ADVERTISEMENT

‘ಮಣ್ಣು ಮಿಶ್ರಿತ’ ನೀರು: ಅಧಿಕಾರಿಗಳ ನಿರ್ಲಕ್ಷ್ಯ, ಸಾರ್ವಜನಿಕರಿಗೆ ತೊಂದರೆ

ಎಂ.ಮಹೇಶ
Published 21 ಜುಲೈ 2019, 19:45 IST
Last Updated 21 ಜುಲೈ 2019, 19:45 IST
ಬೆಳಗಾವಿಯ ಶಾಹೂನಗರದಲ್ಲಿ ಮಣ್ಣುಮಿಶ್ರಿತ ನೀರು ಪೂರೈಸಲಾಗುತ್ತಿದೆ
ಬೆಳಗಾವಿಯ ಶಾಹೂನಗರದಲ್ಲಿ ಮಣ್ಣುಮಿಶ್ರಿತ ನೀರು ಪೂರೈಸಲಾಗುತ್ತಿದೆ   

ಬೆಳಗಾವಿ: ಸಮರ್ಪಕ ನಿರ್ವಹಣೆಯ ಕೊರತೆ ಹಾಗೂ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮವಾಗಿ ನಗರದಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಇದನ್ನು ಸೇವಿಸುವವರಿಗೆ ಆರೋಗ್ಯದ ತೊಂದರೆಗಳು ಉಂಟಾಗುವ ಆತಂಕ ಎದುರಾಗಿದೆ.

ಮಣ್ಣು, ಮರಳು ಮಿಶ್ರಿತ ಕಲುಷಿತ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಮುಂಗಾರು ಮಳೆ ವಿಳಂಬವಾಗಿದ್ದರಿಂದ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಹೀಗಾಗಿ, ನೀರಿನ ಪೂರೈಕೆ ಸಮರ್ಪಕವಾಗಿ ನಡೆಯುತ್ತಿಲ್ಲ. ಆಗೊಮ್ಮೆ, ಈಗೊಮ್ಮೆ ಬಿಡಲಾಗುವ ನೀರಿನಲ್ಲೂ ಮಣ್ಣಿನ ಕಣಗಳ ಕಾರುಬಾರು. ಸೇವನೆಗೆ ಯೋಗ್ಯವಲ್ಲದ ನೀರನ್ನು ಸರಬರಾಜು ಮಾಡುವ ಮೂಲಕ ಜನರಿಗೆ ರೋಗರುಜಿನಗಳು ಹರಡುವಂತಾಗಲು ಮಂಡಳಿಯೇ ಕಾರಣವಾಗುತ್ತಿದೆ. ಹಲವು ದಿನಗಳಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಸುಧಾರಣೆಗೆ ಕ್ರಮ ಕೈಗೊಂಡಿಲ್ಲ.

ಸೇವನೆಗೆ ಯೋಗ್ಯವಾಗಿಲ್ಲ:ನಗರಕ್ಕೆ ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯ ಹಾಗೂ ತಾಲ್ಲೂಕಿನ ರಕ್ಕಸಕೊಪ್ಪದಲ್ಲಿರುವ ಜಲಾಶಯದಿಂದ ನೀರನ್ನು ಪಂಪ್‌ ಮಾಡಿ ಶುದ್ಧೀಕರಿಸಿ ಮನೆಗಳಿಗೆ ಪೂರೈಸಲಾಗುತ್ತದೆ. 58 ವಾರ್ಡ್‌ಗಳ ಪೈಕಿ 10 ವಾರ್ಡ್‌ಗಳಲ್ಲಿ 24x7 ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದೆ. ಇಲ್ಲಿನ ಬಹುತೇಕ ಪ್ರದೇಶಗಳಿಗೆ ರಕ್ಕಸಕೊಪ್ಪ ಜಲಾಶಯದ ನೀರು ಆಧಾರವಾಗಿದೆ. ಅಲ್ಲಿ ದೊರೆಯುತ್ತಿರುವ ನೀರನ್ನು ಶುದ್ಧೀಕರಿಸಿದೇ ಹಾಗೆಯೇ ಹರಿಸಲಾಗುತ್ತಿದೆಯೇ ಎನ್ನುವ ಅನುಮಾನ ಬರುವ ರೀತಿಯಲ್ಲಿ ನೀರಿನ ‘ಬಣ್ಣ’ವಿರುತ್ತದೆ. ಪಾತ್ರೆ ಅಥವಾ ಬಕೆಟ್‌ನಲ್ಲಿ ನೀರನ್ನು ಸಂಗ್ರಹಿಸಿದರೆ ತಳದಲ್ಲಿ ಮಣ್ಣಿನ ಕಣಗಳು ಇರುತ್ತವೆ. ಶುದ್ಧೀಕರಣ ಪ್ರಕ್ರಿಯೆಯಲ್ಲಿ ಮಂಡಳಿಯು ನಿರ್ಲಕ್ಷ್ಯ ವಹಿಸಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ADVERTISEMENT

