ADVERTISEMENT

ಬೆಳೆ ವಿಮೆ ಪರಿಹಾರ: ಗ್ರಾಹಕ ವೇದಿಕೆಗೆ ರೈತರ ಮೊರೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 12:17 IST
Last Updated 4 ಜೂನ್ 2019, 12:17 IST

ಬೆಳಗಾವಿ: ಸವದತ್ತಿ ತಾಲ್ಲೂಕು ಕರೀಕಟ್ಟಿ ಗ್ರಾಮದ ರೈತರು 2017–18ನೇ ಸಾಲಿನ ಬೆಳೆ ವಿಮೆ ಪರಿಹಾರಕ್ಕಾಗಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಕದ ತಟ್ಟಿದ್ದಾರೆ.

ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಅವರಿಗೆ ಪರಿಹಾರ ಸಿಗದಿರುವುದು ಇದಕ್ಕೆ ಕಾರಣ.

ಯೋಜನೆಯ ಅನ್ವಯ ಯಾವ ಬೆಳೆಗಳು ಮತ್ತು ಕೃಷಿ ಪ್ರದೇಶಗಳು ವಿಮೆಗೆ ಒಳಪಡುತ್ತವೆ ಎನ್ನುವುದನ್ನು ಹವಾಮಾನ, ಕಂದಾಯ, ಅಂಕಿ– ಸಂಖ್ಯೆ ಹಾಗೂ ಕೃಷಿ ಇಲಾಖೆಗಳು ಸಮೀಕ್ಷೆ ಮಾಡಿ ನಿರ್ಧರಿಸುತ್ತವೆ. ಆ ರೀತಿ ಯೋಜನೆಗೆ ಒಳಪಟ್ಟ ಜಮೀನುಗಳ ರೈತರು ತಮ್ಮ ಪಹಣಿ ಪತ್ರಿಕೆ, ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌ ಮೊದಲಾದವುಗಳನ್ನು ನೀಡಿ ಬ್ಯಾಂಕಿನವರಿಗೆ ಸಲ್ಲಿಸಿದ್ದರು. ಇದನ್ನು ಆಧರಿಸಿ ಅವರಿಗೆ ಪರಿಹಾರ ದೊರೆಯಬೇಕಿತ್ತು.

ADVERTISEMENT

ಕರೀಕಟ್ಟಿ ವ್ಯಾಪ್ತಿಯ ಕೃಷಿ ಜಮೀನುಗಳು ‘ಒಣ ಬೇಸಾಯ’ದ (ಮಳೆಯಾಶ್ರಿತ) ಜಮೀನುಗಳು ಎಂದು ಸರ್ಕಾರಿ ದಾಖಲೆಗಳೇ ಹೇಳುತ್ತವೆ. ಆದರೆ, ರೈತರ ಅರ್ಜಿಗಳನ್ನು ಕಂಪ್ಯೂಟರ್‌ನಲ್ಲಿ ದಾಖಲಿಸುವ ಹೊಣೆಗಾರಿಕೆ ಹೊಂದಿದ್ದ ಬ್ಯಾಂಕ್‌ಗಳು ಮತ್ತು ರೈತರ ವಿವರಗಳನ್ನು ಸರಿಯಾಗಿ ಪಡೆದು ಅವರ ಹಕ್ಕಿನ ಪರಿಹಾರದ ಹಣ ಕೊಡಬೇಕಿದ್ದ ವಿಮಾ ಕಂಪನಿಗಳು ಮಾಡಿದ ಯಡವಟ್ಟಿನಿಂದ ರೈತರು ಸೌಲಭ್ಯದಿಂದ ವಂಚಿತವಾಗಿದ್ದಾರೆ. ಅವರ ಜಮೀನುಗಳನ್ನು ‘ನೀರಾವರಿ’ ಎಂದು ತಪ್ಪಾಗಿ ದಾಖಲಿಸಿದ್ದರಿಂದ ರೈತರಿಗೆ ವಿಮೆಯ ಲಾಭ ಸಿಕ್ಕಿಲ್ಲ. ಪರಿಹಾರಕ್ಕಾಗಿ ಬ್ಯಾಂಕು, ವಿಮಾ ಕಂಪನಿ ಮತ್ತು ಕೃಷಿ ಇಲಾಖೆಗೆ ಮಾಡಿದ ಮನವಿಗೆ ಸ್ಪಂದನೆ ಸಿಗದ ಕಾರಣ 30 ರೈತರು ವಕೀಲ ಸುನೀಲ ಸಾಣಿಕೊಪ್‌ ಮೂಲಕ ಕಾನೂನಿನ ಮೊರೆ ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.