ADVERTISEMENT

ಹಿಂಗಾರು ಬೆಳೆ: ‘ಮೊಬೈಲ್ ಆ್ಯಪ್‌’ನಲ್ಲಿ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 15:50 IST
Last Updated 16 ಡಿಸೆಂಬರ್ 2020, 15:50 IST

ಬೆಳಗಾವಿ: ಹಿಂಗಾರು ಹಂಗಾಮಿನಲ್ಲಿ ರೈತರು ತಮ್ಮ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರಸಹಿತ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಮೂಲಕ ದಾಖಲಿಸುವ ಯೋಜನೆಗೆ ಚಾಲನೆ ನೀಡಲಾಗಿದೆ.

ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಹಾಗೂ ಸಾಂಖ್ಯಿಕ ಇಲಾಖೆಗಳ ಸಹಯೋಗದಲ್ಲಿ ಈ ಕಾರ್ಯ ನಡೆಯುತ್ತಿದೆ. ಸಂಗ್ರಹವಾದ ಬೆಳೆಗಳ ಮಾಹಿತಿಯನ್ನು ತಾಲ್ಲೂಕು ಆಡಳಿತ ಪರಿಶೀಲಿಸಲಿದೆ.

ವಿಧಾನ: ರೈತರು ಸ್ಮಾರ್ಟ್‌ ಮೊಬೈಲ್‌ ಫೋನ್‌ ಬಳಸಿ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ ರೈತರ ಪರವಾಗಿ ಅವರ ಕುಟುಂಬದ ಸದಸ್ಯರು, ಸಂಬಂಧಿಕರ ಸಹಾಯ ಪಡೆಯಬಹುದು. ಮೊಬೈಲ್ ಮಾಹಿತಿ ಹೊಂದಿರುವ ಕಂದಾಯ/ ಕೃಷಿ ಇಲಾಖೆ ವತಿಯಿಂದ ನಿಯೋಜನೆಗೊಂಡ ಗ್ರಾಮದ ಯುವಕರ (ಖಾಸಗಿ ನಿವಾಸಿ/ಪಿ.ಆರ್) ಸಹಾಯದೂಂದಿಗೆ ರೈತರು ತಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಪಡೆಯುವ ಮೂಲಕ ತಮ್ಮ ಜಮೀನುಗಳಲ್ಲಿ (ಹಿಸ್ಸಾವಾರು) ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ದಾಖಲಿಸಬಹುದಾಗಿದೆ.

ADVERTISEMENT

ರೈತರು ನಿಗದಿತ ಸಮಯದಲ್ಲಿ ಮಾಹಿತಿ ಅಪ್‌ಲೋಡ್‌ ಮಾಡದಿದ್ದಲ್ಲಿ ಪ್ರತಿ ಗ್ರಾಮಕ್ಕೆ ನಿಯೋಜನೆಗೊಂಡ ಬೆಳೆ ಸಮೀಕ್ಷಕರು (ಖಾಸಗಿ ನಿವಾಸಿ/ಪಿ.ಆರ್) ಹೊಲಗಳಿಗೆ ಭೇಟಿ ನೀಡಿ ಆ್ಯಪ್‌ನಲ್ಲಿ ಮಾಹಿತಿ ಹಾಕುತ್ತಾರೆ.

ಉದ್ದೇಶ: ಸಂಗ್ರಹವಾಗುವ ಮಾಹಿತಿಯನ್ನು ಸಾಂಖ್ಯಿಕ ಇಲಾಖೆಯು ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆ ವಿಸ್ತೀರ್ಣ ಏಣಿಕಾ ಕಾರ್ಯದಲ್ಲಿ ಬಳಸಲು ಅನುಮತಿಸಲಾಗಿದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ಪರಿಹಾರಕ್ಕೆ ವರದಿ ತಯಾರಿಸಲು ಬಳಸಲಾಗುವುದು. ಬೆಳೆ ವಿಮೆ ಯೋಜನೆಯಲ್ಲಿ ತಾಲ್ಲೂಕುವಾರು ಬೆಳೆ ಪರಿಶೀಲಿಸಲು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಇದನ್ನು ಆಧಾರವಾಗಿ ಇಟ್ಟುಕೊಳ್ಳಲಾಗುವುದು. ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನಕ್ಕಾಗಿ ಉಪಯೋಗಿಸಲಾಗುವುದು. ಹೀಗಾಗಿ, ರೈತರು ಸಮೀಕ್ಷೆಯಲ್ಲಿ ತಪ್ಪದೆ ಪಾಲ್ಗೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.