ADVERTISEMENT

ನೇಕಾರರನ್ನು ಕಾರ್ಮಿಕರೆಂದು ಪರಿಗಣಿಸಿ

ಸುವರ್ಣ ವಿಧಾನಸೌಧ ಬಳಿ ಸೇವಾ ಸಂಘದವರ ಧರಣಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 13:48 IST
Last Updated 13 ಡಿಸೆಂಬರ್ 2018, 13:48 IST
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನೇಕಾರ ಸಮಾಜದವರು ಗುರುವಾರ ಸುವರ್ಣ ವಿಧಾನಸೌಧ ಬಳಿ ಧರಣಿ ನಡೆಸಿದರು
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನೇಕಾರ ಸಮಾಜದವರು ಗುರುವಾರ ಸುವರ್ಣ ವಿಧಾನಸೌಧ ಬಳಿ ಧರಣಿ ನಡೆಸಿದರು   

ಬೆಳಗಾವಿ: ವೃತ್ತಿಪರ ನೇಕಾರರನ್ನು ಕಾರ್ಮಿಕರೆಂದು ಪರಿಗಣಿಸಿ, ಕಟ್ಟಡ ಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ರಾಜ್ಯ ನೇಕಾರರ ಸೇವಾ ಸಂಘದ ನೇತೃತ್ವದಲ್ಲಿ ನೇಕಾರ ಸಮಾಜದವರು ಗುರುವಾರ ತಾಲ್ಲೂಕಿನ ಸುವರ್ಣ ವಿಧಾನಸೌಧದ ಬಳಿ ಧರಣಿ ನಡೆಸಿದರು.

‘ವಿದ್ಯುತ್‌ಚಾಲಿತ ಮಗ್ಗಗಳಿಗೆ ಉಚಿತವಾಗಿ ವಿದ್ಯುತ್ ಸೌಲಭ್ಯ ಕಲ್ಪಿಸಬೇಕು ಹಾಗೂ ನೇಕಾರರ ಸಂಪೂರ್ಣ ಸಾಲ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದಲ್ಲಿ ಅಂದಾಜು 66 ಲಕ್ಷ ನೇಕಾಕರಿದ್ದಾರೆ. ಜವಳಿ ಉದ್ಯಮಕ್ಕೆ ಅಪಾರವಾದ ಕೊಡುಗೆ ನೀಡುತ್ತಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ನೇಕಾರರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಬನಹಟ್ಟಿಯಲ್ಲಿ ದಂಪತಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ನೇಕಾರರೊಬ್ಬರು ಮನೆ ಹರಾಜು ಮಾಡಿ ಬ್ಯಾಂಕ್ ಸಾಲ ಮರುಪಾವತಿ ಮಾಡಿದ್ದಾರೆ. ಇಂಥ ಉದಾಹರಣೆಗಳು ಸಾಕಷ್ಟಿವೆ. ಸರ್ಕಾರದ ಯಾವುದೇ ಸೌಲಭ್ಯಗಳು ದೊರೆಯದೇ ಇರುವುದರಿಂದ, ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ’ ಎಂದು ತಿಳಿಸಿದರು.

ADVERTISEMENT

‘55 ವರ್ಷ ವಯಸ್ಸಿನ ನೇಕಾರರಿಗೆ ₹ 5ಸಾವಿರ ಮಾಸಾಶನ ನೀಡಬೇಕು. ಸರ್ಕಾರಿ ಇಲಾಖೆಗಳವರು ನೇಕಾರರಿಂದಲೇ ನೇರವಾಗಿ ಬಟ್ಟೆಗಳನ್ನು ಖರೀದಿಸಬೇಕು. ಇದರಿಂದ ವರ್ಷಪೂರ್ತಿ ಉದ್ಯೋಗ ದೊರೆತಂತೆ ಆಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೇಕಾರರ ಅಭಿವೃದ್ಧಿಗೆಂದೇ ಪ್ರತ್ಯೇಕ ಬಜೆಟ್ ಮಂಡಿಸಬೇಕು. ಜವಳಿ ಪಾರ್ಕ್‌ಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. ನೇಕಾರರಿಗೆ ಜವಳಿ ಇಲಾಖೆಯಿಂದಲೇ ಮನೆಗಳನ್ನು ಕಟ್ಟಿಸಿಕೊಡಬೇಕು. ಖಾದಿ ಬಟ್ಟೆಗಳ ಮೇಲೆ ಶೇ 30ರಷ್ಟು ರಿಯಾಯಿತಿ ಜಾರಿಗೊಳಿಸಬೇಕು. ಪ್ರತಿ ತಿಂಗಳೂ ನೇಕಾರರ ಸಭೆ ನಡೆಸಿ, ಕುಂದುಕೊರತೆಗಳನ್ನು ಆಲಿಸಬೇಕು ಹಾಗೂ ಅವುಗಳ ಪರಿಹಾರಕ್ಕೆ ಕ್ರಮ ವಹಿಸಬೇಕು. ನೇಕಾರಿಕೆಯನ್ನು ಗೃಹ ಕೈಗಾರಿಕೆಯಾಗಿ ಪರಿಗಣಿಸಬೇಕು’ ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.