ಬೆಳಗಾವಿ: ‘ಕಾಶ್ಮೀರದಲ್ಲಿ ಭಯೋತ್ಪಾದಕರು ಅಮಾಯಕರ ಹತ್ಯೆ ಮಾಡಿದಾಗ ಒಬ್ಬ ಪೊಲೀಸ್ ಕೂಡ ಅಲ್ಲಿರಲಿಲ್ಲ. ಕೇಂದ್ರ ಗುಪ್ತಚರ ವಿಭಾಗ ಮತ್ತು ಭದ್ರತಾ ವ್ಯವಸ್ಥೆ ಏನು ಮಾಡುತ್ತಿದೆ? ಇದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅವರ ವೈಫಲ್ಯ ಅಲ್ಲವೆ? ನಮಗೆ ರಕ್ಷಣೆ ನೀಡುವಲ್ಲಿ ವಿಫಲರಾದ ಅವರನ್ನು ನಾವು ಭಾರತೀಯರು ಪ್ರಶ್ನಿಸಬಾರದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಮತ್ತು ‘ಸಂವಿಧಾನ ರಕ್ಷಿಸಿ ದೇಶ ಉಳಿಸಿ’ ಆಂದೋಲನದ ಪ್ರಯುಕ್ತ ಎಪಿಸಿಸಿ, ಕೆಪಿಸಿಸಿ ವತಿಯಿಂದ ನಗರದಲ್ಲಿ ಸೋಮವಾರ ನಡೆದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ಭದ್ರತಾ ಲೋಪವನ್ನು ಮರೆಮಾಚಲು ಯುದ್ಧದ ಕುರಿತ ನನ್ನ ಹೇಳಿಕೆ ತಿರುಚಲಾಗಿದೆ’ ಎಂದರು.
‘ನಮ್ಮ ಪ್ರತಿಭಟನಾ ಸಮಾವೇಶಕ್ಕೇ ನುಗ್ಗಿದ ಬಿಜೆಪಿಯವರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ. ಇಂಥ ಬೆದರಿಕೆಗೆ ನಾನು ಜಗ್ಗಲ್ಲ, ಬಗ್ಗಲ್ಲ. ನಮ್ಮ ಕಾರ್ಯಕರ್ತರಿಗೂ ಶಕ್ತಿ ಇದೆ’ ಎಂದು ಬಿಜೆಪಿ ಪ್ರತಿಭಟನಕಾರರ ವಿರುದ್ಧ ಗುಡುಗಿದರು.
‘ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದನ್ನು ಮರೆಮಾಚಲು ಬಿಜೆಪಿಯವರು ಕಾಂಗ್ರೆಸ್ ವಿರುದ್ಧ ಜನಾಕ್ರೋಶ ಯಾತ್ರೆ ಮಾಡಿದರೆ, ಜನರಿಗೆ ಸತ್ಯ ತಿಳಿಸಲು ನಾವು ಪ್ರತಿಭಟನಾ ಸಮಾವೇಶ ಮಾಡಿದ್ದೇವೆ’ ಎಂದರು.
ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಎಚ್.ಸಿ.ಮಹದೇವಪ್ಪ, ಎಚ್.ಕೆ.ಪಾಟೀಲ, ಎಂ.ಬಿ.ಪಾಟೀಲ, ಕೆ.ಎಚ್.ಮುನಿಯಪ್ಪ ಮತ್ತಿತರರು ಇದ್ದರು.
ಒಂದೆಡೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಮತ್ತೊಂದೆಡೆ ಬಿಜೆಪಿ ಸರ್ಕಾರದ ಲೂಟಿ. ಎರಡರ ಮಧ್ಯೆ ಸಂಘರ್ಷ ನಡೆದಿದೆ. ಗ್ಯಾರಂಟಿಗಳು ನೆಮ್ಮದಿ ನೀಡಿದರೆ ಕೇಂದ್ರದ ನೀತಿಗಳು ಆತಂಕ ಮೂಡಿಸಿವೆ.ರಣದೀಪ್ ಸಿಂಗ್ ಸುರ್ಜೇವಾಲಾ ಪ್ರಧಾನ ಕಾರ್ಯದರ್ಶಿ ಎಐಸಿಸಿ
ಪೆಟ್ರೋಲ್ ಡೀಸೆಲ್ ಮತ್ತು ಅಡುಗೆ ಅನಿಲ ಸಿಲಿಂಡರ್‌ನ ದರ ಏರಿಕೆಯೇ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಮೂಲ. ಹೀಗಾಗಿ ಜನರ ಆಕ್ರೋಶವು ಕೇಂದ್ರ ಸರ್ಕಾರದ ವಿರುದ್ಧ ಇರಬೇಕು.ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.