ADVERTISEMENT

ಜನೌಷಧಿ ಕೇಂದ್ರ ಮುಚ್ಚುತ್ತಿರುವ ಕಾಂಗ್ರೆಸ್‌ ಸರ್ಕಾರ: ಜಗದೀಶ ಶೆಟ್ಟರ್‌ ಆರೋಪ

​ಪ್ರಜಾವಾಣಿ ವಾರ್ತೆ
Published 20 ಮೇ 2025, 16:09 IST
Last Updated 20 ಮೇ 2025, 16:09 IST
<div class="paragraphs"><p>ಜಗದೀಶ ಶೆಟ್ಟರ್‌</p></div>

ಜಗದೀಶ ಶೆಟ್ಟರ್‌

   

ಬೆಳಗಾವಿ: ‘ಕೈಗೆಟಕುವ ದರದಲ್ಲಿ ಸಾರ್ವಜನಿಕರಿಗೆ ಔಷಧ ಒದಗಿಸಬೇಕೆಂಬ ಆಶಯದಿಂದ ಕೇಂದ್ರ ಸರ್ಕಾರ ತೆರೆದಿದ್ದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳು ಇಂದು ರಾಜ್ಯದಲ್ಲಿ ಮುಚ್ಚುತ್ತಿರುವುದು ಕಾಂಗ್ರೆಸ್ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ’ ಎಂದು ಸಂಸದ ಜಗದೀಶ ಶೆಟ್ಟರ್‌ ಆರೋ‍‍ಪಿಸಿದ್ದಾರೆ.

ಈ ಬಗ್ಗೆ ಮಂಗಳವಾರ ಪ್ರಕಟಣೆ ನೀಡಿದ ಅವರು, ‘ಈ ಯೋಜನೆಯಡಿ ಶೇ 50ರಿಂದ 90ರಷ್ಟು ರಿಯಾಯಿತಿ ದರದಲ್ಲಿ ಬಡವರಿಗೆ ಔಷಧ ಸಿಗುತ್ತದೆ. ರಾಜ್ಯದ 31 ಜಿಲ್ಲೆಗಳಲ್ಲಿ 1,412 ಜನೌಷಧಿ ಕೇಂದ್ರದ ಮಳಿಗೆ ಇವೆ. ಈ ಪೈಕಿ ಅರ್ಧಕ್ಕಿಂತ ಹೆಚ್ಚು ಮಳಿಗೆಯಲ್ಲಿ ನಿತ್ಯ ಬಳಕೆಗೆ ಬೇಕಿರುವ ಔಷಧವೇ ಸಿಗುತ್ತಿಲ್ಲ. ಜನರ ಬೇಡಿಕೆಗೆ ತಕ್ಕಂತೆ ಸಂಬಂಧಿತ ಏಜೆನ್ಸಿಗಳಿಂದ ಔಷಧ ಪೂರೈಕೆ ಆಗುತ್ತಿಲ್ಲ’ ಎಂದು ದೂರಿದ್ದಾರೆ.

ADVERTISEMENT

‘ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧಿ ಕೇಂದ್ರ ತೆರೆಯುವುದನ್ನು ನಿರ್ಬಂಧಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿರುವುದು ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗೆ ಸಾಕ್ಷಿ. ರಾಜ್ಯದಲ್ಲಿ ಜನೌಷಧಿ ಕೇಂದ್ರ ಆರಂಭಕ್ಕೆ ಸಲ್ಲಿಕೆಯಾದ 31 ಅರ್ಜಿ ತಿರಸ್ಕರಿಸಿರುವುದು ಕೇಂದ್ರದ ಮಹತ್ವಕಾಂಕ್ಷಿ ಯೋಜನೆ ಉದ್ದೇಶ ಕುಗ್ಗಿಸುವ ಹುನ್ನಾರವಾಗಿದೆ. ಕೇಂದ್ರ ಮತ್ತು ರಾಜ್ಯದ ಆರೋಗ್ಯ ಯೋಜನೆಗಳ ಮಧ್ಯೆ ಸಮನ್ವಯ ಕೊರತೆ ಇರುವುದು ಇದರಿಂದ ಗೊತ್ತಾಗುತ್ತದೆ’ ಎಂದು ತಿಳಿಸಿದ್ದಾರೆ.

‘ಕಾಂಗ್ರೆಸ್ ಸರ್ಕಾರವು ಜನರನ್ನು ಸಂಕಷ್ಟಕ್ಕೆ ತಳ್ಳಿ, ಖಾಸಗಿ ಏಜೆನ್ಸಿಗಳ ಬಲವರ್ಧನೆಗೆ ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವರು ಈ ಯೋಜನೆ ಮೊಟಕುಗೊಳಿಸಬಾರದು’ ಎಂದು ಶೆಟ್ಟರ್‌ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.