ADVERTISEMENT

ಎಲ್ಲರಿಗೂ ಸಮಾನತೆಗಾಗಿ ಹಂಬಲಿಸಿದ ಅಂಬೇಡ್ಕರ್: ಡಾ.ಎಚ್.ಬಿ. ಕೋಲಕಾರ

ಜಿಲ್ಲೆಯಾದ್ಯಂತ ಸಂವಿಧಾನ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 13:37 IST
Last Updated 26 ನವೆಂಬರ್ 2021, 13:37 IST
ಬೆಳಗಾವಿಯ ಅಂಜುಮನ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನೆಹರೂ ಯುವ ಕೇಂದ್ರದಿಂದ ಶುಕ್ರವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ರಾಣಿ ಪಾರ್ವತಿದೇವಿ ಕಾಲೇಜಿನ ಪ್ರಾಧ್ಯಾಪಕ ಡಾ.ಎಚ್.ಬಿ. ಕೋಲಕಾರ, ಅಂಜುಮನ್ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಐ. ತಿಮ್ಮಾಪುರ, ನೆಹರೂ ಯುವ ಕೇಂದ್ರದ ಅಧಿಕಾರಿ ರೋಹಿತ್ ಕಲರಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮೊದಲಾದವರು ಇದ್ದಾರೆ
ಬೆಳಗಾವಿಯ ಅಂಜುಮನ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನೆಹರೂ ಯುವ ಕೇಂದ್ರದಿಂದ ಶುಕ್ರವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ರಾಣಿ ಪಾರ್ವತಿದೇವಿ ಕಾಲೇಜಿನ ಪ್ರಾಧ್ಯಾಪಕ ಡಾ.ಎಚ್.ಬಿ. ಕೋಲಕಾರ, ಅಂಜುಮನ್ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಐ. ತಿಮ್ಮಾಪುರ, ನೆಹರೂ ಯುವ ಕೇಂದ್ರದ ಅಧಿಕಾರಿ ರೋಹಿತ್ ಕಲರಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮೊದಲಾದವರು ಇದ್ದಾರೆ   

ಬೆಳಗಾವಿ: ‘ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಎಲ್ಲರಿಗೂ ಸಮಾನತೆ ದೊರೆಯುವಂತಾಗಬೇಕು ಎಂದು ಹಂಬಲಿಸಿ ಅದಕ್ಕೆ ಪೂರಕವಾಗಿ ಸಂವಿಧಾನವನ್ನು ರಚಿಸಿದರು’ ಎಂದು ರಾಣಿ ಪಾರ್ವತಿದೇವಿ ಕಾಲೇಜಿನ ಪ್ರಾಧ್ಯಾಪಕ ಡಾ.ಎಚ್.ಬಿ. ಕೋಲಕಾರ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನೆಹರೂ ಯುವ ಕೇಂದ್ರ ಹಾಗೂ ಅಂಜುಮನ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಸಹಯೋಗದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜ್ಞಾನಸೂರ್ಯ ಅಂಬೇಡ್ಕರ್ ಭಾರತದ ಬೆಳಕು. ಸಾಮಾಜಿಕ ಸಮಾನತೆ ಇಲ್ಲದ ಸ್ವಾತಂತ್ರ್ಯ ಅರ್ಥಹೀನ ಎಂದು ಸಾಮಾಜಿಕ ಅಸಮಾನತೆಗಳಾದ ಜಾತಿ, ಧರ್ಮ, ಕೋಮು, ಲಿಂಗ, ಪಂಗಡಗಳೆಲ್ಲ ದೂರಾಗಿ ಸರ್ವರ ಏಳಿಗೆಯ ಸಮಾನ ಭಾರತ ಆಗಬೇಕು ಎಂದು ಹೋರಾಡಿದರು. ಶೋಷಿತರು, ಬಡವರು ಸೇರಿದಂತೆ ಎಲ್ಲರ ಏಳಿಗೆಗೆ ಶ್ರಮಿಸಿದರು’ ಎಂದು ಸ್ಮರಿಸಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಡಾ.ಎಚ್.ವೈ. ತಿಮ್ಮಾಪೂರ ಮಾತನಾಡಿ, ‘ಭೌದ್ಧ ಧರ್ಮದಲ್ಲಿ ಸಮಾನತೆ ಇದೆ ಎಂದು ಅಂಬೇಡ್ಕರ್‌ ಅವರು ಭೌದ್ಧ ಧರ್ಮವನ್ನು ಸ್ವೀಕರಿಸಿದರು. ಸಾಮಾಜಿಕ ಹಾಗೂ ಕೌಟುಂಬಿಕ ನ್ಯಾಯ ಒದಗಿಸುವುದಕ್ಕಾಗಿ ಸಂವಿಧಾನ ರಚಿಸಿದರು. ಮಹಿಳೆಯರು ಸೇರಿದಂತೆ ಎಲ್ಲರಿಗೂ ಸಮಾನತೆ ಒದಗಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು’ ಎಂದು ತಿಳಿಸಿದರು.

