ADVERTISEMENT

ಮಾಧ್ಯಮದವರು ಬಂದರೆಂದು ನಡೆಯಿತು ‘ಡ್ರೈ ರನ್’!

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 12:55 IST
Last Updated 8 ಜನವರಿ 2021, 12:55 IST
ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ಸ್ವತಃ ಮುಂದೆ ನಿಂತು ಕೋವಿಡ್ ಅಣಕು ಕಾರ್ಯಾಚರಣೆಗೆ ವ್ಯವಸ್ಥೆ ಮಾಡಿಸಿದರುಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ಸ್ವತಃ ಮುಂದೆ ನಿಂತು ಕೋವಿಡ್ ಅಣಕು ಕಾರ್ಯಾಚರಣೆಗೆ ವ್ಯವಸ್ಥೆ ಮಾಡಿಸಿದರುಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್–19 ಲಸಿಕೆ ಅಣಕು ಕಾರ್ಯಾಚರಣೆಯು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳು ಬಂದ ಮೇಲೆ ನಡೆಯಿತು.

ಕಾರ್ಯಾಚರಣೆಯು ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯ ಏಳು ಕಡೆಗಳಲ್ಲಿ ನಡೆಯುಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದರು. ಅದರಂತೆ ವರದಿ ಮಾಡಲು ಮಾಧ್ಯಮ ಪ್ರತಿನಿಧಿಗಳು ಜಿಲ್ಲಾಸ್ಪತ್ರೆಗೆ ಬಂದಿದ್ದರು. ಆದರೆ, ಅಲ್ಲಿದ್ದ ಸಿಬ್ಬಂದಿಯು ‘ಇವರೇಕೆ ಇಲ್ಲಿಗೆ ಬಂದಿದ್ದಾರೆ’ ಎಂಬಂತೆ ಅಚ್ಚರಿಯಿಂದ ನೋಡುತ್ತಾ ತಮ್ಮ ಕಾರ್ಯದಲ್ಲಿ ಮಗ್ನವಾಗಿದ್ದರು. ಕೋವಿಡ್ ಅಣಕು ಕಾರ್ಯಾಚರಣೆ ನಡೆಸುವ ಬಗ್ಗೆ ಅವರಿಗೆ ಮಾಹಿತಿಯೇ ಇರಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ, ‘ಹಾಗೇನೂ ನಮಗೆ ಸೂಚನೆ ಇಲ್ಲವಲ್ಲಾ?’ ಎಂದು ಕೇಳಿದರು. ಆಗ, ಅಚ್ಚರಿಗೊಳ್ಳುವ ಸರದಿ ಪತ್ರಕರ್ತರದಾಗಿತ್ತು.

ಕೆಲ ಸಮಯದ ನಂತರ ವಿಷಯ ತಿಳಿದು ಆಸ್ಪತ್ರೆಗೆ ಬಂದ ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ಹಾಗೂ ಆರ್‌ಸಿಎಚ್‌ ಡಾ.ಐ.ಪಿ. ಗಡಾದ, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಸಿಬ್ಬಂದಿಯನ್ನು ವಿಚಾರಿಸಿದಾಗ, ಅವರಿಗೆ ಬಿಮ್ಸ್ ಅಧಿಕಾರಿಗಳಿಂದ ಮಾಹಿತಿ ಬಂದಿಲ್ಲದಿರುವುದು ತಿಳಿದುಬಂತು. ಪೂರ್ವಸಿದ್ಧತೆ ನಡೆದಿರಲಿಲ್ಲವಾಗಿದ್ದಕ್ಕೆ ಅಧಿಕಾರಿಗಳು ಮುಜುಗರಕ್ಕೆ ಒಳಗಾದರು.

ADVERTISEMENT

ಬಳಿಕ, ಅಧಿಕಾರಿಗಳೇ ಖಾಲಿ ಕೊಠಡಿಯೊಂದರ ಬಾಗಿಲು ತೆಗೆಸಿ, ಮುಂದೆ ನಿಂತು ಸಿದ್ಧತೆ ಮಾಡಿಸಿದರು. ಸಿಬ್ಬಂದಿ ತರಾತುರಿಯಲ್ಲಿ ಸಜ್ಜುಗೊಳಿಸಿದರು. ಕುರ್ಚಿ–ಮೇಜು ಮೊದಲಾದವುಗಳನ್ನು ಹಾಕಿ ವ್ಯವಸ್ಥೆ ಮಾಡಿದರು. ನಂತರ, ಕೆಲವು ಕೊರೊನಾ ಸೇನಾನಿಗಳಿಗೆ ಕೋವಿಡ್ ಅಣಕು ಕಾರ್ಯಾಚರಣೆ ನಡೆಸಿ, ಪ್ರಕ್ರಿಯೆಯನ್ನು ದಾಖಲಿಸಿಕೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.