ADVERTISEMENT

ಶಾಲಾ–ಕಾಲೇಜುಗಳಲ್ಲಿ ತರಗತಿ ಆರಭ; ಮಕ್ಕಳು, ವಿದ್ಯಾರ್ಥಿಗಳ ಕಲರವ

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 13:52 IST
Last Updated 1 ಜನವರಿ 2021, 13:52 IST
ಬೆಳಗಾವಿಯ ಮಹಿಳಾ ವಿದ್ಯಾಲಯದಲ್ಲಿ ಮಕ್ಕಳನ್ನು ಶಿಕ್ಷಕರು ಗುಲಾಬಿ ನೀಡಿ ಸ್ವಾಗತಿಸಿದರುಪ್ರಜಾವಾಣಿ ಚಿತ್ರ
ಬೆಳಗಾವಿಯ ಮಹಿಳಾ ವಿದ್ಯಾಲಯದಲ್ಲಿ ಮಕ್ಕಳನ್ನು ಶಿಕ್ಷಕರು ಗುಲಾಬಿ ನೀಡಿ ಸ್ವಾಗತಿಸಿದರುಪ್ರಜಾವಾಣಿ ಚಿತ್ರ   

ಬೆಳಗಾವಿ: ಕೋವಿಡ್–19 ಎರಡನೇ ಅಲೆಯ ಭೀತಿಯ ನಡುವೆಯೂ, ಜಿಲ್ಲೆಯಾದ್ಯಂತ ಶಾಲೆಗಳು ಮತ್ತು ‍ಪಿಯು ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಂಡಿದ್ದು ವಿದ್ಯಾರ್ಥಿಗಳ ಕಲರವ ಕಂಡುಬಂತು.

ಕೋವಿಡ್–19 ಪರಿಸ್ಥಿತಿಯ ಕಾರಣದಿಂದ 9 ತಿಂಗಳಿಂದ ಮನೆಗಳಲ್ಲಿದ್ದ ಹಾಗೂ ಆನ್‌ಲೈನ್‌ ತರಗತಿಗಳಲ್ಲಿ ಭಾಗವಹಿಸುತ್ತಿದ್ದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಲ್ಲಿ ಹಲವರು ಶುಕ್ರವಾರ ಆಫ್‌ಲೈನ್‌ ತರಗತಿಗಳಿಗೆ (ನೇರವಾಗಿ) ಹಾಜರಾದರು. ಉತ್ಸಾಹದಿಂದ ಬಂದ ಅವರನ್ನು ಶಿಕ್ಷಕರು, ಉಪನ್ಯಾಸಕರು ಮತ್ತು ಸಿಬ್ಬಂದಿ ಗುಲಾಬಿ ನೀಡಿ, ಪುಷ್ಪವೃಷ್ಟಿ ಮಾಡಿ ಬರಮಾಡಿಕೊಂಡರು.

ಶಾಲೆಗಳಲ್ಲಿ ತರಗತಿಗಳ ಪುನರಾರಂಭದ ಹಿನ್ನೆಲೆಯಲ್ಲಿ ಶಾಲಾ–ಕಾಲೇಜುಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಎಲ್ಲರೂ ಮಾಸ್ಕ್‌ ಧರಿಸಿ, ಸುರಕ್ಷಿತ ಅಂತರ ಕಾಯ್ದುಕೊಂಡು ತರಗತಿಗೆ ಹಾಜರಾದರು. ಒಂದು ಕೊಠಡಿಯಲ್ಲಿ 15 ಮಕ್ಕಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. 6ರಿಂದ 9ನೇ ತರಗತಿ ಮಕ್ಕಳಿಗೆ ‘ವಿದ್ಯಾಗಮ’ ಚಟುವಟಿಕೆಗಳಲ್ಲಿ ಶಾಲೆಗಳ ಅವರಣದಲ್ಲಿ ನಡೆಸಲಾಯಿತು. ಕೆಲವು ಶಾಲೆಗಳಲ್ಲಿ ಮಕ್ಕಳು ಫೇಸ್‌ಶೀಲ್ಡ್ ಧರಿಸಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ADVERTISEMENT