ನೀರಿನ ‘ಬಣ್ಣ’ ನೋಡಿದರೆ ಹಾಗೂ ‘ವಾಸನೆ’ ಗ್ರಹಿಸಿದರೆ ಸೇವಿಸುವುದಕ್ಕೆ ಮಸನ್ಸಾಗುವುದಿಲ್ಲ. ಕಾಯಿಸಿ ಆರಿಸಿ ಸೇವಿಸುವುದಕ್ಕೂ ಮನಸ್ಸಾಗದ ರೀತಿಯಲ್ಲಿ ಕಲುಷಿತವಾಗಿರುವ ನೀರು ಪೂರೈಸಲಾಗುತ್ತಿದೆ. ಕೆಲವೊಮ್ಮೆ ಬಟ್ಟೆ ಹಾಗೂ ಪಾತ್ರೆ ತೊಳೆಯುವುದಕ್ಕೂ ಬಳಸಲಾಗದಂತಹ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇದರಿಂದಾಗಿ, ಬಹುತೇಕರು ಶುದ್ಧೀಕರಿಸಿದ ನೀರಿನ ಕ್ಯಾನ್‌ಗಳನ್ನು ಅನಿವಾರ್ಯವಾಗಿ ತರಿಸಿಕೊಳ್ಳುತ್ತಿದ್ದಾರೆ. ಕ್ಯಾನೊಂದಕ್ಕೆ ₹ 50ರಿಂದ 70ರವರೆಗೆ ಇದೆ. ಅತ್ತ ನೀರಿನ ತೆರಿಗೆಯನ್ನೂ ಕಟ್ಟಬೇಕು; ಇತ್ತ ಕುಡಿಯುವ ನೀರನ್ನು ಖರೀದಿಸಬೇಕಾದ ಸ್ಥಿತಿ ನಾಗರಿಕರದ್ದಾಗಿದೆ. ಸಮಸ್ಯೆ ‍ಪರಿಹರಿಸಲು ಅಧಿಕಾರಿಗಳು ಮುಂದಾಗದಿರುವುದು, ಸಾರ್ವಜನಿಕರಿಗೆ ಎಚ್ಚರಿಕೆ ನೀಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಅದನ್ನು ಕುಡಿಯಲು ಮನಸ್ಸಾಗುವುದಿಲ್ಲ:‘ನಮ್ಮ ಬೀದಿಯಲ್ಲಿ ಈಗ ದಿನವಿಡೀ ನೀರು ಬರುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ, ಆಗಾಗ ಪೂರೈಸುತ್ತಿರುವ ನೀರು ಕೂಡ ಕಲುಷಿತವಾಗಿರುತ್ತದೆ. ಅದನ್ನು ಕುಡಿಯುವುದಕ್ಕೆ ಮಸನ್ಸಾಗುವುದಿಲ್ಲ. ಹೀಗಾಗಿ, ನೀರಿನ ಕ್ಯಾನ್‌ಗಳ ಮೊರೆ ಹೋಗಿದ್ದೇವೆ. ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಶುದ್ಧ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು’ ಎಂದು ಶಾಹೂನಗರದ ನಿವಾಸಿ ಮಂಜುಳಾ ‍ಪಾಟೀಲ ಒತ್ತಾಯಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್‌ ವಿ.ಎಲ್. ಚಂದ್ರಪ್ಪ, ‘ರಕ್ಕಸಕೊಪ್ಪ ಜಲಾಶಯದಿಂದ ನೀರು ಪೂರೈಸಲಾಗುತ್ತಿರುವ ಪ್ರದೇಶಗಳಲ್ಲಿ ಹೀಗಾಗುತ್ತಿರುವುದು ಗಮನಕ್ಕೆ ಬಂದಿದೆ. ಮಳೆ ಕೊರತೆಯಿಂದ ರಕ್ಕಸಕೊಪ್ಪ ಜಲಾಶಯದ ನೀರು ಬಹುತೇಕ ಖಾಲಿಯಾಗಿತ್ತು. ಡೆಡ್‌ಸ್ಟೋರೇಜ್‌ನ ನೀರಿಗೆ ಹೊಸದಾಗಿ ಮಳೆ ನೀರು ಸೇರ್ಪಡೆಯಾಗಿ, ಕಲುಷಿತಗೊಂಡಿದೆ. ಸಮಸ್ಯೆ ಪರಿಹರಿಸಿ, ಶುದ್ಧ ನೀರು ಪೂರೈಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.