ADVERTISEMENT

ನಾಳೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಘಟಿಕೋತ್ಸವ

38,512 ವಿದ್ಯಾರ್ಥಿಗಳಿಗೆ ಪದವಿ, 5,909 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ: ಸಿ.ಎಂ. ತ್ಯಾಗರಾಜ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2024, 14:41 IST
Last Updated 2 ಡಿಸೆಂಬರ್ 2024, 14:41 IST
ಸಿ.ಎಂ. ತ್ಯಾಗರಾಜ
ಸಿ.ಎಂ. ತ್ಯಾಗರಾಜ   

ಬೆಳಗಾವಿ: ‘ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಡಿ.3ರಂದು ಬೆಳಿಗ್ಗೆ 11ಕ್ಕೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ (ಆರ್‌ಸಿಯು) 12ನೇ ಘಟಿಕೋತ್ಸವ ನಡೆಯಲಿದೆ. 38,512 ವಿದ್ಯಾರ್ಥಿಗಳು ಪದವಿ, 5,909 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದುಕೊಳ್ಳಲು ಅರ್ಹರಾಗಿದ್ದಾರೆ’ ಎಂದು ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಹೇಳಿದರು.

ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಅಧ್ಯಕ್ಷತೆ ವಹಿಸುವರು. ಅತಿಥಿಯಾಗಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಆಗಮಿಸುವರು. ಮಂಗಳೂರಿನ ವಿಶ್ವಸಂಸ್ಥೆಯ ಸಲಹೆಗಾರ, ವಿಜ್ಞಾನಿ ಇಡ್ಯಾ ಕರುಣಾಸಾಗರ ಘಟಿಕೋತ್ಸವ ಭಾಷಣ ಮಾಡುವರು’ ಎಂದರು.

ಮೂವರಿಗೆ ‘ಡಾಕ್ಟರ್‌ ಆಫ್‌ ಲೆಟರ್ಸ್‌’: ‘ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮೂವರು ಗಣ್ಯರಿಗೆ ಈ ಬಾರಿ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಾಗುತ್ತಿದೆ. ಕಲಾ ಕ್ಷೇತ್ರದಲ್ಲಿ ಪದ್ಮಶ್ರೀ ಪುರಸ್ಕೃತ ಕಲಾವಿದ ಪಂಡಿತ ಬಾಳೇಶ ಭಜಂತ್ರಿ, ಉದ್ಯಮಶೀಲತೆ ಮತ್ತು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಉದ್ಯಮಿ ಗೋಪಾಲ ಜಿನಗೌಡ ಹಾಗೂ ನಾಗರಿಕ ಸೇವೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ನಿವೃತ್ತ ಐಪಿಎಸ್‌ ಅಧಿಕಾರಿ ಗೋಪಾಲ ಹೊಸೂರ ಅವರಿಗೆ ‘ಡಾಕ್ಟರ್‌ ಆಫ್‌ ಲೆಟರ್ಸ್‌’ ಪ್ರದಾನ ಮಾಡಲಾಗುವುದು’ ಎಂದು ಅವರು ಹೇಳಿದರು.

ADVERTISEMENT

11 ಚಿನ್ನದ ಪದಕ: ‘ಈ ಬಾರಿಯ ಘಟಿಕೋತ್ಸವದಲ್ಲಿ 11 ಚಿನ್ನದ ಪದಕ ನೀಡಲಾಗುತ್ತಿದೆ. ಎಂ.ಎ ಕನ್ನಡದಲ್ಲಿ ರ್‍ಯಾಂಕ್‌ ಗಳಿಸಿದ ಮತ್ತು ವಿಷಯವಾರು ಹೆಚ್ಚಿನ ಅಂಕ ಪಡೆದ ಮಹೇಶ್ವರಿ ತೇಗೂರ ಎರಡು ಚಿನ್ನದ ಪದಕ ಗಳಿಸಿದ್ದಾರೆ. ಬಿ.ಕಾಂ ನಲ್ಲಿ ವಿನಾಯಕ ತೇಲಿ, ಬಿ.ಎಸ್ಸಿಯಲ್ಲಿ ಕುಮಾರೇಶ ಕಾತರಕಿ, ಎಂ.ಎ ಸಮಾಜಶಾಸ್ತ್ರದಲ್ಲಿ ಐಶ್ವರ್ಯಾ ಪಾಟೀಲ, ಎಂಬಿಎದಲ್ಲಿ ಪೂರ್ಣಿಮಾ ದೇಸಾಯಿ, ಎಂ.ಎಸ್ಸಿ ಗಣಿತದಲ್ಲಿ ಶಿವಕುಮಾರ ಸರದಾರ ಹಾಗೂ ವಿಷಯವಾರು ಹೆಚ್ಚಿನ ಅಂಕ ಗಳಿಸಿದ ವಿನಯ ಘೂಳಪ್ಪನವರ, ಸುಜಾತಾ ಕೇಸ್ತಿ, ನಿವೇದಿತಾ ಕಾಟಕರ, ಸಂಗೀತಾ ಬಸಗೌಡನವರ ಚಿನ್ನದ ಪದಕ ಗಳಿಸಿದ್ದಾರೆ’ ಎಂದರು.  