‘ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಜೀವನ ಮಟ್ಟ ಸುಧಾರಿಸಲು ಹಾಗೂ ನ್ಯಾಯ ಪಡೆಯಲು ಸಾಧ್ಯ. ನಾವು ಅಂಬೇಡ್ಕರ್ ಹಾಗೂ ಸಂವಿಧಾನವನ್ನು ಓದಬೇಕು. ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಸಂವಿಧಾನದ ಧ್ಯೇಯ ಉದ್ದೇಶಗಳನ್ನು ಪಾಲಿಸುವುದಾಗಿವಿದ್ಯಾರ್ಥಿ–ವಿದ್ಯಾರ್ಥಿನಿಯರು ಸೇರಿದಂತೆ ನೆರೆದಿದ್ದವರು ಪ್ರತಿಜ್ಞೆ ಸವೀಕರಿಸಿದರು. ಸ್ವೀಕರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮಾತನಾಡಿದರು.

ನೆಹರೂ ಯುವ ಕೇಂದ್ರದ ಅಧಿಕಾರಿ ರೋಹಿತ ಕಲಾಲ,ಭರತ ಕಲಾಚಂದ್ರ, ಸುಜಾತಾ ಮಗದುಮ, ಸುಪ್ರಿಯಾ ಕಲಾಚಂದ್ರ ಇದ್ದರು.

ಶ್ವೇತಾ ಅಗಸಿಮನಿ ಸ್ವಾಗತಿಸಿದರು. ವೈಶಾಲಿ ಬಬಲಿ ವಂದಿಸಿದರು.

‘ದೇಶದ ಪವಿತ್ರ ದಾಖಲೆ’

ಬೆಳಗಾವಿ: ಕೆಎಲ್ಇ ಸಂಸ್ಥೆಯ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ಶುಕ್ರವಾರ 72ನೇ ಸಂವಿಧಾನ ದಿನವನ್ನು ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿಜಯ ದೇವರಾಜ್ ಅರಸ್ ಮಾತನಾಡಿ, ‘ಸಂವಿಧಾನ ಕೇವಲ ರಾಜಕೀಯ ದಾಖಲೆಯಾಗಿರದೆ ದೇಶದ ಪವಿತ್ರ ದಾಖಲೆಯಾಗಿದೆ. ಮೂಲಭೂತ ರಾಜಕೀಯ ತತ್ವಗಳನ್ನು ವ್ಯಾಖ್ಯಾನಿಸುವ ಚೌಕಟ್ಟನ್ನು ರೂಪಿಸುತ್ತದೆ’ ಎಂದರು.

‘ಸರ್ಕಾರಿ ಸಂಸ್ಥೆಗಳ ರಚನೆ, ಕಾರ್ಯವಿಧಾನಗಳು, ಅಧಿಕಾರಗಳು ಮತ್ತು ಕರ್ತವ್ಯಗಳನ್ನು ಸ್ಥಾಪಿಸುತ್ತದೆ ಮತ್ತು ಮೂಲಭೂತ ಹಕ್ಕುಗಳು, ನಿರ್ದೇಶನ ತತ್ವಗಳು ಮತ್ತು ನಾಗರಿಕರ ಕರ್ತವ್ಯಗಳನ್ನು ನಿಗದಿಪಡಿಸುತ್ತದೆ’ ಎಂದು ಹೇಳಿದರು.

ಪ್ರಾಚಾರ್ಯ ಡಾ.ಬಿ. ಜಯಸಿಂಹ ಸಂವಿಧಾನದ ಪೀಠಿಕೆ ಮಂಡಿಸಿದರು.

ಪ್ರಥಮ ವರ್ಷದ ವಿದ್ಯಾರ್ಥಿನಿ ಪೂಜಾ ಅಜೂರೆ ‘ಭಾರತೀಯ ಸಂವಿಧಾನದ ಮೂಲ ಮತ್ತು ವಿಕಾಸ’ದ ಕುರಿತು ಮಾತನಾಡಿದರು.

ಪ್ರೊ.ಶ್ರೀನಿವಾಸ್ ಸಿ.ಪಾಲಕೊಂಡ ಸ್ವಾಗತಿಸಿದರು. ಮಹಾಲಕ್ಷ್ಮಿ ಕಂಬಾರರು ಪ್ರಾರ್ಥಿಸಿದರು. ಗೀತಾ ರೊಟ್ಟಿ ನಿರೂಪಿಸಿದರು. ಡಾ.ಸುಪ್ರಿಯಾ ಸ್ವಾಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.