ADVERTISEMENT

ಗ್ಯಾರಂಟಿಗಳಿಂದ ರಾಜ್ಯದ ಜಿಡಿಪಿ ಹೆಚ್ಚಳ: ಸಿದ್ದರಾಮಯ್ಯ

ಬಾವುರಾವ್ ದೇಶಪಾಂಡೆ ಪಶು ವೈದ್ಯಕೀಯ ಮಹಾವಿದ್ಯಾಲಯ‌, ಬಸವ ಪ್ರತಿಮೆ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2023, 12:55 IST
Last Updated 11 ಆಗಸ್ಟ್ 2023, 12:55 IST
ಅಥಣಿಯಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವೇಶ್ವರರ ಅಶ್ವಾರೂಢ ಪ್ರತಿಮೆ ಉದ್ಘಾಟಿಸಿ ಮಾತನಾಡಿದರು. ಶಾಸಕರಾದ ರಾಜು ಕಾಗೆ, ಲಕ್ಷ್ಮಣ ಸವದಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಪ್ರಭುಚನ್ನಬಸವ ಸ್ವಾಮೀಜಿ, ಡಿಸಿಎಂ ಡಿ.ಕೆ.ಶಿವಕುಮಾರ, ಶಿವಬಸವ ಸ್ವಾಮೀಜಿ, ಮರಳುಸಿದ್ಧ ಸ್ವಾಮೀಜಿ ಇದ್ದಾರೆ
ಅಥಣಿಯಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವೇಶ್ವರರ ಅಶ್ವಾರೂಢ ಪ್ರತಿಮೆ ಉದ್ಘಾಟಿಸಿ ಮಾತನಾಡಿದರು. ಶಾಸಕರಾದ ರಾಜು ಕಾಗೆ, ಲಕ್ಷ್ಮಣ ಸವದಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಪ್ರಭುಚನ್ನಬಸವ ಸ್ವಾಮೀಜಿ, ಡಿಸಿಎಂ ಡಿ.ಕೆ.ಶಿವಕುಮಾರ, ಶಿವಬಸವ ಸ್ವಾಮೀಜಿ, ಮರಳುಸಿದ್ಧ ಸ್ವಾಮೀಜಿ ಇದ್ದಾರೆ   

ಕೊಕಟನೂರ (ಬೆಳಗಾವಿ ಜಿಲ್ಲೆ): ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ಪ್ರತಿ ಕುಟುಂಬಕ್ಕೂ ಪ್ರತಿ ತಿಂಗಳು ₹5,000 ಹಣ ಸಿಗಲಿದೆ. ಜನರ ಕೈಯಲ್ಲಿ ದುಡ್ಡು ಇದ್ದರೆ ಆರ್ಥಿಕ ಚಟುವಟಿಕೆ ನಡೆಸುತ್ತಾರೆ. ಇದರಿಂದ ರಾಜ್ಯದ ಜಿಡಿಪಿ ಹೆಚ್ಚಳವಾಗಲಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಅಥಣಿ ತಾಲ್ಲೂಕಿನ ಕೊಕಟನೂರಿನಲ್ಲಿ ಶುಕ್ರವಾರ ಬಾವುರಾವ್ ದೇಶಪಾಂಡೆ ಪಶು ವೈದ್ಯಕೀಯ ಮಹಾವಿದ್ಯಾಲಯ ಲೋಕಾರ್ಪಣೆ ಹಾಗೂ ₹260 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

‘ರೈತರು, ಬಡವರು, ಮಹಿಳೆಯರು, ಕಾರ್ಮಿಕರು, ಹಿಂದುಳಿದ ವರ್ಗಗಳ ಜನ ಆರ್ಥಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕಿದೆ. ಅದಕ್ಕೆ ಗ್ಯಾರಂಟಿ ಯೋಜನೆಗಳು ದಾರಿ ಮಾಡಿಕೊಟ್ಟಿವೆ. ಈಗಾಗಲೇ ಮೂರು ಗ್ಯಾರಂಟಿಗಳನ್ನು ಜಾರಿ ಮಾಡಿದ್ದು, ಡಿಸೆಂಬರ್ ಒಳಗೆ ಉಳಿದವನ್ನೂ ಈಡೇರಿಸುತ್ತೇವೆ’ ಎಂದರು.

ADVERTISEMENT

‘ಶಕ್ತಿ ಯೋಜನೆಯಡಿ ಈವರೆಗೆ 36 ಕೋಟಿ ಮಹಿಳೆಯರು ಬಸ್ಸುಗಳಲ್ಲಿ ಪ್ರಯಾಣಿಸಿದ್ದಾರೆ. ಇದರಿಂದ ಸರ್ಕಾರದ‌ ಆದಾಯ ಕೂಡ ಹೆಚ್ಚಾಗಲಿದೆ. ಗೃಹಲಕ್ಷ್ಮೀ ಯೋಜನೆ ಅಡಿ 1.30 ಕೋಟಿಗೂ ಅಧಿಕ ಕುಟುಂಬಗಳಿಗೆ ಪ್ರತಿ ತಿಂಗಳು ₹2,000 ಸಿಗಲಿದೆ. ದೇಶದಲ್ಲೇ ಅಪರೂಪದ ಯೋಜನೆ ಇದು.‌ ವರ್ಷಕ್ಕೆ₹ 35 ಸಾವಿರ ಕೋಟಿಯನ್ನು ಇದಕ್ಕೆ ವಿನಿಯೋಗ ಮಾಡಲಾಗುವುದು’ ಎಂದರು.

‘ನಮ್ಮದು ಬಸವಾದಿ ಶರಣರ ಅನುಯಾಯಿ ಸರ್ಕಾರ. ಶರಣರು ನುಡಿದಂತೆ ನಡೆದರು. ನಾವೂ ನುಡಿದಂತೆ ನಡೆದಿದ್ದೇವೆ. ಶರಣರು ಅಸಮಾನತೆ, ಕಂದಾಚಾರ, ಭ್ರಷ್ಟಾಚಾರದ ವಿರುದ್ಧ ಹೊರಟವರು. ನಮ್ಮ ಸರ್ಕಾರವೂ ಅದನ್ನೇ ಮಾಡುತ್ತಿದೆ’ ಎಂದು ಹೇಳಿದರು.

‘ರಾಜ್ಯವು 1.29 ಕೋಟಿ ಪಶು ಸಂಪತ್ತು ಹೊಂದಿದೆ. ಹಾಲು ಉತ್ಪಾದನೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಪಶು ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಯಿಂದ ಜಾನುವಾರುಗಳ ಆರೋಗ್ಯ ರಕ್ಷಣೆ, ಕೃಷಿ ಅಭಿವೃದ್ಧಿ ಹಾಗೂ ರೈತರ ಮಕ್ಕಳ ಭವಿಷ್ಯ ಸುಧಾರಣೆಯಾಗಲಿದೆ' ಎಂದೂ ಅವರು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಪಶುಸಂಗೋಪನೆ ಕೆ.ವೆಂಕಟೇಶ್, ಅಥಣಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿದರು. ವಿವಿಧ ಖಾತೆಗಳ ಸಚಿವರು, ಶಾಸಕರು ಇದ್ದರು.

ಇದಕ್ಕೂ ಮುನ್ನ ಅಥಣಿ ಪಟ್ಟಣದಲ್ಲಿ ನಿರ್ಮಿಸಿದ ಬಸವೇಶ್ವರರ ಅಶ್ವಾರೂಢ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.