ಶಿಕ್ಷಕರು ಮತ್ತು ಸಿಬ್ಬಂದಿ ಎಲ್ಲರಿಗೂ ಸ್ಯಾನಿಟೈಸರ್ ನೀಡಿ, ದೇಹದ ಉಷ್ಣತೆ ತಪಾಸಿಸಿ ಪ್ರವೇಶ ನೀಡಲಾಯಿತು. ಕೆಲವು ವಿದ್ಯಾರ್ಥಿಗಳು ದ್ವಾರದಲ್ಲಿ ನಮಸ್ಕಾರ ಮಾಡಿ, ಪ್ರವೇಶಿಸಿದ್ದು ವಿಶೇಷವಾಗಿತ್ತು.

ಬೆಳಿಗ್ಗೆ 6ನೇ ತರಗತಿಯವರಿಗೆ ‘ವಿದ್ಯಾಗಮ’ ಹಾಗೂ ಎಸ್ಸೆಸ್ಸೆಲ್ಸಿಯವರಿಗೆ ಭೌತಿಕ ತರಗತಿಗಳು ಮತ್ತು ಮಧ್ಯಾಹ್ನ 8 ಹಾಗೂ 9ನೇ ತರಗತಿಯವರಿಗೆ ‘ವಿದ್ಯಾಗಮ’ ಚಟುವಟಿಕೆಗಳು ನಡೆದವು.

ಸವದತ್ತಿ ತಾಲ್ಲೂಕಿನ ಗುರ್ಲಹೊಸೂರು ಸೇರಿದಂತೆ ವಿವಿಧ ಶಾಲೆಗಳಿಗೆ ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಕೋವಿಡ್ ನಿಯಮ ‍ಪಾಲಿಸುವ ಮೂಲಕ ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚಿಸಿದರು.

‘ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಯೆ ವ್ಯಕ್ತವಾಗಿದೆ. ಉತ್ಸಾಹದಿಂದ ಅವರು ಹಾಜರಾಗಿದ್ದರು. ಶಾಲೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಎಂ.ಕೆ. ಹುಬ್ಬಳ್ಳಿ ಶಾಲೆಯ ಶಿಕ್ಷಕಿ ಶ್ರೀಮತಿ ಹೊನ್ನಾಳಿ ಎಲ್ಲ ಮಕ್ಕಳಿಗೂ ಫೇಸ್‌ಶೀಲ್ಡ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ತಪರಿ ಅವರು ಥರ್ಮಲ್‌ ಸ್ಕಾನರ್‌ ಕೊಡುಗೆಯಾಗಿ ಕೊಟ್ಟಿದ್ದು, ಅವರನ್ನು ಅಭಿನಂದಿಸಲಾಯಿತು’ ಎಂದು ಡಿಡಿಪಿಐ ಆನಂದ ಪುಂಡಲೀಕ ‘ಪ್ರಜಾವಾಣಿ’ಗೆ ತಿಳಿಸಿದರು.

‘6ನೇ ತರಗತಿಗೆ ದಾಖಲಾಗಿರುವ 38,357ರಲ್ಲಿ 19,992 ಮಕ್ಕಳು ಅಂದರೆ ಶೇ. 51.88ರಷ್ಟ ಮಂದಿ ಹಾಜರಾಗಿದ್ದರು. ಅಂತೆಯೇ, ಎಸ್ಸೆಸ್ಸೆಲ್ಸಿಗೆ ದಾಖಲಾಗಿರುವ 35,229 ಮಕ್ಕಳಲ್ಲಿ 22,671 ಮಂದಿ ಅಂದರೆ ಶೇ 64.26ರಷ್ಟು ಮಕ್ಕಳು ಹಾಜರಾದರು. ಬಾಲಕಿಯರ ಸಂಖ್ಯೆ ಹೆಚ್ಚಿತ್ತು. ಕ್ರಮೇಣ ಮಕ್ಕಳ ಹಾಜರಾತಿ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.