ADVERTISEMENT

ಕಾಂಗ್ರೆಸ್‌ನವರಿಗೆ ಇನ್ನಾದರೂ ಬುದ್ಧಿ ಬರಲಿ: ಅಭಯ ಪಾಟೀಲ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2022, 12:49 IST
Last Updated 15 ಮಾರ್ಚ್ 2022, 12:49 IST
ಬಿಜೆಪಿ ಶಾಸಕ ಅಭಯ ಪಾಟೀಲ
ಬಿಜೆಪಿ ಶಾಸಕ ಅಭಯ ಪಾಟೀಲ    

ಬೆಳಗಾವಿ: ‘ಕಾನೂನು ಗೊತ್ತಿದ್ದರೂ ಹಿಬಾಜ್‌ ಪರವಾಗಿ ನಿಂತು ರಾಜ್ಯದಲ್ಲಿ ಅಶಾಂತಿ ನಿರ್ಮಾಣ ಮಾಡುವ ಪ್ರಯತ್ನವನ್ನು ಎಸ್‌ಎಫ್‌ಐ ಮೊದಲಾದ ವಿದ್ಯಾರ್ಥಿ ಸಂಘಟನೆಗಳ ಮೂಲಕ ಕಾಂಗ್ರೆಸ್‌ನವರು ನಡೆಸಿದ್ದರು. ಹೈಕೋರ್ಟ್‌ ತೀರ್ಪಿನ ನಂತರವಾದರೂ ಹಿಜಾಬ್‌ ಪರ ಮಾತನಾಡುವುದನ್ನು ನಿಲ್ಲಿಸಲಿ. ಆ ಪಕ್ಷದವರಿಗೆ ಇನ್ನಾದರೂ ಬುದ್ಧಿ ಬರಲಿ’ ಎಂದು ಇಲ್ಲಿನ ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ಒಂದು ಸಮಾಜವನ್ನು ಕಾನೂನಿಗೆ ವಿರುದ್ಧವಾಗಿ ಎತ್ತಿ ಕಟ್ಟಿ, ಅವರ ತಲೆಯಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದವರಿಗೆ ನ್ಯಾಯಾಲಯ ತಡೆ ನೀಡಿದೆ’ ಎಂದರು.

‘ಹಿಜಾಬ್‌ ವಿವಾದ ಪ್ರಾರಂಭವಾದ್ದರಿಂದ ಹಿಂದೂಗಳು ಮತ್ತು ಹಿಂದೂ ಸಂಘಟನೆಗಳ ಬಗ್ಗೆ ಅಪಪ್ರಚಾರವನ್ನು ಕಾಂಗ್ರೆಸ್‌ನವರು ನಡೆಸಿದ್ದರು. ಅದಕ್ಕೆ ಹೈಕೋರ್ಟ್‌ ಉತ್ತರ ಕೊಟ್ಟಿದೆ. ಹಿಜಾಬ್ ಧರಿಸಿ ಬರುವುದು ಸರಿಯಲ್ಲ ಎಂದು ಸರ್ಕಾರವೂ ಹೇಳಿತ್ತು. ಹೈಕೋರ್ಟ್‌ ತೀರ್ಪನ್ನು, ಹಿಜಾಬ್‌ ಪರ ಇರುವವರೊಂದಿಗೆ ಕಾಂಗ್ರೆಸ್‌ನವರು ಕೂಡ ಪಾಲಿಸಬೇಕು’ ಎಂದು ಕೋರಿದರು.

ADVERTISEMENT

‘ಕಾಶ್ಮೀರದಲ್ಲಿ ನಡೆದಿರುವ ನರಮೇಧ, ಕ್ರೌರ್ಯ ನೋಡಿದರೆ ಹಿಂದೂಗಳ ರಕ್ತ ಕುದಿಯುತ್ತದೆ. ಶೇ 5ರಷ್ಟನ್ನು ಮಾತ್ರ ‘ದಿ ಕಾಶ್ಮೀರ್ ಫೈಲ್ಸ್‌’ ಚಲನಚಿತ್ರದಲ್ಲಿ ತೋರಿಸಲಾಗಿದೆ. ಬಹುಸಂಖ್ಯಾತರಾದರೂ ನಮ್ಮ ಜನರಿಗೆ ಸ್ಥಾನವಿಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಿಸುವುದನ್ನು ಜಿಹಾದಿಗಳು ಮಾಡಿದ್ದಾರೆ. ಹೀಗಾಗಿ, ಪ್ರತಿ ಹಿಂದೂ ಆ ಸಿನಿಮಾ ನೋಡಬೇಕು. ನಮ್ಮ ಸಮಾಜದ ಮೇಲೆ ಏನೇನು ಅನ್ಯಾಯ– ಅತ್ಯಾಚಾರ ಮಾಡಿದ್ದಾರೆ ಎನ್ನುವುದು ಮತ್ತು ಭವಿಷ್ಯದಲ್ಲಿ ಅವರೇನು ಮಾಡುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ’ ಎಂದರು.

‘ದಕ್ಷಿಣ ಮತಕ್ಷೇತ್ರದವರಿಗಾಗಿ ‘ದಿ ಕಾಶ್ಮೀರ್ ಫೈಲ್ಸ್‌’ ಚಲನಚಿತ್ರದ 25 ಪ್ರದರ್ಶನಗಳನ್ನು ವ್ಯವಸ್ಥೆ ಮಾಡಲಿದ್ದೇನೆ. ಪ್ರತಿ ವಾರ್ಡ್‌ನಲ್ಲಿ 500–1000 ಮಂದಿಗೆ ಉಚಿತ ಪಾಸ್‌ಗಳನ್ನು ಕೊಡಲಾಗುವುದು. ಯುವಕ, ಮಹಿಳಾ ಮಂಡಳಗಳು, ಸಾಮಾಜಿಕ ಕಾರ್ಯಕರ್ತರಿಗೆ ಅವಕಾಶ ಕೊಡಲಾಗುವುದು. ಆ ಭಾಗದ ಪಾಲಿಕೆ ಸದಸ್ಯರು, ಶಕ್ತಿಕೇಂದ್ರದ ಪ್ರಮುಖರಿಗೆ ಪಾಸ್‌ ಹಂಚಿಕೆ ಜವಾಬ್ದಾರಿ ನೀಡಲಾಗುವುದು. ಪ್ರಕಾಶ್ ಚಿತ್ರಮಂದಿರದಲ್ಲಿ ಮಾರ್ಚ್‌ 18ರಿಂದ ರಾತ್ರಿ 9ರ ನಂತರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.