ADVERTISEMENT

ಉಪ ಚುನಾವಣೆ: 71 ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 14:02 IST
Last Updated 28 ನವೆಂಬರ್ 2019, 14:02 IST

ಬೆಳಗಾವಿ: ‘ಉಪ ಚುನಾವಣೆ ನಡೆಯುತ್ತಿರುವ ಜಿಲ್ಲೆಯ 3 ಮತಕ್ಷೇತ್ರಗಳಲ್ಲಿ ಮಾದರಿ ನೀತಿಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಈವರೆಗೆ 71 ಪ್ರಕರಣಗಳನ್ನು ದಾಖಲಿಸಲಾಗಿದೆ. ₹ 3.23 ಲಕ್ಷ ನಗದು ಸೇರಿದಂತೆ ಅಕ್ರಮ ಮದ್ಯ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ ಒಟ್ಟು ₹ 3.23 ಲಕ್ಷ ನಗದು, ₹ 5.26 ಲಕ್ಷ ಮೌಲ್ಯದ 1,371.99 ಲೀಟರ್‌ ಮದ್ಯ ಹಾಗೂ ₹ 4.04 ಲಕ್ಷ ಮೌಲ್ಯದ ಎಂಟು ಬೈಕ್ ಹಾಗೂ ಒಂದು ಸರಕು ಸಾಗಾಣಿಕೆ ವಾಹನ ವಶಪಡಿಸಿಕೊಳ್ಳಲಾಗಿದೆ. ಕಾಗವಾಡ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಚಿಹ್ನೆ ಹೊಂದಿರುವ 9,600 ಚಿಹ್ನೆ ಕ್ಯಾಪ್‌ಗಳು (ಟೋಪಿ) ಹಾಗೂ 22,500 ಶಲ್ಯಗಳನ್ನು ಕೂಡ ಮಾದರಿ ನೀತಿಸಂಹಿತೆ ತಂಡಗಳು ವಶಪಡಿಸಿಕೊಂಡಿವೆ’ ಎಂದು ಮಾಹಿತಿ ನೀಡಿದ್ದಾರೆ.

‘ಎಫ್.ಎಸ್.ಟಿ, ಪೊಲೀಸ್, ಅಬಕಾರಿ ಮತ್ತು ಎಸ್.ಎಸ್.ಟಿ. ತಂಡಗಳು ಪ್ರತ್ಯೇಕವಾಗಿ ಈ ವಸ್ತುಗಳನ್ನು ವಶಪಡಿಸಿಕೊಂಡಿವೆ. ಆಯಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದು ಜಿಲ್ಲಾ ಮಾದರಿ ನೀತಿಸಂಹಿತೆ ನೋಡಲ್ ಅಧಿಕಾರಿ ಜಗದೀಶ್ ರೂಗಿ ತಿಳಿಸಿದ್ದಾರೆ.

ADVERTISEMENT

‘ನೀತಿಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಅಥಣಿ ಕ್ಷೇತ್ರದಲ್ಲಿ 20, ಕಾಗವಾಡದಲ್ಲಿ 18 ಮತ್ತು ಗೋಕಾಕದಲ್ಲಿ 33 ಸೇರಿ 71 ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.