್ರಜೆಗಳಾಗಬಹುದುಲಕ್ಷ್ಮೀ ಹೆಬ್ಬಾಳಕರ ಸಚಿವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.