‘ವ್ಯಾಪ್ತಿ ಹಾಗೂ ಗಾತ್ರದಲ್ಲಿ ರಾಜ್ಯದಲ್ಲೇ ದೊಡ್ಡದಾಗಿರುವ ಆರ್‌ಸಿಯು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿಕೊಳ್ಳುತ್ತ ಸಾಗಿದೆ. ನ್ಯಾಕ್‌ನಿಂದ ‘ಬಿ+’ ಮಾನ್ಯತೆ ಪಡೆದುಕೊಂಡಿದೆ. ಇ–ಆಡಳಿತ ವ್ಯವಸ್ಥೆ ಜಾರಿಯಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ಇದರ ವ್ಯಾಪ್ತಿಯಲ್ಲಿ 361 ಪದವಿ ಕಾಲೇಜುಗಳಿದ್ದು, 1.72 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿಜಯಪುರದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯವನ್ನೂ ಹೊಂದಿದೆ’ ಎಂದರು. 

‘ಹಿರೇಬಾಗೇವಾಡಿಯ ಮಲ್ಲಪ್ಪಜ್ಜನ ಗುಡ್ಡದ ಬಳಿ 126 ಎಕರೆ, 27 ಗುಂಟೆ ಜಾಗದಲ್ಲಿ ಆರ್‌ಸಿಯು ಹೊಸ ಕ್ಯಾಂಪಸ್‌ ನಿರ್ಮಾಣವಾಗುತ್ತಿದೆ. ಆಡಳಿತ ಮತ್ತು ಶೈಕ್ಷಣಿಕ ವಿಭಾಗದ ಕಟ್ಟಡಗಳ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿದೆ’ ಎಂದು ಹೇಳಿದರು.

‘ವಿಶ್ವವಿದ್ಯಾಲಯದಲ್ಲಿ ಬೋಧಕರ ಕೊರತೆ ಬಹಳಷ್ಟಿದೆ. ಆದರೆ, ವಿದ್ಯಾರ್ಥಿಗಳ ಕಲಿಕೆಗೆ ತೊಂದರೆ ಆಗಬಾರದೆಂದು ಅತಿಥಿ ಉಪನ್ಯಾಸಕರ ಸೇವೆ ಬಳಸಿಕೊಳ್ಳುತ್ತಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕುಲಸಚಿವ ಸಂತೋಷ ಕಾಮಗೌಡ, ಮೌಲ್ಯಮಾಪನ ಕುಲಸಚಿವ ಪ್ರೊ.ರವೀಂದ್ರನಾಥ ಕದಂ, ಹಣಕಾಸು ಅಧಿಕಾರಿ ಎಂ.ಎ. ಸಪ್ನಾ ಇದ್ದರು.

ಪದವೀಧರರ ಮಾಹಿತಿ

123 ಪಿಎಚ್‌.ಡಿ ಪಡೆದವರು

17317 ಕಲಾ ವಿಭಾಗದ ಪದವೀಧರರು

14092 ವಾಣಿಜ್ಯ ವಿಭಾಗದವರು

4179 ಶಿಕ್ಷಣದಲ್ಲಿ ಪದವಿ ಪಡೆದವರು

8676 ವಿಜ್ಞಾನ ಪದವೀಧರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.