ADVERTISEMENT

ವೀರಶೈವ ಮಹಾಸಭಾದಿಂದ ಸುರೇಶ ಅಂಗಡಿ ಅವರಿಗೆ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 15:41 IST
Last Updated 29 ಸೆಪ್ಟೆಂಬರ್ 2020, 15:41 IST
ಬೆಳಗಾವಿಯಲ್ಲಿ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಸುರೇಶ ಅಂಗಡಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿದರು
ಬೆಳಗಾವಿಯಲ್ಲಿ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಸುರೇಶ ಅಂಗಡಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿದರು   

ಬೆಳಗಾವಿ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ, ಈಚೆಗೆ ನಿಧನರಾದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.

ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ, ಅಖಿಲ ಭಾರತ ವೀರಶೈವ ಮಹಾಸಭಾ ಉಪಾಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿ, ‘ಸುರೇಶ ಅವರು ಸತ್ಯ, ಶುದ್ಧ ಮನಸ್ಸಿನಿಂದ ಸಮಾಜ ಸೇವೆ ಮಾಡಿದರು. ವೀರಶೈವ–ಲಿಂಗಾಯತ ಸಮಾಜದ ಒಗ್ಗಟ್ಟಿಗೆ ಶ್ರಮಿಸಿದರು. ವಿಶಿಷ್ಟ ಸಂಸ್ಕೃತಿ– ಸಂಪ್ರದಾಯಗಳನ್ನು ಹೊಂದಿರುವ ನಮ್ಮ ಸಮಾಜವು ಶಾಂತಿ–ಸಾಮರಸ್ಯದಿಂದ ಇರಬೇಕೆಂದು ಬಯಸಿ ಅಭಿವೃದ್ಧಿಗೆ ಶ್ರಮಿಸಿದರು. ಎಲ್ಲರನ್ನೂ ಪ್ರೇಮದಿಂದ ಕಂಡು ಬೇಡಿಕೆಗಳಿಗೆ ಸ್ಪಂದಿಸಿದರು. ಅವರನ್ನು ಕಳೆದುಕೊಂಡು ನಾಡು ಬಡವಾಗಿದೆ’ ಎಂದು ಸ್ಮರಿಸಿದರು.

ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ‘ಅಂಗಡಿ ಅವರು ಬಸವಾದಿ ಪ್ರಮಥರಂತೆ ಕಾಯಕ ಯೋಗಿಯಾಗಿದ್ದರು’ ಎಂದರು.

ADVERTISEMENT

ವಕೀಲ ಮಾರುತಿ ಝಿರಲಿ ಮಾತನಾಡಿ, ‘ಮನೆ ಗೆದ್ದು ಮಾರು ಗೆದ್ದ ಶರಣರವರು. ಸಮಾಜವನ್ನು ಕುಟುಂಬದಂತೆಯೇ ಪ್ರೀತಿಸಿದರು. ಸಮರ್ಥ ರಾಜಕಾರಣಿ ಕಳೆದುಕೊಂಡ ದುರ್ದೈವ ನಮ್ಮದಾಗಿದೆ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ, ಪತ್ರಕರ್ತ ಮುರುಗೇಶ ಶಿವಪೂಜಿ, ಸಮಾಜ ಸೇವಕ ಚಂದ್ರಶೇಖರ ಬೆಂಬಳಗಿ ಮಾತನಾಡಿದರು.

ಮುಖಂಡರಾದ ಗುರುಬಸಪ್ಪ ಚೊಣ್ಣದ, ಸೋಮಲಿಂಗ ಮಾವಿನಕಟ್ಟಿ, ರಮೇಶ ಕಳಸಣ್ಣವರ, ಪ್ರಕಾಶ ಬಾಳೆಕುಂದ್ರಿ, ಅಣ್ಣಾಸಾಹೇಬ ಕೊರಬು, ಶಿವನಗೌಡ ಪಾಟೀಲ, ಮಹೇಶ ಭಾತೆ, ಜ್ಯೋತಿ ಭಾವಿಕಟ್ಟಿ, ಪ್ರತಿಭಾ ಕಳ್ಳಿಮಠ, ಜ್ಯೋತಿ ಬಾದಾಮಿ, ಆಶಾ ಯಮಕನಮರಡಿ ಇದ್ದರು.

ಶೈಲಜಾ ಸಂಸುದ್ದಿ ಪ್ರಾರ್ಥಿಸಿದರು. ಡಾ.ಗುರುದೇವಿ ಹುಲೆಪ್ಪನವರಮಠ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.