ADVERTISEMENT

‘ಗುತ್ತಿಗೆ ಕಾರ್ಮಿಕರಿಗೆ ಸೇವಾ ಭದ್ರತೆ ಒದಗಿಸಿ’

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 11:37 IST
Last Updated 14 ಡಿಸೆಂಬರ್ 2018, 11:37 IST
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿದ್ಯುತ್‌ ಗುತ್ತಿಗೆ ನೌಕರರು ಶುಕ್ರವಾರ ಸುವರ್ಣ ವಿಧಾನಸೌಧ ಬಳಿ ಪ್ರತಿಭಟನೆ ನಡೆಸಿದರು
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿದ್ಯುತ್‌ ಗುತ್ತಿಗೆ ನೌಕರರು ಶುಕ್ರವಾರ ಸುವರ್ಣ ವಿಧಾನಸೌಧ ಬಳಿ ಪ್ರತಿಭಟನೆ ನಡೆಸಿದರು   

ಬೆಳಗಾವಿ: ವಿದ್ಯುತ್‌ ಗುತ್ತಿಗೆ ಕಾರ್ಮಿಕರಿಗೆ ಸೇವಾ ಭದ್ರತೆ ಒದಗಿಸಬೇಕು ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಆಗ್ರಹಿಸಿ ಕೆಪಿಟಿಸಿಎಲ್ ವಿದ್ಯುತ್ ವಿತರಣಾ ಗುತ್ತಿಗೆ ಕಾರ್ಮಿಕರ ಸಂಘ ಮತ್ತು ರಾಜ್ಯ ವಿದ್ಯುತ್‌ ಸರಬರಾಜು ಕಂಪನಿಗಳ ಗುತ್ತಿಗೆ ನೌಕರರ ಸಂಘದವರು ಎಐಯುಟಿಯುಸಿ ನೇತೃತ್ವದಲ್ಲಿ ಶುಕ್ರವಾರ ತಾಲ್ಲೂಕಿನ ಸುವರ್ಣ ವಿಧಾನಸೌಧ ಬಳಿಯ ಸುವರ್ಣ ಗಾರ್ಡನ್‌ನಲ್ಲಿ ಪ್ರತಿಭಟನೆ ನಡೆಸಿದರು.

‘ನಾವು ಜೆಇ, ಶಿಫ್ಟ್‌ ಆಪರೇಟರ್‌ಗಳು ಹಾಗೂ ಸಹಾಯಕರಾಗಿ 10–15 ವರ್ಷಗಳಿಂದ ದುಡಿಯುತ್ತಿದ್ದೇವೆ. ಕೆಲಸಕ್ಕೆ ಬೇಕಾದ ವಿದ್ಯಾರ್ಹತೆ, ತಾಂತ್ರಿಕ ನೈಪುಣ್ಯತೆ ಹೊಂದಿದ್ದರೂ, ಹಲವು ವರ್ಷಗಳಿಂದ ದುಡಿಯುತ್ತಿದ್ದರು ಕೂಡ ಅತ್ಯಂತ ಕಡಿಮೆ ವೇತನ ಪಡೆಯುತ್ತಿದ್ದೇವೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಕಡಿಮೆ ಸಂಬಳದಲ್ಲಿ ಜೀವನ ನಡೆಸುವುದು ಕಷ್ಟಸಾಧ್ಯವಾಗಿದೆ. ಇದರಿಂದ ನಮ್ಮ ಕುಟುಂಬಗಳು ತೊಂದರೆಗೆ ಒಳಗಾಗಿವೆ. ಹೀಗಾಗಿ, ನಮ್ಮ ಕೆಲಸಕ್ಕೆ ಅನುಗುಣವಾಗಿ ವೇತನ ಪರಿಷ್ಕರಿಸಬೇಕು’ ಎಂದು ಆಗ್ರಹಿಸಿದರು.

‘ಕೆಲವು ಜಿಲ್ಲೆಗಳಲ್ಲಿ ಗುತ್ತಿಗೆದಾರರು ಕನಿಷ್ಠ ವೇತನ, ಇಎಸ್‌ಐ, ಪಿಎಫ್‌ ನೀಡದೇ ವಂಚಿಸುತ್ತಿದ್ದಾರೆ. ಗುತ್ತಿಗೆ ನೌಕರರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಾರೆ. ಕೆಲಸದಿಂದ ವಜಾಗೊಳಿಸಿ ಬೀದಿಪಾಲು ಮಾಡುತ್ತಿದ್ದಾರೆ. ಇಂಥ ಗುತ್ತಿಗೆದಾರರ ವಿರುದ್ಧ ನಿರ್ದಿಷ್ಟ ದೂರುಗಳನ್ನು ನೀಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.

ADVERTISEMENT

‘ಮೃತರಾದ ನೌಕರರ ಕುಟುಂಬಗಳಿಗೆ ₹ 10 ಲಕ್ಷ ಪರಿಹಾರ ನೀಡಬೇಕು. ನಿವೃತ್ತಿಯಾಗುವವರೆಗೆ ಉದ್ಯೋಗ ಭದ್ರತೆ ಒದಗಿಸಬೇಕು. ಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕು. ಹೊಸ ನೇಮಕಾತಿ ಮಾಡಿಕೊಳ್ಳುವಾಗ ಶೇ 50ರಷ್ಟು ಹುದ್ದೆಗಳನ್ನು ಗುತ್ತಿಗೆ ನೌಕರರಿಗೆ ಮೀಸಲಿಟ್ಟು, ವಯೋಮಿತಿ ಹಾಗೂ ಇತರ ನಿಬಂಧನೆಗಳನ್ನು ಸಡಿಲಗೊಳಿಸಬೇಕು. ತೆಲಂಗಾಣ ಸರ್ಕಾರದ ಮಾದರಿಯಲ್ಲಿ ನಮ್ಮನ್ನು ಕಾಯಂಗೊಳಿಸಬೇಕು. ಕಾರ್ಮಿಕರಿಗೆ ಸುರಕ್ಷಾ ಪರಿಕರಗಳನ್ನು ಒದಗಿಸಬೇಕು’ ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಕೆ. ಸೋಮಶೇಖರ್‌ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.